ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಗೋಧಿ ಬೆಳೆದು ಯಶಸ್ಸು ಕಂಡ ಶಾಂತವ್ವ

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆನೆಮೊಸರು ನಾಡಿನ ರೈತ ಮಹಿಳೆ
Last Updated 7 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಕೊಲ್ಹಾರ : ಉತ್ತರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಬೆಳೆಯಲಾಗುವ ಅಪರೂಪದ ಕಪ್ಪು ಗೋಧಿಯನ್ನು ಕೊಲ್ಹಾರದಲ್ಲಿ ರೈತ ಮಹಿಳೆ ಶಾಂತವ್ವ ರಮೇಶ ಬಾಲಗೊಂಡ ಅವರು ಯಶಸ್ವಿಯಾಗಿ ಬೆಳೆದು ಸಾಧನೆ ಮಾಡಿದ್ದಾರೆ.

ಹೆಚ್ಚಾಗಿ ಕೆಂಪು ಅಥವಾ ಬಿಳಿ ಗೋಧಿಯನ್ನು ಬೆಳೆಯುವ ರಾಜ್ಯದ ಬಹುತೇಕ ರೈತರಿಗೆ ಕಪ್ಪು ಗೋಧಿಯ ಪರಿಚಯ ಕಡಿಮೆ. ಕಪ್ಪು ಗೋಧಿಯೂ ಹೆಚ್ಚಿನ ಕಬ್ಬಿಣಾಂಶ, ಫೈಬರ್, ಜಿಂಕ್, ಪೊಟ್ಯಾಸಿಯಂ, ಮ್ಯಾಗ್ನೇಶಿಯಂ, ಕಾಪರ್, ವಿಟಮಿನ್ ಬಿ ಸೇರಿದಂತೆ ಹಲವು ಲವಣಾಂಶಗಳನ್ನು ಹೊಂದಿದೆ.

ಕಪ್ಪು ಗೋಧಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೆಚ್ಚು ಬೇಡಿಕೆಯಿರುವ ಕಪ್ಪು ಗೋಧಿಯನ್ನು ಅಪರೂಪ ಎನ್ನುವಂತೆ ಬೆರಳೆಣಿಕೆಯಷ್ಟು ರೈತರು ಮಾತ್ರ ರಾಜ್ಯದಲ್ಲಿ ಬೆಳೆಯುತ್ತಾರೆ. ಆದರೆ, ಕೆನೆ ಮೊಸರು ನಾಡಿನ ರೈತ ಮಹಿಳೆ ಶಾಂತವ್ವ ರಮೇಶ ಬಾಲಗೊಂಡ ಕುಟುಂಬದ ಸದಸ್ಯರ ಸಹಕಾರದೊಂದಿಗೆ ಈ ಅಪರೂಪದ ಬೆಳೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ಬೆಳೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಕಪ್ಪು ಗೋಧಿಯ ಕುರಿತು ಪತಿಯಿಂದ ಮಾಹಿತಿ ಪಡೆದ ರೈತಮಹಿಳೆ ಶಾಂತವ್ವ, ನಮ್ಮ ಭೂಮಿಯಲ್ಲೂ ಇದನ್ನು ಬೆಳೆದು ತೋರಿಸಬೇಕು ಎಂದು ದಿಟ್ಟ ನಿರ್ಧಾರ ಮಾಡುತ್ತಾರೆ. ಪತ್ನಿಯ ಪ್ರಯತ್ನಕ್ಕೆ ಪ್ರಗತಿಪರ ರೈತ ರಮೇಶ ಬಾಲಗೊಂಡ ಸಹ ಪ್ರೋತ್ಸಾಹ ನೀಡುತ್ತಾರೆ.ಮಧ್ಯಪ್ರದೇಶದಿಂದ 5 ಕೆ.ಜಿ ಕಪ್ಪು ಗೋಧಿ ತರಿಸಿ ಕೊಡುತ್ತಾರೆ. ಅದನ್ನು ಶಾಂತವ್ವ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿ ಸಾಮಾನ್ಯ ಕೆಂಪು ಗೋಧಿ ಬೆಳೆಯುವ ಪದ್ದತಿಯಲ್ಲೇ ಬೆಳೆಯುತ್ತಾರೆ. ಸುಮಾರು ಮೂರು ತಿಂಗಳ ನಂತರ ಕಟಾವು ಮಾಡಿ ಅಂದಾಜು ಎರಡು ಕ್ವಿಂಟಾಲ್ ನಷ್ಟು ಇಳುವರಿ ಬರುತ್ತದೆ. ಬೆಳೆಯಲ್ಲಿ ಸ್ವಲ್ಪ ಮನೆಗೆ ಬಳಸಿ ನಂತರ ಇಳುವರಿ ಬೀಜಗಳನ್ನು ಮತ್ತೆ ಎರಡೂ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. 90 ದಿನಗಳಲ್ಲಿ ಬೆಳೆ ಕೈಸೇರುವ ಕಪ್ಪು ಗೋಧಿ ಬೆಳೆಯೂ ಸದ್ಯ ಸಮೃದ್ಧವಾಗಿ ಬೆಳೆದಿದ್ದು, ಒಂದು ತಿಂಗಳಲ್ಲೇ ಕಟಾವಿಗೆ ಬರಲಿದೆ.

ಎಕರೆಗೆ ಅಂದಾಜು 8-10 ಕ್ವಿಂಟಾಲ್ ಫಸಲು ಬರುವ ನಿರೀಕ್ಷೆ ಇದ್ದು. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹80 ರಿಂದ ₹ 120 ದರ ಇದೆ. ಬಹು ಬೇಡಿಕೆಯಿರುವ ಹಾಗೂ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾದ ಕಪ್ಪು ಗೋಧಿಯನ್ನು ನಮ್ಮ ರೈತರು ಬೆಳೆದು ಅತ್ಯುತ್ತಮ ಆದಾಯ ಪಡೆಯಬಹುದು. ‌

‘ನನ್ನ ಯಶಸ್ವಿ ಕೃಷಿ ಪ್ರಯೋಗಕ್ಕೆ ಪತಿ ಸೇರಿ ಕುಟುಂಬದ ಸದಸ್ಯರು ಪ್ರೋತ್ಸಾಹಿಸಿ ಬೆಂಬಲಿಸಿದ್ದು ಅತೀವ ಸಂತಸವನ್ನುಂಟು ಮಾಡಿದೆ’ ಎನ್ನುತ್ತಾರೆ ಶಾಂತವ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT