ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರಿಗಾಗಿ ಕೃಷಿ ತಂತ್ರಜ್ಞಾನದ ಆವಿಷ್ಕಾರ..!

ಭಾರತೀಯ ಸಂಸ್ಕೃತಿ ಉತ್ಸವ–5ರಲ್ಲಿ ‘ಕೃಷಿ ತರಂಗ’ ಸಂಸ್ಥೆಯಿಂದ ಪ್ರಾತ್ಯಕ್ಷಿಕೆಯ ಅನಾವರಣ
Last Updated 17 ಡಿಸೆಂಬರ್ 2018, 6:30 IST
ಅಕ್ಷರ ಗಾತ್ರ

ವಿಜಯಪುರ: ಭೂಮಿಯಲ್ಲಿ ತೇವಾಂಶದ ಕೊರತೆಯಿದೆ. ಬೆಳೆಗೆ ನೀರುಣಿಸಿ... ನೀರಿನಲ್ಲಿ ಲವಣಾಂಶ ನಿಗದಿತ ಪ್ರಮಾಣದಲ್ಲಿಲ್ಲ. ಇದಕ್ಕಾಗಿ ಅಗತ್ಯವಿರುವ ಲಘು ಪೋಷಕಾಂಶಗಳನ್ನು ಫಸಲಿಗೆ ಪೂರೈಸಿ... ಇಂದು ಮೋಡ ಕವಿದ ವಾತಾವರಣವಿರಲಿದೆ...

ಅಂಧರು ಸಹ ಕೃಷಿ ನಡೆಸಲು ಅನುಕೂಲವಾಗುವಂತೆ ಸಿಂದಗಿ ತಾಲ್ಲೂಕಿನ ಕೋರವಾರದ ಗಿರೀಶ ಭದ್ರಗೊಂಡ ಆವಿಷ್ಕಾರಗೊಳಿಸಿರುವ, ಕೃಷಿ ತಂತ್ರಜ್ಞಾನ ಆಧಾರಿತ ಯಂತ್ರಗಳು ಕನ್ನಡ ಭಾಷೆಯಲ್ಲಿ ನೀಡುವ ಸೂಚನೆಗಳಿವು.

ವಿಜಯಪುರ ತಾಲ್ಲೂಕಿನ ಕಗ್ಗೋಡದಲ್ಲಿ ಭಾರತ ವಿಕಾಸ ಸಂಗಮ ಸಂಸ್ಥೆಯಿಂದ ಇದೇ 24ರಿಂದ 31ರವರೆಗೆ ನಡೆಯಲಿರುವ ‘ಭಾರತೀಯ ಸಂಸ್ಕೃತಿ ಉತ್ಸವ–5’ರಲ್ಲಿ ಕೃಷಿ ತರಂಗ ಸಂಸ್ಥೆಯ ಗಿರೀಶ ಭದ್ರಗೊಂಡ ಅಂಧರಿಗಾಗಿ ಪ್ರಾತ್ಯಕ್ಷಿಕೆಯೊಂದನ್ನು ರೂಪಿಸಿದ್ದು; ಉತ್ಸವ ಆರಂಭಕ್ಕೂ ಮುನ್ನವೇ ಎಲ್ಲರ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ.

ಒಂದು ಎಕರೆಗೂ ಕಡಿಮೆ ಭೂಮಿಯಲ್ಲಿ ಈ ಪ್ರಾತ್ಯಕ್ಷಿಕೆಯ ತಾಕಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ವಿವಿಧ ತರಕಾರಿ, ಮೆಂತ್ಯೆ, ಪಾಲಕ್, ಗೋಧಿ, ಕೊತ್ತಂಬರಿ, ಬದನೆಕಾಯಿ, ಹಣ್ಣಿನ ಗಿಡಗಳಾದ ಮಾವು, ಸಪೋಟಾ, ಚಿಕ್ಕು, ದಾಳಿಂಬೆ, ಪೇರಲ ಸೇರಿದಂತೆ ಹತ್ತು ಹಲವು ಪೈರಿವೆ. ಇದನ್ನು ಅಂಧರೊಬ್ಬರು ನಿರ್ವಹಿಸುತ್ತಿರುವುದು ವಿಶೇಷ.

ಉತ್ಸವಕ್ಕೆ ವಿವಿಧೆಡೆಯಿಂದ ಬರಲಿರುವ ಜನರನ್ನು ಆಕರ್ಷಿಸಲಿಕ್ಕಾಗಿಯೇ ಒಂದೂವರೆ ತಿಂಗಳಿಂದ ಗಿರೀಶ, ಉತ್ನಾಳದ ಅಂಧ ಸಂದೇಶ ಶಿಂಧೆ ಜತೆಗೂಡಿ ವಿಶೇಷ ಪರಿಶ್ರಮದಿಂದ ಈ ಪ್ರಾತ್ಯಕ್ಷಿಕೆ ರೂಪಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದಿರುವ ಅಂಧರು, ಕೃಷಿಯಲ್ಲಿ ಹಿಂದುಳಿಯಬಾರದು ಎಂದು ಹಲ ಯಂತ್ರಗಳ ಆವಿಷ್ಕಾರ ನಡೆಸಿ, ಯಶಸ್ಸಿನ ಪಥದಲ್ಲಿ ಹೆಜ್ಜೆಯಿಟ್ಟಿದ್ದಾರೆ.

