ಮಂಗಳವಾರ, ಜೂನ್ 15, 2021
27 °C
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ್ದರಿಂದ ಸೋಂಕು ನಿಯಂತ್ರಿಸುವುದು ಈಗ ಸವಾಲು

ಹೊಸಪೇಟೆ: ವಲಸಿಗರಿಂದ ಹಳ್ಳಿಗಳು ಅಪಾಯದಂಚಿಗೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೆಲಸ ಅರಸಿಕೊಂಡು ವಲಸೆ ಹೋಗಿದ್ದವರು ಪುನಃ ಅವರ ಊರುಗಳತ್ತ ವಾಪಸಾಗಿರುವುದರಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಹೆಚ್ಚಿನ ಹಳ್ಳಿಗಳು ಈಗ ಅಪಾಯದ ವಲಯಗಳಾಗಿ ಮಾರ್ಪಟ್ಟಿದ್ದು, ಹಳ್ಳಿಗಾಡಿನ ಜನರನ್ನು ಆತಂಕಕ್ಕೀಡು ಮಾಡಿದೆ.

ಜಿಲ್ಲೆಯಲ್ಲಿನ ಕಂದಾಯ ಗ್ರಾಮಗಳ ಜತೆಗೆ ತಾಂಡಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ವರ್ಷ ಕೆಲಸ ಅರಸಿಕೊಂಡು ನೂರಾರು ಸಂಖ್ಯೆಯಲ್ಲಿ ಜನ ಬೇರೆಡೆ ಗುಳೆ ಹೋಗುತ್ತಾರೆ. ಕೋವಿಡ್‌ ನಿಷೇಧಾಜ್ಞೆಗೂ ಮುನ್ನ ಬಹುತೇಕರು ಮರಳಿರುವುದರಿಂದ ಅವರ ಹುಟ್ಟೂರುಗಳು ಈಗ ಅತಿ ಹೆಚ್ಚಿನ ಸೋಂಕಿತರ ಪ್ರದೇಶಗಳಾಗಿ ಬದಲಾಗಿವೆ.

ಜಿಲ್ಲೆಯ ಜನ ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ, ಮಂಗಳೂರು, ಕಾರವಾರ, ಗೋವಾಕ್ಕೆ ಹೆಚ್ಚಾಗಿ ವಲಸೆ ಹೋಗುತ್ತಾರೆ. ಹೀಗೆ ಹೋಗಿ ಬಂದವರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ. ಗ್ರಾಮಸ್ಥರ ವಾದವೂ ಇದೇ ಆಗಿದೆ.

ವಲಸಿಗರು ಅವರ ಸ್ವಂತ ಊರುಗಳಿಗೆ ಹಿಂತಿರುಗುವ ಸೂಚನೆ ಸಿಕ್ಕಾಗಲೇ ಅವರನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ, ಹಾಗೆ ಮಾಡದೇ ಇರುವುದರಿಂದ ಪರಿಸ್ಥಿತಿ ಕೈಮೀರುವ ಹಂತಕ್ಕೆ ಹೋಗಿದೆ ಎನ್ನುತ್ತಾರೆ ಗ್ರಾಮಸ್ಥರು. ಅಲ್ಲಿನ ಪರಿಸ್ಥಿತಿ ನಿಯಂತ್ರಿಸುವುದೇ ಆರೋಗ್ಯ ಇಲಾಖೆಗೆ ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಜಿಲ್ಲೆಯ ಕೆಲವೊಂದು ಹಳ್ಳಿಗಳು ಸಂಪೂರ್ಣ ಸೋಂಕಿಗೆ ಒಳಗಾಗಿವೆ.

ಹೊಸಪೇಟೆ ತಾಲ್ಲೂಕಿನ ಗಾದಗಿನೂರು, ಪಾಪಿನಾಯಕನಹಳ್ಳಿ, ಕಮಲಾಪುರ, ಹಗರಿಬೊಮ್ಮನಹಳ್ಳಿಯ ತಂಬ್ರಹಳ್ಳಿ, ಹೂವಿನಹಡಗಲಿಯ ಕೆ. ಅಯ್ಯನಹಳ್ಳಿ, ಶಿವಪುರ ತಾಂಡಾ, ದಾಸನಹಳ್ಳಿ, ಮೈಲಾರ, ಮಾನ್ಯರಮಾಸಲವಾಡ, ಕೊಟ್ಟೂರು ತಾಲ್ಲೂಕಿನ ಅಲಬೂರು, ಕೋಗಳಿ, ಕೂಡ್ಲಿಗಿ ತಾಲ್ಲೂಕಿನ ಶ್ರೀಕಂಠಪುರ ತಾಂಡಾ, ಚಿಕ್ಕದೇವನಹಳ್ಳಿ ತಾಂಡಾ, ಬಂಡೆ ಬಸಾಪುರ ತಾಂಡಾ, ಚಿಕ್ಕಜೋಗಿಹಳ್ಳಿ ತಾಂಡಾ, ಹರಪನಹಳ್ಳಿ ತಾಲ್ಲೂಕಿನ ಅಲವಾಗಲು, ಬಾಗಲಿ, ಕೂಲಹಳ್ಳಿ, ಅರಸೀಕೆರೆ, ಉಚ್ಚಂಗಿದುರ್ಗ, ತೆಲಗಿ ಹಾಗೂ ಬಂಡ್ರಿ ಗ್ರಾಮಗಳಲ್ಲಿ ವ್ಯಾಪಕವಾಗಿ ಸೋಂಕು ಹರಡಿದೆ. ಇನ್ನುಳಿದ ಗ್ರಾಮಗಳಲ್ಲೂ ನಿಧಾನವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

‘ಹೋದ ವರ್ಷ ಕೊರೊನಾ ಕಾಣಿಸಿಕೊಂಡಾಗ ವಲಸಿಗರನ್ನು ಪರೀಕ್ಷಿಸಿ ಗ್ರಾಮಕ್ಕೆ ಬಿಡಲಾಗಿತ್ತು. ಈ ವರ್ಷ ಅದ್ಯಾವುದೂ ಆಗಲಿಲ್ಲ. ಅದರ ಪರಿಣಾಮ ಈಗ ಇಡೀ ಊರು ತುಂಬ ಸೋಂಕು ಹರಡಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ’ ಎಂದು ತಂಬ್ರಹಳ್ಳಿಯ ನಿವಾಸಿ ಬಸವರಾಜ, ಹುಲುಗಪ್ಪ ಹೇಳಿದರು.

‘ಈಗ ಅಧಿಕಾರಿಗಳು ಗ್ರಾಮಗಳಿಗೆ ಬಂದು ಸಭೆ ನಡೆಸುತ್ತಿದ್ದಾರೆ. ಈ ಕೆಲಸ ಮುಂಚಿತವಾಗಿಯೇ ಮಾಡಿದರೆ ನಮ್ಮೂರಿನಲ್ಲಿ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ಯಾರು, ಯಾವಾಗ ಸಾಯುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಅಷ್ಟರಮಟ್ಟಿಗೆ ಸೋಂಕು ಇಡೀ ಊರಿಗೆ ಹರಡಿದೆ’ ಎಂದು ಪಾಪಿನಾಯಕನಹಳ್ಳಿಯ ವೆಂಕಟೇಶ ಗೋಳು ತೋಡಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು