ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಜಯದೇವಿತಾಯಿ ಸಮಾಧಿ ಇದ್ದರೂ ಸ್ಮಾರಕವಿಲ್ಲ

Published 22 ಜೂನ್ 2023, 5:34 IST
Last Updated 22 ಜೂನ್ 2023, 5:34 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕಲ್ಯಾಣವು ಬಸವಕಲ್ಯಾಣವಾಗಿ ರೂಪುಗೊಳ್ಳುವಲ್ಲಿ ಕವಯತ್ರಿ ಜಯದೇವಿತಾಯಿ ಲಿಗಾಡೆ ಅವರ ಪ್ರಯತ್ನ ದೊಡ್ಡದು. ಅವರು ಅನೇಕ ವರ್ಷಗಳವರೆಗೆ ಇಲ್ಲಿ ವಾಸಸಿದ್ದರು. ಅವರ ಸಮಾಧಿ ಸಹ ಇಲ್ಲಿದ್ದರೂ, ಸರ್ಕಾರದಿಂದ ಸ್ಮಾರಕ ಕೂಡ ನಿರ್ಮಾಣ ಮಾಡಲಾಗಿಲ್ಲ.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜೂನ್ 23 ರಂದು ಜನಿಸಿದರು. ಆದರೂ, ಕೊನೆಗಾಲದಲ್ಲಿ ಬಸವಕಲ್ಯಾಣದಲ್ಲಿಯೇ ಮನೆ ಕಟ್ಟಿಕೊಂಡು ನೆಲೆನಿಂತು ಕನ್ನಡ ನಾಡು ನುಡಿ, ಸಾಹಿತ್ಯ, ಶರಣತತ್ವದ ಪ್ರಸಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಮರಾಠಿ ಮತ್ತು ಕನ್ನಡದಲ್ಲಿ ವಿಫುಲ ಸಾಹಿತ್ಯ ರಚಿಸಿದರು. ಮಂಡ್ಯದಲ್ಲಿ ಹಮ್ಮಿಕೊಂಡಿದ್ದ 48 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನ ವಹಿಸಿದ್ದರು.

1980ರ ನವೆಂಬರ್ 5 ರಂದು ಬಸವಕಲ್ಯಾಣಕ್ಕೆ ಬಂದು ನೆಲೆಸಿದರು. 1986 ರಲ್ಲಿ ನಿಧನರಾದರು. ಇಲ್ಲಿನ ಅವರ ಮನೆ `ಭಕ್ತಿ ಭವನ'ದ ಹಿಂದುಗಡೆಯೇ ಅಂತ್ಯಕ್ರಿಯೆ ನಡೆಸಿ`ಸಿದ್ಧಶೈಲ' ಸಮಾಧಿ ಕಟ್ಟಲಾಗಿದೆ. ಆದರೆ, ನಗರದಲ್ಲಿ ಇವರ ಹೆಸರಲ್ಲಿ ಸ್ಮಾರಕ ಕಟ್ಟಬೇಕು ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರ ವಿಜಯಕುಮಾರ ಭೆಂಡೆ ನೇತೃತ್ವದಲ್ಲಿ ನಾಲ್ಕು ಸಲ ಧರಣಿ ನಡೆಸಿದ್ದರೂ ಪ್ರಯೋಜನ ಆಗಿಲ್ಲ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಸಮಾಧಿ ಸ್ಥಳದ ಅಭಿವೃದ್ಧಿ ನಡೆದಿದೆ.`ಮಂಡಳಿಯ ಅನುದಾನದಲ್ಲಿ ವರ್ಷದ ಹಿಂದೆ ಸಮಾಧಿಯ ಮೇಲೆ ಮಂಟಪ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ' ಎಂದು ಮಂಡಳಿಯ ಎಂಜಿನಿಯರ್ ಗೋಪಿಕೃಷ್ಣ ತಿಳಿಸಿದ್ದಾರೆ.

ಜಯದೇವಿತಾಯಿ ಲಿಗಾಡೆ ಸಮಾಧಿ ಮೇಲಿನ ಮಂಟಪದಲ್ಲಿರುವ ಮೂರ್ತಿ
ಜಯದೇವಿತಾಯಿ ಲಿಗಾಡೆ ಸಮಾಧಿ ಮೇಲಿನ ಮಂಟಪದಲ್ಲಿರುವ ಮೂರ್ತಿ

ಭಾಲ್ಕಿ ಬಸವಲಿಂಗ ಪಟ್ಟದ್ದೇವರ ವತಿಯಿಂದ ಪ್ರತಿವರ್ಷ ಜಯದೇವಿತಾಯಿ ಅವರ ಜಯಂತಿ ಆಚರಿಸಿ ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿನ ಗಣ್ಯರಿಗೆ ‘ಡಾ.ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರ’ ನೀಡಲಾಗುತ್ತಿದೆ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಸಹ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತಿದೆ.

ಸರ್ಕಾರದಿಂದ ನಗರದಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆಗಲಿಲ್ಲ ಎಂಬ ಕೊರಗು ಇದೆ. ಆದ್ದರಿಂದ ಯಾವುದಾದರೂ ವೃತ್ತಕ್ಕೆ ಮತ್ತು ಸಭಾಭವನಕ್ಕೆ ಅವರ ಹೆಸರಿಡಬೇಕು’ ಎಂದು ಉಪನ್ಯಾಸಕ ಭೀಮಾಶಂಕರ ಬಿರಾದಾರ ಮತ್ತು ಸಾಹಿತಿ ವೀರಶೆಟ್ಟಿ ಪಾಟೀಲ ಆಗ್ರಹಿಸಿದರೆ, ‘ಅವರ ಹೆಸರಲ್ಲಿ ರಂಗಮಂದಿರ ನಿರ್ಮಿಸಬೇಕು' ಎಂದು ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಶಿವುಸ್ವಾಮಿ ನಾರಾಯಣಪುರ ಅವರ ಒತ್ತಾಯವಾಗಿದೆ.

‘ಲಿಗಾಡೆಯವರು ಸಾಹಿತಿ ಆಗಿದ್ದರಿಂದ ಅವರ ಹೆಸರಲ್ಲಿ ಗ್ರಂಥಾಲಯದ ವ್ಯವಸ್ಥೆ ಆಗಬೇಕು’ ಎಂಬುದು ಸಮಾಜ ಕಾರ್ಯಕರ್ತ ವಿಜಯಕುಮಾರ ಪಾಟೀಲ, ಧನರಾಜ ರಾಜೋಳೆ ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT