ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕಾರಾಗೃಹದಲ್ಲಿ ಶ್ರೀರಾಮನ ಪೂಜೆ, ಮುಸ್ಲಿಂ ಕೈದಿಗಳಿಂದ ಹಲ್ಲೆ ಆರೋಪ

Published 27 ಜನವರಿ 2024, 13:18 IST
Last Updated 27 ಜನವರಿ 2024, 13:18 IST
ಅಕ್ಷರ ಗಾತ್ರ

ವಿಜಯಪುರ: ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಮತ್ತು ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನದಂದು(ಜ.22) ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಪೂಜೆ ಮಾಡಿ, ಪ್ರಸಾದ ವಿತರಿಸಿದ ಮಹಾರಾಷ್ಟ್ರದ ಮೂವರು ಹಿಂದೂ ಕೈದಿಗಳ ಮೇಲೆ ಮುಸ್ಲಿಂ ಕೈದಿಗಳು ಮತ್ತು ಅಧಿಕಾರಿಗಳಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಮಹಾರಾಷ್ಟ್ರದ ಕೈದಿಯೊಬ್ಬ ‘ವಿಜಯಪುರ ದರ್ಗಾ ಸೆಂಟ್ರಲ್‌ ಜೈಲಿನಲ್ಲಿ ಶ್ರೀರಾಮನ ಪೂಜೆ ಮಾಡಿದ ನಮ್ಮ ಮೇಲೆ ಹಲ್ಲೆ ಮಾಡಿ, ಅನ್ಯಾಯ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಮ್ಮನ್ನು ರಕ್ಷಣೆ ಮಾಡಬೇಕು’ ಎಂದು ಮನವಿ ಮಾಡಿರುವ ವಿಡಿಯೊವನ್ನು ಹರಿಬಿಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.

‘ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನ ನಮಗೆ ಪೂಜೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಜೈಲಿನ ಅಧಿಕಾರಿ ಕೆ.ಎನ್‌. ಚೌದರಿ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ನಿರಾಕರಿಸಿದ್ದರು. ಆದರೂ ನಾವು ನಮ್ಮ ಕೊಠಡಿಯಲ್ಲಿ ಶ್ರೀ ರಾಮನ ಚಿತ್ರಕ್ಕೆ ಪೂಜೆ ಸಲ್ಲಿಸಿ, ಇಡೀ ಜೈಲಿಗೆ ಪ್ರಸಾದ ಹಂಚಿದ್ದೆವು‘ ಎಂದು ವಿಡಿಯೊದಲ್ಲಿ ಕೈದಿ ತಿಳಿಸಿದ್ದಾನೆ.

‘ಜೈಲಿನಲ್ಲಿ ಶ್ರೀ ರಾಮನ ಪೂಜೆ ಮಾಡಿದ ಕಾರಣಕ್ಕೆ ವಿಜಯಪುರ ನಗರದ ರೌಡಿ ಶೀಟರ್, ಕೊಲೆ ಆರೋಪಿ ಶೇಖ್ ಮೊಹಮ್ಮದ್ ಮೋದಿ ಮತ್ತು ಆತನ ಸಹಚರರು ನಮ್ಮ ಮೇಲೆ ಮರು ದಿನ(ಜ.23) ಹಲ್ಲೆ ಮಾಡಿದ್ದಾರೆ. ಆದರೇ, ಅವರ ಮೇಲೆ ಜೈಲರ್‌ ಯಾವುದೇ ಕ್ರಮಕೈಗೊಳ್ಳದೆ, ನಮ್ಮನ್ನು ಕಾರಾಗೃಹದಲ್ಲಿರುವ ಕೃಷ್ಣಾ ಸೆಲ್‌ನಲ್ಲಿ ಪ್ರತ್ಯೇಕವಾಗಿಟ್ಟು, ಸಜೆ ವಿಧಿಸಿದ್ದಾರೆ’ ಎಂದು ಆಪಾದಿಸಿದ್ದಾನೆ.

ಜೈಲಿನಲ್ಲಿ ಘಟನೆಯೇ ನಡೆದಿಲ್ಲ: ಪ್ರಕರಣದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜೆ.ಮ್ಯಾಗೇರಿ, ‘ಜೈಲಿನಲ್ಲಿ ಜ.22ರಂದು ಯಾವುದೇ ಪೂಜಾ ಕಾರ್ಯಕ್ರಮ ನಡೆದಿಲ್ಲ. ಜ.23ರಂದು ಕೈದಿಗಳ ನಡುವೆ ಗಲಾಟೆ, ಹೊಟೆದಾಡವೂ ನಡೆದಿಲ್ಲ. ಅಂದಿನ ಪರಿಸ್ಥಿತಿಯ ಲಾಭ ಪಡೆಯಲು ಕೈದಿಯೊಬ್ಬ ಇಲ್ಲಸಲ್ಲದ ಆರೋಪದೊಂದಿಗೆ ಕಥೆ ಕಟ್ಟಿ ಹರಿಬಿಟ್ಟಿರುವ ವಿಡಿಯೊ ಸಂಪೂರ್ಣ ಸುಳ್ಳು’ ಎಂದು ತಿಳಿಸಿದರು.

‘ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಯಾಗಿರುವ ದೇವ ಅಲಿಯಾಸ್‌ ಪರಮೇಶ್ವರ ಜಾಧವ ಸೇರಿದಂತೆ ಮೂವರು ಕೈದಿಗಳನ್ನು ಈ ಹಿಂದೆ ಅಲ್ಲಿಯ ಸರ್ಕಾರ ಯರವಾಡ ಮತ್ತು ಸಾತಾರ ಜೈಲಿನಲ್ಲಿ ಇರಿಸಿತ್ತು. ಈ ಆರೋಪಿಗಳು ಅಲ್ಲಿ ಇತರೆ ಕೈದಿಗಳಿಗೆ ದಮ್ಕಿ ಹಾಕುವುದು, ಬೆದರಿಕೆ ಒಡ್ಡುವುದು, ಬೈಯ್ಯುವುದು, ಗಲಾಟೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ವಿಜಯಪುರ ಸೆಂಟ್ರಲ್‌ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿಯೂ ಅವರು ಇತರೆ ಕೈದಿಗಳಿಗೆ ತೊಂದರೆನೀಡಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದರು.

‘ವಿಜಯಪುರ ಸೆಂಟ್ರಲ್‌ ಜೈಲಿನಲ್ಲಿ ಯಾವುದೇ ಗಲಾಟೆ ನಡೆಯಲು ಅವಕಾಶ ನೀಡಿಲ್ಲ. ಆದರೆ, ಈ ಕೈದಿಗಳು ವೈಯಕ್ತಿಕ ಕಾರಣವನ್ನು ಮುಂದಿಟ್ಟುಕೊಂಡು, ಶ್ರೀರಾಮ ಪೂಜೆ ಮಾಡಿದ ಕಾರಣಕ್ಕೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ಇದು ಸಂಪೂರ್ಣ ಕಟ್ಟುಕತೆ. ಜೈಲಿಗೆ ಭೇಟಿ ನೀಡಿದವರ ಸಹಕಾರದೊಂದಿಗೆ ಮೊಬೈಲ್‌ ಫೋನ್‌ ಪಡೆದು ಸುಳ್ಳು ವಿಡಿಯೊ ಮಾಡಿ ಹರಿಬಿಟ್ಟಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT