ವಿಜಯಪುರ: ಸಿಂದಗಿ ವಿಧಾನಸಭೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ನಗರದ ‘ಸ್ಪೂರ್ತಿ’ ರೆಸಾರ್ಟ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಸಭೆ ನಡೆಯಿತು.
ಅಕ್ಟೋಬರ್ 30 ರಂದು ನಡೆಯುವ ಚುನಾವಣೆಯಲ್ಲಿ ಶತಗತಾಯವಾಗಿ ಸಿಂದಗಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಮಡಿಲಿಗೆ ಹಾಕಿಕೊಳ್ಳ ಬೇಕಾದ ತಂತ್ರಗಳನ್ನು ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಸೂಚಿಸಿದರು.
ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ತಮ್ಮೊಳಗಿನ ಭಿನ್ನಮತ ಮರೆತು, ಒಗ್ಗಟ್ಟಿನಿಂದ ಚುನಾವಣೆ ಗೆಲುವಿಗೆ ಶ್ರಮಿಸಬೇಕು. ಉಪ ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಎಲ್ಲರೂ ಹುರುಪಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಉಸ್ತುವಾರಿಗಳು ಚುನಾವಣೆ ಮುಗಿಯುವವರಿಗೆ ಕ್ಷೇತ್ರ ಬಿಟ್ಟು ಹೋಗಬಾರದು. ಪ್ರತಿ ಗ್ರಾಮ ಪಂಚಾಯ್ತಿವಾರು ನಿಯೋಜಿತ ಮುಖಂಡರು ತೆರಳಿ ಮತಯಾಚಿಸಬೇಕು ಎಂದು ಹೇಳಿದರು.
ಸಿಂದಗಿ ಕ್ಷೇತ್ರದ ಅಭ್ಯರ್ಥಿ ಅಶೋಕ ಮನಗೂಳಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಧ್ರುವ ನಾರಾಯಣ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಮುಖಂಡರುಗಳಾದ ಅಪ್ಪಾಜಿ ನಾಡಗೌಡ, ಬಿ.ಎಸ್. ಪಾಟೀಲ (ಯಾಳಗಿ), ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.