ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: 71ರ ಹರೆಯದ ಯೋಗ ಸಾಧಕಿ ಉಮಾ ವಿಶ್ವನಾಥ್‌

Published 8 ಮಾರ್ಚ್ 2024, 5:40 IST
Last Updated 8 ಮಾರ್ಚ್ 2024, 5:40 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅವರ ವಯಸ್ಸು 71. ಯೋಗ ಮಾಡುವಾಗ ಅವರ ಲವಲವಿಕೆ ಕಂಡರೆ 17ರ ಯುವತಿಯರೂ ಸೋಲಬೇಕು. ಒಂದಿಷ್ಟು ಆಯಾಸ ಕಾಣುವುದಿಲ್ಲ. ದೇಹ ಬಾಗುವ ಪರಿ ಕಂಡಾಗ ಅಚ್ಚರಿಯ ಹೊರತು ಬೇರೆ ಭಾವವೇ ಇಲ್ಲ.

ಇಂತಹ ವಿಶಿಷ್ಟ ಯೋಗ ಸಾಧಕಿ ಹೊಸಪೇಟೆಯ ಉಮಾ ವಿಶ್ವನಾಥ್‌. ಕಳೆದ 35 ವರ್ಷಗಳಿಂದ ರಾಜ್ಯದ ಎಲ್ಲೆಡೆ ಯೋಗ ಶಿಕ್ಷಣ ನೀಡುತ್ತಾ ಬಂದಿರುವ ಅವರ ಶಿಷ್ಯರ ಸಂಖ್ಯೆ ಲಕ್ಷಕ್ಕಿಂತಲೂ ಅಧಿಕ.

2009ರಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ಅವರ ಸಂಪರ್ಕಕ್ಕೆ ಬಂದ ಬಳಿಕ ಉಮಾ ಅವರ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆಯಾಯಿತು. ಪತಂಜಲಿ ಯೋಗ ಸಮಿತಿಯ ರಾಜ್ಯ ಮಹಿಳಾ ಪ್ರಭಾರಿಯಾಗಿ ಐದು ವರ್ಷ ಸೇವೆ ಸಲ್ಲಿಸಿದ ಅವರು, ರಾಜ್ಯದ ಉದ್ದಗಲಕ್ಕೂ ಓಡಾಡಿ ಯೋಗ ಶಿಕ್ಷಣದ ಮಹತ್ವ ತಿಳಿಸಿದರು. 2010ರಲ್ಲಿ ಎರಡು ಸಾವಿರ ಮಹಿಳೆಯರನ್ನು ಹರಿದ್ವಾರಕ್ಕೆ ಕರೆದೊಯ್ದು ಬಾಬಾ ರಾಮ್‌ದೇವ್ ಅವರ ಸಮ್ಮುಖದಲ್ಲಿ ಯೋಗ ಶಿಕ್ಷಣ ಕೊಡಿಸಿದ ಹಿರಿಮೆ ಉಮಾ ಅವರದು. ಹತ್ತಕ್ಕೂ ಅಧಿಕ ಬಾರಿ ಹರಿದ್ವಾರಕ್ಕೆ ತೆರಳಿ ರಾಮ್‌ದೇವ್ ಅವರ ನಿಕಟ ಬಳಗದಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಹತ್ತು ವರ್ಷದ ಹಿಂದೆ ನಡೆದ ಮೊದಲ ವಿಶ್ವ ಯೋಗ ದಿನದಂದು ಸಿಡ್ನಿಯಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯಲ್ಲಿ ಯೋಗ ಶಿಕ್ಷಣ ನೀಡಿದ ಹಿರಿಮೆ ಉಮಾ ಅವರದ್ದು.

ಹೋರಾಟಕ್ಕೂ ಸೈ: ಲೋಕಪಾಲ ಮಸೂದೆ ಜಾರಿಗೆ ತರಬೇಕು ಎಂದು ಅಣ್ಣಾಹಜಾರೆ ಅವರು ದೆಹಲಿಯಲ್ಲಿ ಚಳವಳಿ ಆರಂಭಿಸಿದಾಗ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು ಉಮಾ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಹಿತ ಹಲವರ ಸಂಪರ್ಕ ಆಗಲೇ ಸಾಧಿಸಿದ್ದರು. 

ಸಂಡೂರು ತಾಲ್ಲೂಕು ಚೋರ್ನೂರ್‌ನಲ್ಲಿ ಜನಿಸಿದ ಉಮಾ ಅವರು, ವಿವಾಹದ ಬಳಿಕ ನೆಲೆಸಿದ್ದು ಹೊಸಪೇಟೆಯಲ್ಲಿ. ಅವರ ಪತಿ ವಿಶ್ವನಾಥ್‌ ಅವರು ಸಿಂಡಿಕೇಟ್ ಬ್ಯಾಂಕ್‌ ಪ್ರಬಂಧಕರಾಗಿ ನಿವೃತ್ತರು. ಅವರೂ ಯೋಗ ಸಾಧಕರೇ. ಇಬ್ಬರು ಪುತ್ರರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದು, ಆಗಾಗ ಅಲ್ಲಿಗೆ ಹೋಗಿ ಬರುತ್ತಿದ್ದಾರೆ.

ಉಮಾ ವಿಶ್ವನಾಥ್‌
ಉಮಾ ವಿಶ್ವನಾಥ್‌
ಯೋಗ ಎಲ್ಲರ ಜೀವನವನ್ನೂ ಸುಧಾರಿಸಲು ಇರುವ ಸುಲಭ ಸಾಧನ. ನಮ್ಮ ಆರೋಗ್ಯ ಸುಸ್ಥಿತಿಯಲ್ಲಿಡಲು ಯೋಗ ಸಹಾಯಕ. ಪ್ರತಿದಿನ ಯೋಗ ಪ್ರಾಣಾಯಾಮ ಮಾಡಲು ಮರೆಯಬೇಡಿ
- ಉಮಾ ವಿಶ್ವನಾಥ್ ಯೋಗ ಸಾಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT