ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪ್ರಶ್ನೆಗಳಿಗೆ ಉತ್ತರ ನೀಡದ ಬಿಜೆಪಿ: ಸಚಿವ ಸಂತೋಷ್‌ ಲಾಡ್‌

Published 21 ಏಪ್ರಿಲ್ 2024, 10:28 IST
Last Updated 21 ಏಪ್ರಿಲ್ 2024, 10:28 IST
ಅಕ್ಷರ ಗಾತ್ರ

ವಿಜಯಪುರ: ದೇಶ, ಪಾಕಿಸ್ತಾನ, ಬಾಂಗ್ಲಾದೇಶ, ಮುಸ್ಲಿಮ್‌, ರಾಮಮಂದಿರ, ಮೋದಿಗೆ ವೋಟ್‌ ಹಾಕಿ ಎಂದು ಹೇಳುವುದನ್ನು ಹೊರತು ಪಡಿಸಿ, ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯದ ಬಗ್ಗೆ ಬಿಜೆಪಿ ಮಾತನಾಡಲ್ಲ. ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ, ನಿರುದ್ಯೋಗ, ಜಿಡಿಪಿ, ಬೆಲೆ ಏರಿಕೆ, ಹಣದುಬ್ಬರ ಮತ್ತು ಅವರು ನೀಡಿರುವ ಹಲವಾರು ಭರವಸೆಗಳ ಬಗ್ಗೆ ನಾವು ಕೇಳುವ ಯಾವೊಂದು ಪ್ರಶ್ನೆಗೂ ಬಿಜೆಪಿಯವರು ಇದುವರೆಗೂ ಉತ್ತರ ನೀಡುತ್ತಿಲ್ಲ. ಕೇವಲ ವಿವಾದಾತ್ಮಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.

ಯುಪಿಎ ಸರ್ಕಾರದ ಎರಡು ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು, ಇಂದಿರಾಗಾಂಧಿ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳಾದ ವೃದ್ಧಾಪ್ಯ ವೇತನ, ವಿದುವಾ ವೇತನಾ, ಅಂಗವಿಕಲರ ಮಾಸಾಶನ, ಸಂಧ್ಯಾ ಸುರಕ್ಷಾ ಕಾರ್ಯಕ್ರಮ ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬಕ್ಕೂ ಅನುಕೂಲವಾಗಿವೆ ಎಂದರು.

ಮೋದಿ ಅವರ ಬಿಜೆಪಿ ಸರ್ಕಾರದಿಂದ ಬಡ ಕುಟುಂಬಕ್ಕೆ ಒಂದೇ ಒಂದು ರೂಪಾಯಿ ಲಾಭ ಆಗಿಲ್ಲ, ಕೇವಲ 10 ವರ್ಷಗಳಿಂದ ಪ್ರಚಾರಕ್ಕೆ ಸೀಮಿತವಾಗಿದ್ದಾರೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಫಸಲ್‌ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿಲ್ಲ,. ಬದಲಿಗೆ ಇನ್‌ಶ್ಯೂರೆನ್ಸ್‌ ಕಂಪನಿಗಳಿಗೆ, ಅದಾನಿ, ಅಂಬಾನಿಗೆ ಲಾಭವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವಾಗಿದೆ. 2014ರಲ್ಲಿ ಒಂದು ಡಾಲರ್‌ ಬೆಲೆ ₹58 ಇದ್ದದ್ದು, ಈಗ ₹84 ಆಗಿದೆ. ಒಂದು ತೊಲೆ ಬಂಗಾರದಕ್ಕೆ ₹27 ಸಾವಿರ ಇದ್ದ ಬೆಲೆ ಈಗ ₹74 ಸಾವಿರ ಆಗಿದೆ. ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.

ಮೋದಿ ಅವರ ಜೊತೆ ದೇಶದ ದೊಡ್ಡ ಉದ್ಯಮಿಗಳು ಇದ್ದಾರೆ, ಜೊತೆಗೆ ಅಗಾಧವಾಗಿ ಹಣ ಇದೆ. ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ವ್ಯಕ್ತಿತ್ವವನ್ನು ಕುಂದಿಸಲು 10 ಸಾವಿರಕ್ಕೂ ಅಧಿಕ ಜನರನ್ನು ಸಂಬಳ ಕೊಟ್ಟು ಬಿಟ್ಟಿದ್ದಾರೆ.  ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿ ಮಾಡುವುದರಿಂದ ಮೋದಿಯವರಿಗೆ ವೈಯಕ್ತಿಕವಾಗಿ ಲಾಭ ಆಗಲಿದೆಯೇ ಹೊರತು ದೇಶಕ್ಕಾಗಲಿ, ಬಿಜೆಪಿಗಾಗಲಿ ಲಾಭ ಆಗದು ಎಂದು ಹೇಳಿದರು.

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಅವರೇ ತಾರಾ ಪ್ರಚಾರಕರಾಗಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆ ಮಾತ್ರವಲ್ಲದೇ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನೂ ಬಿಡದೇ ಪ್ರಚಾರಕ್ಕೆ ಹೋಗುತ್ತಾರೆ. 10 ವರ್ಷಗಳಲ್ಲಿ ಚುನಾವಣೆಗಾಗಿ ಮೋದಿ ಅವರು ಎಷ್ಟು ಸಮಯ ವಿನಿಯೋಗಿಸಿದ್ದಾರೆ, ದೇಶದ ಆಡಳಿತಕ್ಕಾಗಿ ಎಷ್ಟು ಸಮಯ ವಿನಿಯೋಗಿಸಿದ್ದಾರೆ ಎಂಬುದನ್ನು ಲೆಕ್ಕ ಹಾಕಿದರೆ ಅವರ ವಾಸ್ತವತೆ ಅರಿವಾಗುತ್ತದೆ ಎಂದು ಹೇಳಿದರು. 

ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಶಾಸಕ ವಿಠಲ ಕಟಕಧೋಂಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಮಲ್ಲಿಕಾರ್ಜುನ ಲೋಣಿ, ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಸೋಮನಾಥ ಕಳ್ಳಿಮನಿ, ಮಹಾಂತೇಶ ಬಿರಾದಾರ, ಸಂಗಮೇಶ ಬಬಲೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT