ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಲಭ್ಯ ವಂಚಿತ ಚಡಚಣ ಪಟ್ಟಣ

ಕರ್ನಾಟಕ– ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ ಚಡಚಣ ಪಟ್ಟಣ ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತಗೊಂಡಿದೆ.
Published 15 ಮೇ 2024, 7:38 IST
Last Updated 15 ಮೇ 2024, 7:38 IST
ಅಕ್ಷರ ಗಾತ್ರ

ಚಡಚಣ: ಕರ್ನಾಟಕ– ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ ಚಡಚಣ ಪಟ್ಟಣ ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತಗೊಂಡಿದೆ.

ಪಟ್ಟಣ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಗೆ ಜನ ತಮ್ಮಷ್ಟಕ್ಕೆ ತಾವೇ ಮೂಗು ಮುಚ್ಚಿಕೊಳ್ಳುವುದು ಸಾಮಾನ್ಯ. ಪಟ್ಟಣದ ಮಧ್ಯಭಾಗದಲ್ಲಿ ಸಂಗಮೇಶ್ವರ ದೇವಾಲಯದ ಮುಂಭಾಗದಲ್ಲಿ ಅರ್ಧ ಚಂದ್ರಾಕಾರದಲ್ಲಿ ಹಾದು ಹೋಗಿರುವ ಬೋರಿ ಹಳ್ಳದಲ್ಲಿ ಚರಂಡಿ ನೀರು ಮಡುಗಟ್ಟಿ ನಿಂತಿರುವುದು ಪಟ್ಟಣದ ಸ್ವಚ್ಛತೆಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆಲ್ಲ ಕಾರಣ ಪಟ್ಟಣದಲ್ಲಿ ಚರಂಡಿ ವ್ಯವಸ್ಥೆ ಇಲ್ಲ.

ಜನರು ತಮ್ಮ ಮನೆಯ ಬಚ್ಚಲು ಹಾಗೂ ಶೌಚಾಲಯದ ನೀರನ್ನು ರಸ್ತೆಗಳ ಮೂಲಕ ಈ ಹಳ್ಳಕ್ಕೆ ಜೋಡಿಸಿರುವುದರಿಂದ ನೀರು ಸಂಗ್ರಹಗೊಂಡು ಗಬ್ಬು ವಾಸನೆ ಬೀರುವುದರೊಂದಿಗೆ ಹಲವು ಸಾಂಕ್ರಾಮಿಕ ರೋಗಗಳ ಜನ್ಮಸ್ಥಳವಾಗಿದೆ.

ಸ್ಥಳಿಯ ಪಟ್ಟಣ ಪಂಚಾಯ್ತಿ ಲಭ್ಯವಿರುವ ಅನುದಾನದಲ್ಲಿ ಪಟ್ಟಣದಲ್ಲಿ ಚರಂಡಿ ನಿರ್ಮಾಣ, ಸಿ.ಸಿ ರಸ್ತೆಗಳ ನಿರ್ಮಾಣ ಸೇರಿದಂತೆ ಚಿಕ್ಕ ಪುಟ್ಟ ಕಾಮಗಾರಿಗಳನ್ನು ಕೈಗೊಂಡಿದ್ದರೂ, ಅಗತ್ಯ ಅನುದಾನದ ಕೊರೆತೆಯಿಂದಾಗಿ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ.

ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪಟ್ಟಣಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರದ ಸಹಸ್ರಾರು ಜನರು ವ್ಯಾಪಾರ, ವಹಿವಾಟಿಗೆ ಆಗಮಿಸುತ್ತಾರೆ. ಇಲ್ಲಿನ ಅವ್ಯವಸ್ಥೆ ಮತ್ತು ಮಾಲಿನ್ಯ ಕಂಡು ಹಿಡಿ ಶಾಪ ಹಾಕುವುದು ಸಹಜ.

ಬಸ್‌ ನಿಲ್ದಾಣವೂ ಹೊರತಾಗಿಲ್ಲ: ಚಡಚಣ ಪಟ್ಟಣ ತಾಲ್ಲೂಕು ಕೇಂದ್ರವಾಗಿ ಸುಮಾರು 5-6 ವರ್ಷಗಳೂ ಗತಿಸಿದರೂ, ಸರ್ಕಾರದ ಅಗತ್ಯ ಅನುದಾನದ ಕೊರತೆಯಿಂದ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.

ಈ ಭಾಗದಿಂದ ಆಯ್ಕೆಯಾಗುವ ಪ್ರತಿಯೊಬ್ಬ ಜನಪ್ರತಿನಿಧಿ ಹೇಳುವುದು ಒಂದೇ, ‘ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವೆ’ ಎಂದು. ಆಯ್ಕೆಯಾದ ನಂತರ ಜನಪ್ರತಿನಿಧಿಗಳ ಭರವಸೆಗಳು ಹೇಳಿಕೆಗಳಿಗೆ ಸೀಮಿತವಾಗಿರುವುದು ವಿಪರ್ಯಾಸ ಎನ್ನುವುದು ಸಾರ್ವಜನಿಕರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT