ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಂದ ಬಕ್ರೀದ್ ಆಚರಣೆ ಸಂಭ್ರಮ

ಬಡವರ ಹೃದಯ ಗೆದ್ದರೆ ಅಲ್ಲಾಹ ಸಂತುಷ್ಟ: ಸಯ್ಯದ್ ತನ್ವೀರಪೀರಾ ಹಾಶ್ಮೀ
Last Updated 10 ಜುಲೈ 2022, 12:45 IST
ಅಕ್ಷರ ಗಾತ್ರ

ವಿಜಯಪುರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಿದರು.

ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹು ಅಕ್ಬರ್... ನಾಮಸ್ಮರಣೆ ಎಲ್ಲೆಡೆ ಅನುರಣಿಸಿತು. ಮನುಕುಲದ ಕಲ್ಯಾಣ ಹಾಗೂ ಒಳಿತಿಗಾಗಿ ಈ ಬಾರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿಜಯಪುರದ ದಖನಿ ಈದ್ಗಾ, ಶಾಹಿ ಈದ್ಗಾ, ಜಾಮೀಯಾ ಮಸೀದಿ, ಅಬೂಬಕರ್ ಮಸೀದಿ, ಧಾತರಿ ಮಸೀದಿ, ಅಲ್-ಅಖ್ಸಾ ಮಸೀದಿ ಸೇರಿದಂತೆ ಹಲವಾರು ಮಸೀದಿಗಳಲ್ಲಿ ಈದ್ ಪ್ರಯುಕ್ತ ವಿಶೇಷ ನಮಾಜ್‍ ಅನ್ನು ಮುಸ್ಲಿಂ ಬಾಂಧವರು ಸಲ್ಲಿಸಿದರು. ನಂತರ ಮನೆಗಳಲ್ಲಿ ಹಬ್ಬದ ಪ್ರಯುಕ್ತ ಮಾಂಸದ ಊಟ, ಸಿರಕುರಮಾ ಸವಿದರು.

ಬಡವರ ಹೃದಯಗೆದ್ದರೆ ಅಲ್ಲಾಹ ಸಂತುಷ್ಟ:

ನಗರದ ದಖನಿ ಈದ್ಗಾದಲ್ಲಿ ನಮಾಜ್ ನೆರವೇರಿಸಿದ ನಂತರ ಬಕ್ರೀದ್‌ ಹಬ್ಬದ ಸಂದೇಶ ನೀಡಿದ ಧರ್ಮಗುರು, ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ ಸಯ್ಯದ್ ತನ್ವೀರಪೀರಾ ಹಾಶ್ಮೀ, ಬಡವರ ಹೃದಯ ಗೆದ್ದರೆ ಅಲ್ಲಾಹ ಸಂತುಷ್ಟನಾಗುತ್ತಾನೆ ಎಂದು ಪ್ರವಾದಿ ಮೊಹ್ಮದ್ ಪೈಗಂಬರ್ ಸಾರಿದ್ದಾರೆ. ಹೀಗಾಗಿ ನಾವು ಬಡವರ ಹೃದಯ ಗೆಲ್ಲುವ ಮೂಲಕ ಅಲ್ಲಾಹನ ಪ್ರೀತಿ, ಅನುಗ್ರಹಕ್ಕೆ ಪಾತ್ರರಾಗಬೇಕು, ಬಡವರ ಸೇವೆಯನ್ನು ನಮ್ಮ ಜೀವನ ಧ್ಯೇಯವಾಗಿಸಿಕೊಳ್ಳಬೇಕು ಎಂದರು.

ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ, ಹಜರತ್ ಇಬ್ರಾಹಿಂ ಅವರ ತ್ಯಾಗ, ಔದಾರ್ಯವನ್ನು ಈ ಹಬ್ಬ ಸಾರುತ್ತದೆ, ಭಗವಂತನ ಆದೇಶ ಬಂದಾಗ ತಮ್ಮ ಜೀವಕ್ಕಿಂತ ಅಮೂಲ್ಯವಾದ ಮಗನನ್ನು ತ್ಯಾಗ ಮಾಡಲು ಅವರು ಹಿಂದೇಟು ಹಾಕಲಿಲ್ಲ ಎಂದರು.

ಭಾರತಭವ್ಯ ಸಂಸ್ಕೃತಿ, ವಿಚಾರಗಳ ದೇಶ. ನಾವೆಲ್ಲರೂ ಭಾರತೀಯರು, ಹಿಂದೂ-ಮುಸ್ಲಿಮರು ಸಹೋದರರಿದಂತೆ. ಆದರೆ, ಈ ಸಹೋದರರಲ್ಲಿ ಒಡಕು ಮೂಡಿಸುವ ಕೆಲಸವನ್ನು ದುಷ್ಟಶಕ್ತಿಗಳು ಮಾಡುತ್ತಿವೆ, ಇದಕ್ಕೆ ಬಲಿಯಾಗದೇ ಸೌಹಾರ್ದತೆ, ಸಹೋದರತೆ ಮೈಗೂಡಿಸಿಕೊಂಡು ದೇಶವನ್ನು ಕಟ್ಟುವ ಕಾರ್ಯ ಮಾಡಬೇಕು, ಭಾರತೀಯ ಶ್ರೇಷ್ಠ ಸಂವಿಧಾನ, ಕಾನೂನುನ್ನು ಸದಾ ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್, ಸಾಂಗ್ಲೀಕಾರ ಮೊದಲಾದ ಗಣ್ಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ನಾವು ನಮ್ಮಲ್ಲಿರುವ ದುರ್ಗುಣಗಳನ್ನು ತ್ಯಜಿಸಬೇಕು, ಸದ್ಗುಣಗಳನ್ನು ಅಳವಡಿಸಿಕೊಂಡು ಸಂಸ್ಕಾರಯುಕ್ತ ಬದುಕು ನಮ್ಮದಾಗಿಸಿಕೊಳ್ಳಬೇಕು.

–ಸಯ್ಯದ್ ತನ್ವೀರಪೀರಾ ಹಾಶ್ಮೀ,ಧರ್ಮಗುರು, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT