ಶನಿವಾರ, ಮೇ 30, 2020
27 °C
ಮುಂಗಾರು ಹಂಗಾಮಿನಲ್ಲಿ 4.80 ಲಕ್ಷ ಹೆಕ್ಟೆರ್ ಬಿತ್ತನೆ ಗುರಿ

ರಸಗೊಬ್ಬರ ಕೃತಕ ಅಭಾವ ಸೃಷ್ಠಿಸಿದರೆ ಕ್ರಮ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಸಗೊಬ್ಬರದ ಕೃತಕ ಅಭಾವ ಸೃಷ್ಠಿಸಿ ರೈತರಿಗೆ ಮೋಸ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಪರಿಕರ ಮಾರಾಟಗಾರರ ಸಭೆ ನಡೆಸಿದ ಅವರು, ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು ಹಾಗೂ ನವೀಕರಿಸಿರಬೇಕು. ನಾಮಫಲಕ, ದರಪಟ್ಟಿ, ದಾಸ್ತಾನು ಹಾಗೂ ಬಿಲ್‍ಬುಕ್‍ಗಳನ್ನು ನಿರ್ವಹಿಸಬೇಕು ಎಂದರು.

ರಸಗೊಬ್ಬರಗಳನ್ನು ಕಡ್ಡಾಯವಾಗಿ ಪಿ.ಒ.ಎಸ್ ಮಷಿನ್ ಮೂಲಕ ಮಾರಾಟ ಮಾಡಬೇಕು. ಪ್ರಿನ್ಸಿಪಲ್ ಸರ್ಟಿಫಿಕೇಟ್ ಹಾಗೂ ಒ ಫಾರ್ಮ್‌ ಇಲ್ಲದೆ ಕೃಷಿ ಪರಿಕರಗಳನ್ನು ಮಾರಾಟ ಮಾಡಬಾರದು ಎಂದು ಹೇಳಿದರು.

ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಕೃಷಿ ಪರಿಕರಗಳನ್ನು ಮಾರಾಟ ಮಾಡುವಂತಿಲ್ಲ. ಅವಧಿ ಮೀರಿದ ಮತ್ತು ಕಳಪೆ ಗುಣಮಟ್ಟದ ಪರಿಕರಗಳನ್ನು ಮಾರಾಟ ಮಾಡಬಾರದು. ಕೃಷಿ ಪರಿಕರಗಳ ಮಾರಾಟದ ಸಮಯದಲ್ಲಿ ರೈತರಿಗೆ ಕಡ್ಡಾಯವಾಗಿ ರಸೀದಿಯನ್ನು ನೀಡಬೇಕು. ಪ್ರತಿ ತಿಂಗಳು 5ರೊಳಗೆ ಕೃಷಿ ಪರಿಕರಗಳ ಮಾರಾಟದ ಮಾಹಿತಿಯನ್ನು ಕೃಷಿ ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 3.42 ಲಕ್ಷ ರೈತರು ಇದ್ದು, ಎಲ್ಲರಿಗೂ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಕಾಲದಲ್ಲಿ ಒದಗಿಸುವುದು ಕೃಷಿ ಇಲಾಖೆಯ ಕರ್ತವ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಕೃಷಿ ಪರಿಕರ ಮಾರಾಟಗಾರರ ಜವಾಬ್ದಾರಿ ಹೆಚ್ಚಿದ್ದು, ರೈತರು ಹೆಚ್ಚಿನ ಮಟ್ಟದಲ್ಲಿ ನಿಮ್ಮ ಮೇಲೆ ಅವಲಂಬಿತರಾಗಿರುವುದರಿಂದ ರೈತರು ಯಾವುದೇ ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದರು.

ಕೋವಿಡ್-19 ಹಿನ್ನೆಲೆಯಲ್ಲಿ ಮಾರಾಟಗಾರರು ಮಾಸ್ಕ್ ಜೊತೆಗೆ ಕೈಗವಸು ಹಾಕಿಕೊಂಡು ಮಾರಾಟ ಮಾಡಬೇಕು. ಮಾರಾಟ ಕೇಂದ್ರದಲ್ಲಿ ಸ್ಯಾನಿಟೈಸರ್ ಬಳಸುವಂತೆಯು ಅವರು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೊವಿಂದ ರೆಡ್ಡಿ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರೈತರು ಸಂಕಷ್ಟಕ್ಕೆ ಗುರಿಯಾಗಿರುವುದರಿಂದ ಮಾರಾಟ ಕೇಂದ್ರದವರು ರೈತರೊಂದಿಗೆ ಸಮನ್ವಯತೆಯಿಂದ ನೆರವಾಗಬೇಕು. ರೈತರಿಗೆ ಸರಿಯಾಗಿ ತಿಳಿಹೇಳುವ ಮೂಲಕ ಕೃಷಿ ಪರಿಕರಗಳನ್ನು ಮಾರಾಟ ಕೇಂದ್ರದ ಮೂಲಕ ಆಗುವಂತೆ ನೋಡಿಕೊಳ್ಳಬೇಕು ಎಂದರು.

ರೈತರಿಗೆ ಯಾವುದೇ ರೀತಿಯ ಷರತ್ತುಗಳನ್ನು ಹಾಕಿ ಖರೀದಿಗೆ ಒತ್ತಾಯಪಡಿಸಬಾರದು. ಎಂ.ಆರ್.ಪಿ ದರದಲ್ಲಿ ಕೃಷಿ ಪರಿಕರ ಮಾರಾಟಮಾಡಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಮಾತನಾಡಿ, ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರದ ಗುರಿ 4.80 ಲಕ್ಷ  ಹೆಕ್ಟೆರ್ ಹೊಂದಲಾಗಿದೆ ಎಂದರು.

ಒಟ್ಟು ರಸಗೊಬ್ಬರ ಬೇಡಿಕೆ 72 ಸಾವಿರ ಮೆಟ್ರಿಕ್ ಟನ್ ಆಗಿದೆ. ಸದ್ಯ ದಾಸ್ತಾನು ಪ್ರಮಾಣ 19 ಸಾವಿರ ಮೆಟ್ರಿಕ್ ಟನ್ ಇದ್ದು, ಜಿಲ್ಲೆಗೆ ಏಪ್ರಿಲ್‌ನಲ್ಲಿ 9900 ಮೆಟ್ರಿಕ್ ಟನ್ ಮತ್ತು ಮೇನಲ್ಲಿ 10,890 ಮೆಟ್ರಿಕ್ ಟನ್ ಸರಬರಾಜು ಆಗಲಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶ ಅಧಿಕೃತ ಮಾರಾಟಗಾರು ಒಟ್ಟು 618 ಜನ ಇರುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು