ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಣೆಯಲ್ಲಿ ಯಶಸ್ಸು ಕಂಡ ಉದ್ಯಮಿ

ಸಾತಲಗಾಂವ ಗ್ರಾಮದ ಮಂಜುನಾಥ ಕಾಮಗೊಂಡ
Published 22 ಡಿಸೆಂಬರ್ 2023, 4:57 IST
Last Updated 22 ಡಿಸೆಂಬರ್ 2023, 4:57 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಸಾತಲಗಾಂವ ಗ್ರಾಮದ ಯುವ ಉದ್ಯಮಿಯೊಬ್ಬರು ಸಾವಯವ ಕುರಿ ಸಾಕಣೆಯಲ್ಲಿ ಯಶಸ್ಸು ಕಂಡು ವಾರ್ಷಿಕ ₹ 30 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ.

ಸಾತಲಗಾಂವ ಗ್ರಾಮದ ಮಂಜುನಾಥ ಕಾಮಗೊಂಡ ಅವರು ಗ್ರಾಮದ ತಮ್ಮ ಸ್ವಂತ ತೋಟದಲ್ಲಿ 55X100 ಮೀಟರ್‌ ಅಳತೆಯ ಕುರಿ ಶೆಡ್‌ ಅನ್ನು ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಅವರ ಸ್ನೇಹಿತರಾದ ಶ್ರೀಕಾಂತ ಅಯ್ಯಂಗಾರ ಅವರು ಮಂಜುನಾಥ ಅವರ ತೋಟಕ್ಕೆ ಆಕಸ್ಮಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ನಿಮ್ಮ ತೋಟದಲ್ಲಿ ಕುರಿ ಸಾಕಣೆ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು. ನೀವು ಮಾಡುವುದಾದರೆ ನಾನು ಸರ್ಕಾರದ ಯೋಜನೆಗಳೇನಾದರೂ ಇದ್ದರೆ ನೋಡಿ ಹೇಳುವೆ’ ಎಂದಿದ್ದರು. ಅವರ ಸಲಹೆಯ ಮೇರೆಗೆ ಮಂಜುನಾಥ ಅವರು ಕುರಿ ಸಾಕಣೆ ಮಾಡಲು ಮನಸ್ಸು ಮಾಡಿದರು.

ಮೊದಲು ಪ್ರಾಯೋಗಿಕವಾಗಿ ಚಿಕ್ಕ ಶೆಡ್ ನಿರ್ಮಿಸಿ ಅದರಲ್ಲಿ 200 ಕುರಿಗಳನ್ನು ಸಾಕಿದರು. ಅದರಿಂದ ಉತ್ತಮ ಆದಾಯ ಪಡೆದುಕೊಂಡರು. ನಂತರ ಅವರ ಸ್ನೇಹಿತರ ಸಲಹೆಯ ಮೇರೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಶೆಡ್ ನಿರ್ಮಿಸಲು ಆಸಕ್ತಿ ತೋರಿ, ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ನಂತರ ಪಶು ಇಲಾಖೆಯ ಅಧಿಕಾರಿಗಳು ಬಂದು ತೋಟವನ್ನು ಪರಿಶೀಲಿಸಿ ವರದಿ ನೀಡಿದ ನಂತರ ಕಾಮಗೊಂಡ ಅವರು ಶೆಡ್ ನಿರ್ಮಿಸಲು ಆರಂಭಿಸಿದರು. ಈಗ ಶೆಡ್ ನಿರ್ಮಾಣ ಪೂರ್ಣಗೊಂಡಿದ್ದು, ಅದರಲ್ಲಿ 520 ಕುರಿಗಳನ್ನು ಸಾಕಿದ್ದಾರೆ.

ಈ ಯೋಜನೆಯಲ್ಲಿ ಒಟ್ಟು ₹ 50 ಲಕ್ಷ ಸಬ್ಸಿಡಿಯೊಂದಿಗೆ ₹ 1 ಕೋಟಿ ಸಾಲ ನೀಡಲಾಗುತ್ತಿದೆ. ಮಂಜುನಾಥ ಕಾಮಗೊಂಡ ಅವರ ಖಾತೆಗೆ ಈಗಾಗಲೇ ₹ 25 ಲಕ್ಷ ಸಹಾಯಧನ ಜಮಾ ಆಗಿದೆ. ಬರುವ ಫೆಬ್ರುವರಿ ತಿಂಗಳ ಒಳಗೆ ಉಳಿದ ಸಬ್ಸಿಡಿ ಹಣ ಸಹ ಜಮಾ ಆಗಲಿದೆ ಎಂದು ಅವರು ತಿಳಿಸಿದರು.

ಕುಮಟಾ ಭಾಗದ ಇರ್ಫಾನ್‌ ಎಂಬುವವರು ಬಂದು ಅಚ್ಚುಕಟ್ಟಾಗಿ ಶೆಡ್ ನಿರ್ಮಿಸಿ ಕೊಟ್ಟಿದ್ದಾರೆ. ಶೆಡ್‌ನಲ್ಲಿ 520 ಕುರಿಗಳನ್ನು ಸಾಕಲಾಗಿದ್ದು, ಅವುಗಳಿಗೆ ಸ್ಥಳದಲ್ಲಿಯೇ ನೀರು ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕುರಿಗಳಿಗಾಗಿ ಒಂದು ಎಕರೆ ಹಿಪ್ಪು ನೇರಳೆ, ಎರಡು ಎಕರೆ ಕುದುರೆ ಮೆಂತೆ, 2 ಎಕರೆ ಸುಬಾಬುಲ್ಲ ಮೇವು ಬೆಳೆಯಲಾಗುತ್ತಿದೆ.

ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದ ಹಸಿ ಮೆಕ್ಕೆಜೋಳವನ್ನು ಯಂತ್ರದ ಮೂಲಕ ಕಟಾವು ಮಾಡಿ ಅದಕ್ಕೆ ಉಪ್ಪು ಹಾಗೂ ಬೆಲ್ಲದ ನೀರು ಸಿಂಪಡಿಸಿ 200 ಕೆ.ಜಿ ತೂಕ ಹಿಡಿಯುವ ಚೀಲದಲ್ಲಿ ಸಂಗ್ರಹಿಸಿಟ್ಟು ಅದರ ಬಾಯಿ ಮುಚ್ಚಿ 45 ದಿನಗಳ ಕಾಲ ಬಿಟ್ಟು ತೆಗೆದರೆ ಅದರಲ್ಲಿ ರಸಮೇವು ತಯಾರಾಗುತ್ತದೆ. ಈಗಾಗಲೇ 40 ಚೀಲದಲ್ಲಿ ರಸಮೇವು ತಯಾರಿಸಲಾಗಿದೆ. 520 ಕುರಿಗಳಿಗೆ ಒಂದು ವರ್ಷದವರೆಗೆ ಸಾಕಾಗುವಷ್ಟು ಮೇವು ಸಂಗ್ರಹವಾಗಿದೆ.

ಪ್ರತಿ ತಿಂಗಳು ಕುರಿಗಳ ಗೊಬ್ಬರದಿಂದ ₹ 30 ಸಾವಿರದಿಂದ ₹ 35 ಸಾವಿರದಷ್ಟು ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ.

ಕುರಿಗಳ ಜೊತೆಗೆ ಶೆಡ್‌ ಕೆಳಭಾಗದಲ್ಲಿ 2 ಸಾವಿರ ಕೋಳಿ ಸಾಕಣೆ ಸಹ ಮಾಡಲಾಗಿದೆ. ಕೋಳಿಗಳ ಗೊಬ್ಬರದಿಂದಲೂ ಸಹ ಪ್ರತಿ ತಿಂಗಳಿಗೆ ₹ 25 ಸಾವಿರದಿಂದ ₹ 30 ಸಾವಿರ  ಪ್ರತ್ಯೇಕ ಆದಾಯ ಬರುತ್ತಿದೆ.

ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯ ಅಡಿಯಲ್ಲಿ ಶೆಡ್‌ ನಿರ್ಮಿಸಿ ಅದರಲ್ಲಿ ಕುರಿ ಸಾಕಾಣಿಕೆ ಮಾಡಿರುವುದು.
ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯ ಅಡಿಯಲ್ಲಿ ಶೆಡ್‌ ನಿರ್ಮಿಸಿ ಅದರಲ್ಲಿ ಕುರಿ ಸಾಕಾಣಿಕೆ ಮಾಡಿರುವುದು.

ಅಮೀನ್ ಗಡ ತಳಿ, ಎಳಗ ತಳಿ, ಕೆಂಗುರಿ, ಉಣ್ಣೆ ಕುರಿ, ಉಸ್ಮನಾಬಾದ್ ಕುರಿ, ಟಗರುಗಳು ಈ ಶೆಡ್‌ನಲ್ಲಿ ಇವೆ. ನಾಟಿ ಕೋಳಿ ಹಾಗೂ ಗಿರಿರಾಜ ಕೋಳಿಗಳನ್ನು ಸಾಕಣೆ ಮಾಡಲಾಗಿದೆ. ನಾಟಿಕೋಳಿ ಹಾಗೂ ಗಿರಿರಾಜ ಕೋಳಿಯ ಮೊಟ್ಟೆ ಹಾಗೂ ಗೊಬ್ಬರ ಎರಡನ್ನೂ ಮಾರಾಟ ಮಾಡಲಾಗುತ್ತಿದೆ.

ಒಬ್ಬ ಯುವಕ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಮತ್ತು ಕೇಂದ್ರ ಸರ್ಕಾರ ಯುವಕರಿಗಾಗಿ ಮಾಡಿರುವ ಯೋಜನೆಗಳನ್ನು  ಬಳಸಿಕೊಂಡು ಹೇಗೆ ಆದಾಯ ಪಡೆದುಕೊಳ್ಳಬಹುದು ಎಂಬುದನ್ನು ಕಾಮಗೊಂಡ ಕುರಿ ಸಾಕಣೆಯಿಂದ ತೋರಿಸಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT