ಮಂಗಳವಾರ, ಫೆಬ್ರವರಿ 18, 2020
16 °C
ಸಂಸ್ಥೆ ಅಧ್ಯಕ್ಷರ ಸಭೆಯಲ್ಲಿ ಗ್ರಾಹಕರ ಆರೋಪ; ಹಣ ಕೊಡದಿದ್ದರೆ ಪ್ರತಿಭಟನೆ

ನಿರಾಣಿ ಸೌಹಾರ್ದ ಹೆಸರಿನಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಬಸವನಬಾಗೇವಾಡಿ ಪಟ್ಟಣದಲ್ಲಿ ನಿರಾಣಿ ಅವರ ಹೆಸರಿನಲ್ಲಿ ಅನಿಲ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಆರಂಭಗೊಂಡಿದ್ದ ಎಸ್‌ಎಂಎನ್‌ ಸೌಹಾರ್ದ ಸಹಕಾರಿ ವಂಚನೆ ಮಾಡಿದೆ’ ಎಂದು ಗ್ರಾಹಕರು ಆರೋಪಿಸಿದರು.

ಪಟ್ಟಣದಲ್ಲಿ ಬುಧವಾರ ಸಂಸ್ಥೆಯ ಅಧ್ಯಕ್ಷರ ಸಮ್ಮುಖದಲ್ಲಿ ಜರುಗಿದ ಗ್ರಾಹಕರ ಸಭೆಯಲ್ಲಿ ಈ ಆರೋಪ ಕೇಳಿ ಬಂದಿತು.

‘ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ವ್ಯವಸ್ಥಾಪಕರು ಗ್ರಾಹಕರ ಹಣವನ್ನು ದುರಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ ಗ್ರಾಹಕರು ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ವಂಚನೆಗೊಳಗಾದ ಗ್ರಾಹಕರು ಡಿ.4 ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳವ ಉದ್ದೇಶದಿಂದ ಪಟ್ಟಣದಲ್ಲಿ ಗ್ರಾಹಕರ ಸಭೆ ಕರೆಯಲಾಗಿತ್ತು’ ಎನ್ನಲಾಗಿದೆ.

ಎಸ್‌ಎಂಎನ್‌ ಸೌಹಾರ್ದ ಸಹಕಾರಿಯ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಪ್ರದೀಪ ಮುಂಜಾನಿ ಮಾತನಾಡಿ, ‘ನಾನು ಯಾವುದೇ ರೀತಿಯಾಗಿ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಎಲ್ಲ ಹಣವನ್ನು ಮುಖ್ಯ ಶಾಖೆಯ ಖಾತೆಗೆ ಪಾವತಿಸಿದ್ದೇನೆ. ಸಂಸ್ಥೆಯಲ್ಲಿ ಹಣ ಇಲ್ಲದ ಕಾರಣ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ’ ಎಂದರು.

ಗ್ರಾಹಕ ಅನೀಲ ದುಂಬಾಳಿ ಮಾತನಾಡಿ, ‘ವಿಜಯಪುರದಲ್ಲಿ ನಾಲ್ಕು ಎಕರೆ ಜಮೀನನ್ನು ಯಾರ ಹಣದಲ್ಲಿ ಖರೀದಿ ಮಾಡಿದ್ದೀರಿ, ಮೊದಲು ಸಂಸ್ಥೆಯ ಹೆಸರಿನಲ್ಲಿತ್ತು. ಈಗ ಪ್ರದೀಪ ಮುಂಜಾನಿ ಅವರ ಹೆಸರಿನಲ್ಲಿದೆ, ಇದು ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ, ‘ಸಂಸ್ಥೆಯ ಉಪಾಧ್ಯಕ್ಷ ನಾಯ್ಕರ್ ಅವರು ನನಗೆ ಕೊಟ್ಟಿದ್ದಾರೆ. ಇದು, ನನ್ನ ಅವರ ವೈಯಕ್ತಿಕ ವ್ಯವಹಾರ. ನಾಯ್ಕರ್ ಅವರು ಸೂಚಿಸಿದರೆ ನಾನು ಜಮೀನು ಬಿಟ್ಟು ಕೊಡುತ್ತೇನೆ’ ಎಂದಾಗ ಮಾತಿನ ಚಕಮಕಿ ನಡೆಯಿತು.

ಮಧ್ಯ ಪ್ರವೇಶಿಸಿದ ರೈತ ಮುಖಂಡ ಅರವಿಂದ ಕುಲಕರ್ಣಿ ಗ್ರಾಹಕರನ್ನು ಸಮಾಧಾನ ಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಅನಿಲ ದೇಶಪಾಂಡೆ ಮಾತನಾಡಿ, ‘ಸ್ವಲ್ಪ ಕಾಲಾವಕಾಶ ನೀಡಬೇಕು. ಡಿ.20 ರಂದು ಬ್ಯಾಂಕ್ ಅನ್ನು ಪುನಃ ಆರಂಭಿಸಿ ₹1 ಕೋಟಿ ಹಣ ಕೊಡುತ್ತೇನೆ. ನಂತರ ಎಲ್ಲ ಗ್ರಾಹಕರ ಹಣವನ್ನು ಕೊಡಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಕೆಲ ಗ್ರಾಹಕರು, ‘ಈಗಲೇ ಹಣ ಕೊಡಿ’ ಎಂದು ಒತ್ತಾಯಿಸಿದರು.

‘ಡಿ.20 ರಂದು ಸೌಹಾರ್ದ ಸಹಕಾರ ಸಂಸ್ಥೆಯನ್ನು ಆರಂಭಿಸಿ ಗ್ರಾಹಕರಿಗೆ ಹಣ ವಾಪಸು ಕೊಡದಿದ್ದರೆ ಡಿ.22 ರಂದು ಪ್ರತಿಭಟನೆ ಮಾಡುತ್ತೇವೆ’ ಎಂದು ವಂಚನೆಗೊಳಗಾದ ಗ್ರಾಹಕರು ಘೋಷಿಸಿದರು.

ಸಭೆಯಲ್ಲಿ ಸಂಗನಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಬಸವರಾಜ ಚಿಕ್ಕೊಂಡ, ಅಶೋಕ ಗುಳೇದ, ಅನಿಲ ಮುಳವಾಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು