ಶನಿವಾರ, ಮೇ 15, 2021
29 °C

ಲಾರಿ, ಬೈಕ್‌ ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಬಡಿ ಕಮಾನ್‌ ರಸ್ತೆಯಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಗೋಳಗುಮ್ಮಟ ಪೊಲೀಸ್‌ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಸಾರ ಗಲ್ಲಿ ರಿಪಬ್ಲಿಕ್‌ ಸ್ಕೂಲ್ ಹತ್ತಿರದ ನಿವಾಸಿ ಮಹಿಬೂಬ ಹವಾಲ್ದಾರ (35) ಹಾಗೂ ಈ ಲಾರಿಗಳನ್ನು ಖರೀದಿಸಿದ್ದ ಕಲಬುರ್ಗಿಯ ಬಸವೇಶ್ವರ ಕಾಲೊನಿಯ ಮೊಹ್ಮದ ಆಸೀಫ್ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಳಗುಮ್ಮಟ ಸಿಪಿಐ ಬಿ.ಕೆ.ಮುಕರ್ತಿಹಾಳ, ಪಿ.ಎಸ್.ಐ ರಾಜೇಶ ಎಸ್. ಲಮಾಣಿ, ವಿನೋದ ಎಸ್. ದೊಡಮನಿ ಹಾಗೂ ಸಿಬ್ಬಂದಿಗಳಾದ ಸದಾಶಿವ ಎಲ್.ಕಲಾದಗಿ, ಯೋಗೀಶ ಮಾಳಿ, ಅಬ್ದುಲ್‍ಖಾದಿರ್‌ ಕೋಲೂರ, ಎಸ್.ಎಂ.ಮಠ, ಎಂ.ಎ.ಅಡಿಹುಡಿ, ಉಮೇಶ ಸಿಂಗೆ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.  

ಬೈಕ್‌ ಕಳ್ಳರ ಬಂಧನ:

ವಿಜಯಪುರ, ಸೊಲ್ಲಾಪುರ ಮತ್ತು ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ 13 ಬೈಕುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗೋಳಗುಮ್ಮಟ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದ ಗಾಂಧಿ ಎಮ್ಮೆ(27) ಹಾಗೂ ಆರೋಪಿಯಿಂದ ಬೈಕುಗಳನ್ನು ಖರೀದಿಸಿದ ಗಂಗಾಧರ ಬಗಲಿ(30) ಬಂಧಿತ ಆರೋಪಿಗಳಾಗಿದ್ದಾರೆ.

ಗೋಳಗುಮ್ಮಟ ಠಾಣೆ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ 5, ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂದು, ಹುಬ್ಬಳ್ಳಿಯ ರೈಲ್ವೆ ಸರ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಒಂದು ಹಾಗೂ ಸೊಲ್ಲಾಪುರದಲ್ಲಿ ಕಳವು ಮಾಡಿದ್ದ 3 ಮತ್ತು ಇತರೆಡೆ ಕಳವು ಮಾಡಿದ್ದ 4 ಬೈಕು ಸೇರಿದಂತೆ ಒಟ್ಟು ₹7.50 ಲಕ್ಷ ಮೌಲ್ಯದ 13 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕ್ರಿಕೆಟ್‌ ಬೆಟಿಂಗ್‍: ಮೂವರ ಬಂಧನ

ವಿಜಯಪುರ: ಇಲ್ಲಿನ ಆಶ್ರಮ ರಸ್ತೆಯ ಎಂ.ಎಚ್-12 ಪಾವ್‌ ಬಾಜಿ ಹೋಟೆಲ್ ಎದುರಿಗೆ ಇರುವ ರಾಜು ಪಾನ್‌ ಶಾಪ್ ಮುಂದೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಳಿಕಾ ನಗರದ ಸೋಮನಾಥ ಹಿರೋಳ್ಳಿ(28), ಕಬಾಡೆ ಕಾಲೊನಿಯ ಹಮೀದ್‌ ಜಹಗೀರದಾರ(40) ಮತ್ತು ಸಿಂದಗಿಯ ಜೈ ಭೀಮ್ ನಗರ ಶರಣಪ್ಪ ಖಾನಾಪೂರ(40) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ಬಳಿಯಿಂದ ಎರಡು ಮೊಬೈಲ್‌ ಫೋನ್‌, ₹39,300 ನಗದು ವಶಪಡಿಸಿಕೊಳ್ಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.