ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

ಗಮನ ಸೆಳೆದ ಮಕ್ಕಳ ವೇಷಭೂಷಣ, ಕೋಲಾಟ
Published 8 ಫೆಬ್ರುವರಿ 2024, 13:08 IST
Last Updated 8 ಫೆಬ್ರುವರಿ 2024, 13:08 IST
ಅಕ್ಷರ ಗಾತ್ರ

ಬಸವನಬಾಗೆವಾಡಿ: ಕರ್ನಾಟಕ ಸಂಭ್ರಮ 50ರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಜ್ಯೋತಿ ರಥ ಯಾತ್ರೆಗೆ ಗುರುವಾರ ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆ, ಸಂಘಟನೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭವ್ಯ ಸ್ವಾಗತ ಕೋರಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಭುವನೇಶ್ವರಿದೇವಿ ಕನ್ನಡ ರಥದ ಮೆರವಣಿಗೆಯು ತೆಲಗಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ಭವನ ಮಾರ್ಗದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿತು. ನಂತರ ರಥಯಾತ್ರೆಯು ತಾಲ್ಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿ‌ ಗ್ರಾಮಕ್ಕೆ ತೆರಳಿತು.

ಚೆನ್ನಮ್ಮ ವೃತ್ತದಲ್ಲಿ ಮಾತನಾಡಿದ ತಹಶೀಲ್ದಾರ್ ವೈ.ಎಸ್.ಸೋಮನಕಟ್ಟಿ, ‘ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಪರಿಣಾಮಕಾರಿಯಾಗಿ ನಾಡಿನ ಎಲ್ಲ ಜನತೆ ಮಾತನಾಡುವಂತಾಗಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ‘ಕನ್ನಡ ಸಂಸ್ಕೃತಿ, ಸಾಹಿತ್ಯ ಈ ನಾಡನ್ನು ಶ್ರೀಮಂತಗೊಳಿಸಿದೆ. ನಾಡಿನ ಏಳು ಕೋಟಿ ಜನರು ಕನ್ನಡ ಬರೆಯುವ ಹಾಗೂ ಮಾತನಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕು’ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಎನ್.ಚಿತ್ತರಗಿ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಯುವರಾಜ ಹನಗಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ ಬಸವರಾಜ ಸೋಮಪೂರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ, ಶಿವು ಮಡಕೇಶ್ವರ, ಕೋಟ್ರೇಶ ಹಡಗಲಿ, ಬಸವರಾಜ ಮೇಟಿ, ಬಿ.ಬಿ.ಚಕ್ರಮನಿ, ಬಸವರಾಜ ಚಿಂಚೊಳಿ, ಮಹಾದೇವಿ ಬಿರಾದಾರ, ಶಾಂತಾ ಚೌರ ಇದ್ದರು.

ಕರಡಿ ಮಜಲು, ಕೋಲಾಟ, ಶಾಲಾ ಮಕ್ಕಳ ಲೇಜಿಮ್ ವಿವಿಧ ವಾದ್ಯಗಳು ಸೇರಿದಂತೆ ಮಕ್ಕಳ ವೇಷ ಭೂಷಣಗಳು ಮರವಣಿಗೆಯ ಮೆರುಗನ್ನು ಹೆಚ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT