ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ: ಮಳೆ–ಬೆಳೆಗಾಗಿ ಗಂಗಾಪೂಜೆ

Last Updated 16 ಜುಲೈ 2019, 15:43 IST
ಅಕ್ಷರ ಗಾತ್ರ

ಕೊಲ್ಹಾರ (ಮಹಾಬಲೇಶ್ವರ): ಕೃಷ್ಣಾ ನದಿ ತುಂಬಿರುವ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ಕಡ್ಲಿಗರ ಹುಣ್ಣಿಮೆಯ ದಿನವಾದ ಮಂಗಳವಾರ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ದಂಪತಿ, ರೈತರೊಂದಿಗೆ ತೆರಳಿ ಕೃಷ್ಣೆಯ ಉಗಮ ಸ್ಥಾನಮಹಾಬಲೇಶ್ವರದಲ್ಲಿ ಗಂಗಾಪೂಜೆ ಮಾಡಿ, ಬಾಗಿನಅರ್ಪಿಸಿದರು.

ಕೃಷ್ಣಾ ನದಿಯು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಕೃಷ್ಣಾ ಕೊಳ್ಳದ ಜನರ ಕಷ್ಟ ಕಾರ್ಪಣ್ಯಗಳನ್ನು ತೊಳೆದು, ರೈತರ ಬದುಕು ಬಂಗಾರವಾಗಲಿ ಎಂಬ ಸಂಕಲ್ಪದೊಂದಿಗೆ ಸತತ 12 ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನಮಹಾಬಲೇಶ್ವರದಲ್ಲಿ ಬೆಳ್ಳುಬ್ಬಿ ಕುಟುಂಬ ಗಂಗಾಪೂಜೆ ಮಾಡಿ, ಭಾಗಿನ ಅರ್ಪಿಸುವ ಸಂಪ್ರದಾಯ ನಡೆಸುತ್ತಿದೆ. ಈ ವರ್ಷ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ವಿಶೇಷ ಪೂಜೆಯನ್ನು ಇದೇ ವೇಳೆ ನಡೆಸಲಾಯಿತು.

ಪೂಜೆ ಸಲ್ಲಿಸದ ನಂತರ ಮಾತನಾಡಿದ ಕೆ.ಬೆಳ್ಳುಬ್ಬಿ, ‘ಹಲವು ವರ್ಷಗಳಿಂದ ಕಡ್ಲಿಗರ ಹುಣ್ಣಿಮೆಯ ದಿನ ಕೃಷ್ಣಾನದಿ ದಂಡೆಯ ಜನರು ಹೊಳೆ ಗಂಗವ್ವನ ಪೂಜೆ ಆಚರಿಸುತ್ತಾರೆ. ಅದೇ ರೀತಿ ಉತ್ತಮ ಮಳೆ–ಬೆಳೆಗಾಗಿ ರೈತರೊಂದಿಗೆ ಕುಟುಂಬ ಸಮೇತ ಆಗಮಿಸಿ ಕೃಷ್ಣೆಯ ಉಗಮ ಸ್ಥಾನದಲ್ಲಿ ಗಂಗಾಪೂಜೆ, ಬಾಗಿನ ಅರ್ಪಿಸಿ ಪ್ರಾರ್ಥಿಸಲಾಗುತ್ತಿದೆ. ಹೋದ ವರ್ಷ ಮಹಾರಾಷ್ಟ್ರದಲ್ಲಿ ಮರಾಠಿ ಮೀಸಲಾತಿ ಹೋರಾಟ ನಡೆಯುತ್ತಿರುವ ಹಿನ್ನೆಲೆ, ಘಟಪ್ರಭೆ–ಕೃಷ್ಣಾ ನದಿ ಸಂಗಮವಾಗುವ ಚಿಕ್ಕಸಂಗಮದಲ್ಲಿ ಬಾಗಿನ ಅರ್ಪಿಸಲಾಗಿತ್ತು. ಪ್ರತಿ ವರ್ಷ ಪೂಜೆಯ ನಂತರ ಆಲಮಟ್ಟಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಪೂಜೆಗೂ ಮೊದಲೇ ಭರ್ತಿಯಾಗಿರುವುದು ಸಂತೋಷವಾಗುತ್ತಿದೆ’ ಎಂದು ಹೇಳಿದರು.

ಮನುಗೂಳಿಯ ಶಿವಯ್ಯ ಲಟಕಿಮಠ ಸ್ವಾಮೀಜಿ ವೇದ-ಮಂತ್ರಗಳ ಪಠಣದೊಂದಿಗೆ ಮಹಾಬಲೇಶ್ವರನಿಗೆ ಪೂಜೆ ಕೈಂಕರ್ಯ ನೆರವೇರಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಐ.ಆರ್.ರೊಳ್ಳಿ, ಸುರೇಶ ಗರಸಂಗಿ, ಮುತ್ತು ಗೌರಿ, ಆಕಾಶ ಬಿರಾದಾರ, ಶ್ರೀಶೈಲ ನಾಗೋಡ, ಚಂದ್ರಶೇಖರ ಬೆಳ್ಳುಬ್ಬಿ, ಬಿ.ಜಿ.ಬಿಸ್ಟಗೊಂಡ, ಆನಂದ ಬಿಸ್ಟಗೊಂಡ, ರಮೇಶ ಕುಂಬಾರ ಇದ್ದರು.

ಕೃಷ್ಣೆಗೆ ರೈತರಿಂದ ಬಾಗಿನ
ಆಲಮಟ್ಟಿ:
ಭರ್ತಿಯತ್ತ ಸಾಗುತ್ತಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ತುಂಬಿದ ಕೃಷ್ಣೆಗೆ ಮಂಗಳವಾರ ಬಳಬಟ್ಟಿ ಗ್ರಾಮದ ರೈತರು ಬಾಗಿನ ಅರ್ಪಿಸಿದರು.

ಪ್ರತೀ ವರ್ಷ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಕಡ್ಲಿಗರ ಹುಣ್ಣಿಮೆಯಂದು ಜರುಗುತ್ತಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಳಬಟ್ಟಿ ಗ್ರಾಮದ ನೂರಾರು ಜನ ಪಾಲ್ಗೊಳ್ಳುತ್ತಿದ್ದರು.

ಈ ಬಾರಿ ಸಮಿತಿ ಬಾಗಿನ ಕಾರ್ಯಕ್ರಮ ಮುಂದೂಡಿದೆ. ಆದರೆ ಪ್ರತಿ ವರ್ಷವೂ ನಮ್ಮ ತುತ್ತಿನ ಚೀಲ ತುಂಬಿಸುವ ಕೃಷ್ಣೆಗೆ ಗಂಗಾಪೂಜೆ ಸಲ್ಲಿಸುವುದು ನಮ್ಮ ಕರ್ತವ್ಯ, ಸಮಿತಿ ರದ್ದುಪಡಿಸಿದರೂ ನಾವೆಲ್ಲ ಸೇರಿ ಬಾಗಿನ ಅರ್ಪಿಸೋಣ ಎಂದು ರೈತರು ನಿರ್ಧರಿಸಿ ಮಂಗಳವಾರ ಆಲಮಟ್ಟಿಯ ಚಂದ್ರಮ್ಮಾ ದೇವಸ್ಥಾನದ ಬಳಿ ಬಂದು ಕೃಷ್ಣೆಯ ಹಿನ್ನೀರಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಗ್ರಾಮದ ಬಸಪ್ಪ ತೋಳಮಟ್ಟಿ ಮಾತನಾಡಿದರು. ಮಹಾಂತಯ್ಯ ಹಿರೇಮಠ, ಗ್ರಾಮದ ಬಸಪ್ಪ ತೋಳಮಟ್ಟಿ, ಆರ್.ಎಸ್. ಉಕ್ಕಲಿ, ಕರಿಯಪ್ಪ ಆಸಂಗಿ, ಬಸವರಾಜ ಹೊಸಗೌಡರ, ನಿಂಗಪ್ಪ ವಾಲಿಕಾರ, ಮಲ್ಲಿಕಾರ್ಜುನಯ್ಯ ಮಠ, ಶ್ರೀಶೈಲ ಕಲಾದಗಿ, ರಮೇಶ ಹೂಗಾರ, ವಿಠ್ಠಲ ಶಿರೂರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT