ಸೋಮವಾರ, ಆಗಸ್ಟ್ 15, 2022
27 °C

ಹೊಸಪೇಟೆ: ಕೋವಿಡ್‌ನಿಂದ ತೀವ್ರ ಸಂಕಷ್ಟ, ಮನೆಗೆ ಆಸರೆಯಾದ ಯುವಕರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಆ ಮನೆಯ ಯುವಕರೇ ಈಗ ಆಸರೆಯಾಗಿದ್ದಾರೆ.

ಬಹುತೇಕರ ಕೆಲಸವನ್ನು ಕೋವಿಡ್‌ ಕಿತ್ತುಕೊಂಡಿದೆ. ಅನೇಕ ಬಡ, ಕೆಳ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಯ ಪರಿಸ್ಥಿತಿಯನ್ನು ನೋಡಲಾಗದೆ ಆ ಮನೆಯ ಯುವಕರೇ ಈಗ ತಾತ್ಕಾಲಿಕ ಕೆಲಸದ ಮೊರೆ ಹೋಗಿ, ಕುಟುಂಬವನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ.

ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳು, ರಂಗಭೂಮಿ, ಸಂಗೀತ ಕಲಾವಿದರು ಸೇರಿದಂತೆ ಇತರೆ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರು ಜೊಮ್ಯಾಟೊ, ಸ್ವಿಗ್ಗಿಯಂತಹ ಕಂಪನಿ ಸೇರಿಕೊಂಡಿದ್ದಾರೆ. ಮನೆ-ಮನೆಗೆ ಉಪಾಹಾರ, ಆಹಾರವನ್ನು ಹೋಂ ಡೆಲಿವರಿ ಮಾಡುವ ಕಾಯಕ ಮಾಡುತ್ತಿದ್ದಾರೆ.

ನಗರದಲ್ಲಿ ಸದ್ಯ ಜೊಮ್ಯಾಟೊ ಒಂದರಲ್ಲೇ 200ಕ್ಕೂ ಅಧಿಕ ಯುವಕರು ಕೆಲಸ ನಿರ್ವಹಿಸುತ್ತಿದ್ದಾರೆ. ₹1000 ಠೇವಣಿ ಇರಿಸಿ, ಸ್ವಂತ ಬೈಕ್‌, ಅದರ ಪರವಾನಗಿ ಪತ್ರ, ಮೊಬೈಲ್‌ ಹೊಂದಿದರೆ  ಕೆಲಸ ಸೇರಬಹುದು. ಕನಿಷ್ಠ ಮೂರು ಗಂಟೆ ಕೆಲಸ ನಿರ್ವಹಿಸುವುದು ಕಡ್ಡಾಯ. ಇದು ಸುಲಭ ಸಾಧ್ಯವಾಗಿರುವುದರಿಂದ ಅನೇಕ ಯುವಕರು ಅವರಿಗೆ ಅನುಕೂಲವಾದ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಜೊಮ್ಯಾಟೊದಲ್ಲಿ 30–40 ಯುವಕರು ಕೆಲಸ ಮಾಡುತ್ತಿದ್ದರು. ಈಗ ಅದು ನಾಲ್ಕರಿಂದ ಐದು ಪಟ್ಟು ಏರಿಕೆಯಾಗಿದೆ. ಲಾಕ್‌ಡೌನ್‌ ಕಾರಣ ಹೋಟೆಲ್‌ನಿಂದ ಪಾರ್ಸೆಲ್‌ಗಷ್ಟೇ ಅವಕಾಶ ಕಲ್ಪಿಸಿರುವುದು ಕೂಡ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಯುವಕರ ಪೂರ್ವಾಪರ, ದಾಖಲೆ ಪರಿಶೀಲಿಸಿ ಕೆಲಸ ನೀಡಲಾಗುತ್ತಿದೆ. ಅಲ್ಲದೇ ಪ್ರತಿ ವಾರ ಅವರ ಕೆಲಸಕ್ಕೆ ತಕ್ಕಂತೆ ವೇತನ ಪಾವತಿಸಲಾಗುತ್ತಿದೆ.

ಮತ್ತೆ ಕೆಲವರು ರೇಷನ್‌ ಮಳಿಗೆ, ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದವರು ಈ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕೆಲಸದ ಅವಧಿ ಕಡಿಮೆ, ಹೆಚ್ಚಿನ ವೇತನ ಕೈಸೇರುತ್ತಿರುವುದು ಕೂಡ ಪ್ರಮುಖ ಕಾರಣವಾಗಿದೆ.

‘ನಾನು ಅನೇಕ ವರ್ಷಗಳಿಂದ ಜೆಎಸ್‌ಡಬ್ಲ್ಯೂನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದೆ. ಹೋದ ತಿಂಗಳು ಅಲ್ಲಿ ಕೆಲಸ ಬಿಟ್ಟಿರುವೆ. ಅಲ್ಲಿ ನನಗೆ ಮಾಸಿಕ ₹15,000 ಸಂಬಳ ಸಿಗುತ್ತಿತ್ತು. ಖರ್ಚು ವೆಚ್ಚ ಕಳೆದು ₹12,000 ಕೈಸೇರುತ್ತಿತ್ತು. ಇಡೀ ದಿನ ಅಲ್ಲೇ ಕಳೆದು ಹೋಗುತ್ತಿತ್ತು. ಈಗ ಜೊಮ್ಯಾಟೊ ಸೇರಿರುವೆ. ದಿನದಲ್ಲಿ ಆರೇಳು ಗಂಟೆ ಕೆಲಸ ಮಾಡುತ್ತಿರುವೆ. ಈ ಹಿಂದಿಗಿಂತ ಸ್ವಲ್ಪ ಹೆಚ್ಚೇ ಸಂಬಳ ಬರುತ್ತಿದೆ’ ಎಂದು ಬಸವರಾಜ ಖುಷಿಯಿಂದ ಹೇಳಿದರು.

‘ನಾನು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬಂದಿರುವವನು. ಆದರೆ, ಸದ್ಯ ನನ್ನ ಕ್ಷೇತ್ರದಲ್ಲಿ ಏನೂ ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜೊಮ್ಯಾಟೊ ಸೇರಿರುವೆ. ದಿನಕ್ಕೆ 80–100 ಮನೆಗಳಿಗೆ ಆಹಾರ ತಲುಪಿಸುತ್ತೇನೆ. ತಿಂಗಳಿಗೆ ಕನಿಷ್ಠ ₹12ರಿಂದ ₹13 ಸಾವಿರದಷ್ಟು ಹಣ ಕೈಸೇರುತ್ತಿದೆ. ಈ ಕೆಲಸ ಸಿಕ್ಕಿರುವುದರಿಂದ ಮನೆ ನಡೆಸಲು ಸಾಧ್ಯವಾಗುತ್ತಿದೆ’ ಎಂದು ರಿಯಾಜ್‌ ಸಿಹಿಮೊಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು