ವಿಜಯಪುರ: ಮಹಾರಾಷ್ಟ್ರದ ಉಜಿನಿ ಹಾಗೂ ವೀರ ಜಲಾಶಯಗಳಿಂದ ನೀರು ಹೊರ ಬಿಟ್ಟಿರುವುದರಿಂದ ರಾಜ್ಯದ ವಿಜಯಪುರ, ಕಲಬುರ್ಗಿ ಜಿಲ್ಲೆಗಳಲ್ಲಿ ಹರಿಯುವ ಭೀಮಾ ನದಿ ತೀರದಲ್ಲಿ ತಲೆದೋರಬಹುದಾದ ಪ್ರವಾಹ ಪರಿಸ್ಥಿತಿ ಕುರಿತು ಎರಡು ಜಿಲ್ಲೆಗಳ ಅಧಿಕಾರಿಗಳು ಮಂಗಳವಾರ ಪರಿಶೀಲನೆ ನಡೆಸಿದರು.
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮತ್ತು ಕಲಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಗಡಿ ಭಾಗದಲ್ಲಿರುವ ಸೊನ್ನ ಬ್ಯಾರೇಜ್‍ಗೆ ಮಂಗಳವಾರ ಭೇಟಿ ನೀಡಿ, ಭೀಮಾ ನದಿ ಪಾತ್ರದ ಪ್ರವಾಹ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುನ್ನೆಚ್ಚರಿಕೆ ಕ್ರಮಗಳ ಕುರಿತು ನದಿ ತೀರದ ಜನರಲ್ಲಿ ಜಾಗೃತಿ ಮೂಡಿಸಬೇಕು. ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು, ದನ, ಕರುಗಳಿಗೆ ನದಿ ಹತ್ತಿರಕ್ಕೆ ಹೋಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೊನ್ನಾ ಬ್ಯಾರೇಜ್‌ನ ಎಲ್ಲ ಕ್ರಸ್ಟ್ ಗೆಟ್‌ಗಳನ್ನು ಪರಿಶೀಲನೆ ನಡೆಸಿದ ಅವರು, ಭೀಮಾ ನದಿ ತೀರದಲ್ಲಿ ಪ್ರವಾಹಕ್ಕೊಳಗಾಗುವ ಗ್ರಾಮಗಳ ಮಾಹಿತಿ ಪಡೆದರು.
ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸಿಇಒ ಬನ್ವರ್ ಸಿಂಗ್ ಮೀನಾ, ಆಲಮೇಲ ತಹಶೀಲ್ದಾರ್ ಸುರೇಶ್ ಚಾವಲರ, ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಂತೋಷ ಸಜ್ಜನ ಇದ್ದರು.