‘ಅಂಧರು ಕೃಷಿ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂಬಂಥ ವಾತಾವರಣವಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೆ. ಈ ಕೊರಗನ್ನು ಹೋಗಲಾಡಿಸಲಿಕ್ಕಾಗಿಯೇ ಹಲವು ಯಂತ್ರ ಶೋಧಿಸಿ, ತಾಕಿನಲ್ಲಿ ಅಳವಡಿಸಿರುವೆ. ಅಪ್ಪಟ ಕನ್ನಡ ಭಾಷೆಯಲ್ಲೇ ಈ ಯಂತ್ರಗಳು ಸೆನ್ಸಾರ್‌ ಮೂಲಕ ಅಂಧ ಕೃಷಿಕರಿಗೆ ಮಾಹಿತಿ ನೀಡುತ್ತಿವೆ’ ಎಂದು ಗಿರೀಶ ಭದ್ರಗೊಂಡ ತಿಳಿಸಿದರು.

₹ 2.40 ಲಕ್ಷ ವೆಚ್ಚ

‘ಸಂಘಟಕರು ಅಂಧರಿಗಾಗಿ ವಿಶೇಷ ತಾಕು ರೂಪಿಸಲು ₹ 2.40 ಲಕ್ಷ ಅನುದಾನ ನೀಡಿದ್ದಾರೆ. ಇದರಲ್ಲೇ ಸೆನ್ಸಾರ್‌ ಬೇಸ್ಡ್‌ ಇರಿಗೇಷನ್, ಮಿನಿ ವೆದರ್‌ ಸ್ಟೇಷನ್, ಪಿಎಚ್‌ ಮೀಟರ್, ಹಕ್ಕಿ ಹೊಡಿಸುವ ಯಂತ್ರ, ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಕೆ ತೊಟ್ಟಿ, ಗುರುತ್ವಾಕರ್ಷಣ ಬಲದಿಂದ ನೀರು ಪೂರೈಕೆ, ತಾಕಿನೊಳಗೆ ತಿರುಗಾಡಲು ಅನುಕೂಲವಾಗುವಂತೆ ಅಂಧರ ಸೆನ್ಸಾರ್ ಸ್ಟಿಕ್‌ ರೂಪಿಸಲಾಗಿದೆ’ ಎಂದು ಕೃಷಿ ತರಂಗ ಸಂಸ್ಥೆಯ ಗಿರೀಶ ಭದ್ರಗೊಂಡ ಮಾಹಿತಿ ನೀಡಿದರು.

‘ಸೆನ್ಸಾರ್ ಬೇಸ್ಡ್‌ ಇರಿಗೇಷನ್ ಪದ್ಧತಿಯಲ್ಲಿ ತಾಕಿಗೆ ನೀರುಣಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಬೆಳೆಗೆ ತೇವಾಂಶ ಕೊರತೆ ಕಂಡು ಬರುತ್ತಿದ್ದಂತೆ, ತನ್ನಿಂದ ತಾನೇ ನೀರು ಚಾಲೂ ಆಗಲಿದೆ. ಸಮರ್ಪಕವಾಗಿ ಪೂರೈಕೆಯಾದ ಬಳಿಕ ಬಂದ್‌ ಆಗಲಿದೆ. ಗುರುತ್ವಾಕರ್ಷಣ ಪದ್ಧತಿಯಡಿ ನೀರು ಪೂರೈಸಲು ಎತ್ತರದಲ್ಲಿ ಟ್ಯಾಂಕರ್‌ ಇಡಲಾಗಿದೆ. ಅದಕ್ಕೆ ನೀರು ತುಂಬಿಸಿ, ಡ್ರಿಪ್‌ ಮೂಲಕ ನೀಡಲಾಗುವುದು.’

‘ಮಿನಿ ವೆದರ್‌ ಸ್ಟೇಷನ್‌ ನಿತ್ಯದ ಕ್ಷಣ ಕ್ಷಣದ ಹವಾಮಾನ ಮಾಹಿತಿಯನ್ನು ನೀಡಲಿದೆ. ಪಿಎಚ್‌ ಮೀಟರ್ ನೀರಿನ ಲವಣಾಂಶದ ಪ್ರಮಾಣ ಹೇಳುತ್ತದೆ. ತಾಕಿಗೆ ಹಕ್ಕಿಗಳು ಬರುತ್ತಿದ್ದಂತೆ, ಆ ಹಕ್ಕಿ ಯಾವ ಧ್ವನಿಗೆ ಹೆದರಲಿದೆ ಎಂಬುದನ್ನು ಸೆನ್ಸಾರ್‌ ಮೂಲಕ ಅರಿತು, ಆ ಧ್ವನಿ ಹೊರಹೊಮ್ಮಿಸುವ ಯಂತ್ರವನ್ನೂ ಈ ತಾಕಿನಲ್ಲೇ ಕೂರಿಸಲಾಗಿದೆ.’

‘45 ದಿನದಲ್ಲಿ ವೈಜ್ಞಾನಿಕವಾಗಿ ಸಾವಯವ ಗೊಬ್ಬರ ತಯಾರಿಸುವ ತೊಟ್ಟಿಯೂ ಇಲ್ಲಿದೆ. ತಾಕಿನೊಳಗಿನ ತಗ್ಗು–ದಿಣ್ಣೆಯೊಳಗೆ ಅಂಧರು ಸುಲಲಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಸ್ಟಿಕ್‌ ಸಹ ಅಭಿವೃದ್ಧಿಪಡಿಸಲಾಗಿದೆ’ ಎಂದು ಭದ್ರಗೊಂಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT