ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಅರಸಿ ಗ್ರಾಮೀಣರ ಗುಳೆ

ವಾರಕ್ಕೆ ಎರಡು ದಿನ ಕೆಲಸ ಸಿಕ್ಕರೆ ಪುಣ್ಯ; ಜಾಬ್‍ಕಾರ್ಡ್ ಇದ್ರು ಉಪಯೋಗವಿಲ್ಲ
Last Updated 7 ಜನವರಿ 2023, 13:25 IST
ಅಕ್ಷರ ಗಾತ್ರ

ವಿಜಯಪುರ: ‘ನಮ್ದು ಒಣ ಬೇಸಾಯ ಈ ಸಲ ಜೋಳ ಹಾಕಿದ್ವಿ, ಮಳಿ ಚಲೋ ಆಗಿಲ್ರಿ, ಮತ್ತ ಹೊಟ್ಟಿಗ ಬೇಕಲ್ರಿ ಬಿಜಾಪುರ ಬಂದಿವಿ, ಕೆಲ್ಸ ಇದ್ರ ಹೇಳ್ರಿ ಮಾಡ್ತಿವಿ’ ಎಂದು ತಿಡಗುಂದಿ ಗ್ರಾಮದ ದಾನಪ್ಪ ಗೋಗರೆದರು.

ಬುತ್ತಿ ಚೀಲ ಕೈಯಲ್ಲಿ ಹಿಡಿದುಕೊಂಡು ಕೆಲಸ ಅರಸಿ ನಗರದ ಗೋದಾವರಿ ಹೋಟೆಲ್ ಬಳಿ ಬೆಳ್ಳಂಬೆಳಿಗ್ಗೆ ನೆರೆದಿದ್ದ ನೂರಾರು ಸಂಖ್ಯೆಯ ರೈತರು, ಕಾರ್ಮಿಕರ ನಿತ್ಯದ ಗೋಳಿದು.

ವಿಜಯಪುರ ನಗರದ ಸುತ್ತಲಿನ ಗ್ರಾಮಗಳಾದ ಬಬಲೇಶ್ವರ, ಭೂತನಾಳ, ಅರಕೇರಿ, ಬರಟಗಿ, ತಿಡಗುಂದಿ, ಕನ್ನೂರು, ಮಖಣಾಪೂರ, ಹೊರ್ತಿ, ಅತ್ತಾಲಟ್ಟಿ ಸೇರಿದಂತೆ ಸುತ್ತಲಿನ ಊರುಗಳಿಂದ ಕೂಲಿ ಕಾರ್ಮಿಕರು, ರೈತರು ‘ಇವತ್ತು ಕೆಲಸ ಸಿಕ್ಕರೆ ಸಾಕು’ ಎನ್ನುವ ಮನಸ್ಥಿತಿಯಲ್ಲಿ ನಗರಕ್ಕೆ ಗುಳೆ ಬರುತ್ತಿದ್ದಾರೆ.

ಕೆಲಸಕ್ಕೆ ಕಾದು ಕುಳಿತ ಕಾರ್ಮಿಕರು:

ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕೂಲಿ, ಕೆಲಸ ಸಿಗುತ್ತವೆ. ಳಿದ ಸಮಯದಲ್ಲಿ ಗ್ರಾಮೀಣ ಜನರು ನಗರದತ್ತ ಮುಖ ಮಾಡುತ್ತಾರೆ.

‘ಕೆಲಸ ಸಿಕ್ಕರೆ ಒಪ್ಪೊತ್ತಿನ ಊಟ, ಇಲ್ಲದಿದ್ದರೆ ಉಪವಾಸದ ನಿದ್ದೆ’ ಎನ್ನುತ್ತಾ ವಿಜಯಪುರ ನಗರ ಗೋದಾವರಿ ಹೋಟೆಲ್‌, ಬಿಎಲ್‍ಡಿಇ, ಬಂಜಾರಾ ಕ್ರಾಸ್, ಸೋಲಾಪುರ ನಾಕಾ, ಸಿಂದಗಿ ಬೈಪಾಸ್‌ ಸೇರಿದಂತೆ ಮುಖ್ಯ ವೃತ್ತಗಳಲ್ಲಿ ಬೆಳ್ಳಿಗ್ಗೆ 7 ರಿಂದ ಮಧ್ಯಾಹ್ನದ ವರೆಗೆ ಪ್ರತಿದಿನ ಸಾವಿರಾರು ಕೂಲಿ ಕಾರ್ಮಿಕರು ಕಾಯುತ್ತಿರುವ ದೃಶ್ಯ ಕಾಣಸುವುದು ಸಾಮಾನ್ಯ.

ಕೆಲಸ ಯಾವುದೇ ಇರಲಿ ಜೈ:

ಮನೆ ನಿರ್ಮಾಣದ ಕೆಲಸಗಳಾದ ಇಟ್ಟಿಗೆ ಹೊರುವುದು, ಗೌಂಡಿ ಕೆಲಸ, ಮನೆಗೆ ನೀರು ಹೊಡೆಯುವುದು, ರಸ್ತೆ ಕಾಮಗಾರಿ, ಮಣ್ಣು ಹೊರುವುದು, ಖಡಿ ಎತ್ತುವ ಕೆಲಸಕ್ಕೂ ಹಿಂಜರಿಯದೆ ಹೋಗುತ್ತಾರೆ.

ಬೆಳಿಗ್ಗೆಯಿಂದ ಸಂಜೆ ವರೆಗೆ ದುಡಿದು ₹500 ರಿಂದ ₹600 ಸಂಪಾದಿಸಿ ಮನೆ ಸೇರಿಕೊಳ್ಳುತ್ತಾರೆ.

ವಾರಕ್ಕೆ 2 ಸಲಾ ಕೆಲಸ:

ಪ್ರತಿದಿನ ಬುತ್ತಿ ಕಟ್ಟಿಕೊಂಡು ಬರುವ ಕಾರ್ಮಿಕರಿಗೆ ಕೆಲವು ದಿನ ಕೆಲಸ ಸಿಕ್ಕರೆ ಇನ್ನು ಕೆಲ ದಿನ ಕೆಲಸ ಸಿಗದ ಮನೆ ಬರಿಗೈಯಲ್ಲಿ ತೆರಳುತ್ತಾರೆ. ವಾರದಲ್ಲಿ ಎರಡು ದಿನ ಕೆಲಸ ಸಿಕ್ಕರೆ ಅದೇ ಪುಣ್ಯ.

ಮಳೆಗಾಲದಲ್ಲಿ ಊರಲ್ಲೆ ಕೆಲಸ:

ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ತಮ್ಮ ಹೊಲಗಳಲ್ಲಿ ಬಿತ್ತನೆಗಳಲ್ಲಿ ತೊಡಗುತ್ತಾರೆ. ಕೃಷಿ ಕಾಯಕ ಮುಗಿಯುತ್ತಿದ್ದಂತೆ ಕುಟುಂಬ ನಿರ್ವಹಣೆಗೆ ಮಹಿಳೆಯರು ತಮ್ಮ ಊರಲ್ಲೇ ಕೆಲಸಕ್ಕೆ ಹೋದರೆ, ಪುರುಷರು ನಗರಗಳತ್ತ ಮುಖ ಮಾಡುತ್ತಾರೆ.

ಕಾರ್ಮಿಕ ಕಾರ್ಡು ಇಲ್ರಿ:

ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಲಿ ಎಂದೆ ಸರ್ಕಾರ ಉದ್ಯೋಗ ಖಾತ್ರಿ ಅಡಿ ಜಾಬ್‍ಕಾರ್ಡ್, ಕಾರ್ಮಿಕ ಕಾರ್ಡ್‍ಗಳನ್ನು ವಿತರಿಸಲು ಮುಂದಾಗಿದ್ದರೂ ಅನೇಕ ಬಡ ಕಾರ್ಮಿಕರಿಗೆ ಕಾರ್ಡ್‍ಗಳು ಮುಟ್ಟದೆ ಇರುವುದು ವಿಪರ್ಯಾಸ.

‘ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಜಾಬ್ ಕಾರ್ಡ್‍ಗಳನ್ನು ಪಡೆದುಕೊಂಡಿದ್ದರೂ ಗ್ರಾಮ ಪಂಚಾಯಿತಿಗಳಲ್ಲಿ ಭಾಳ ದಿನಾ ಕೆಲಸ ಕೊಡಲ್ರಿ, ಯಾಕ್ ಸುಮ್ಮ ವಾದ ಮಾಡೋನು ಅಂತ ಸುಮ್ಮನಾಗಿ ಸಿಟಿ ಕಡೆ ಬಂದ ಬಿಡ್ತಿವ್ರಿ’ ಎನ್ನುತ್ತಾರೆ ಚೋರಗಿ ಗ್ರಾಮದ ಚನಗೊಂಡ ಬೇನೂರ.

***

ನಮ್ಮ ಊರಾಗ ಕೆಲ್ಸಾ ಸಿಗಲ್ಲರಿ, ಹೊಲದಾಗ ಏನೂ ಬೆಳಿ ಹಾಕಿಲ್ಲ. ಮತ್ತ ಹೊಟ್ಟಿಗ ತುಂಬಾಕ ರೊಕ್ಕಾ ಬೇಕಲ್ರಿ ಅದಕ್ಕ ಬಿಜಾಪುರಕ್ಕ ಕೆಲಸ ಸಿಗುತ್ತ ಅಂತ ಬರ್ತಿವಿ.

–ಚನಗೊಂಡ ಬೇನೂರ, ಚೋರಗಿ ಗ್ರಾಮದ ನಿವಾಸಿ

***

ಕಾರ್ಮಿಕ ಕಾರ್ಡು ಮಾಡಿಸಿದ್ರು ಏನೂ ಉಪಯೋಗ ಆಗಿಲ್ಲ. ಮನೆಯ ತೊಂದರೆಗಳಿಂದಾಗಿ ಶಾಲೆ ಅರ್ದಕ್ಕೆ ಬಿಟ್ಟು ಕೆಲಸ ಮಾಡುತ್ತಿದ್ದೆನೆ. ಊರಲ್ಲಿ ಕೆಲಸ ಸಿಗದ ಕಾರಣ ವಿಜಯಪುರಕ್ಕೆ ಬರುತ್ತೇವೆ. ವಾರಕ್ಕೆ ಎರಡು ದಿನ ಕೆಲಸ ಸಿಕ್ರೆ ಅದೆ ಪುಣ್ಯ

–ಸುನೀಲ ನಾಯಕ, ಅತಾಲಟ್ಟಿ ತಾಂಡಾದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT