ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ ಶಾಲೆಗಳ ಕೆಡೆಟ್‌ಗಳ ಸಂಭ್ರಮಕ್ಕೆ ತೆರೆ

‘ಏಕ ಭಾರತ, ಶ್ರೇಷ್ಠ ಭಾರತ’ ಅಭಿಯಾನದ ಸಮಾರೋಪ
Last Updated 31 ಜನವರಿ 2019, 12:48 IST
ಅಕ್ಷರ ಗಾತ್ರ

ವಿಜಯಪುರ:ನಗರದ ಸೈನಿಕ ಶಾಲೆಯಲ್ಲಿ ಮೂರು ದಿನ ನಡೆದ ‘ಏಕ ಭಾರತ, ಶ್ರೇಷ್ಠ ಭಾರತ’ ಅಭಿಯಾನದ ಸಮಾರೋಪಕ್ಕೆ ಗುರುವಾರ ತೆರೆ ಬಿತ್ತು.

ಸಮಾರೋಪದ ಕೊನೆ ದಿನವೂ ಸಹ ದೇಶದ ವಿವಿಧೆಡೆಯ ಸೈನಿಕ ಶಾಲೆಗಳ ಕೆಡೆಟ್‌ಗಳು ಸಾಂಸ್ಕೃತಿಕ ರಸದೌತಣ ಉಣಬಡಿಸಿದರು.

ಮಧ್ಯಪ್ರದೇಶ, ಓಡಿಶಾ, ಹರಿಯಾಣ, ಗುಜರಾತ್, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಸೈನಿಕ ಶಾಲೆಯ ಕೆಡೆಟ್‌ಗಳು ತಮ್ಮ ರಾಜ್ಯಗಳ ಸಾಂಪ್ರದಾಯಿಕ ಹಾಗೂ ಜಾನಪದ ಕಲಾ ಶೈಲಿಯ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಸಮಾರೋಪದಲ್ಲೂ ವಿಜಯಪುರ ಸೈನಿಕ ಶಾಲೆಯ ಕೆಡೆಟ್‌ಗಳು ‘ಮಾಯದಂತ ಮಳೆ ಬಂತಮ್ಮ...’ ಜನಪದ ಹಾಡಿಗೆ ಹೆಜ್ಜೆ ಹಾಕಿ ಎಲ್ಲರಿಂದಲೂ ಪ್ರಶಂಸೆಗೊಳಪಟ್ಟರು.

ಸಮಾರೋಪದಲ್ಲಿ ಕೆಡೆಟ್‌ಗಳಿಗೆ ಪಾರಿತೋಷಕ ವಿತರಿಸಿ ಮಾತನಾಡಿದ ಸೈನಿಕ ಶಾಲೆಗಳ ಸೊಸೈಟಿಯ ನಿರೀಕ್ಷಣಾಧಿಕಾರಿ, ವಾಯುಸೇನೆಯ ಹಿರಿಯ ಅಧಿಕಾರಿ ರವಿಕುಮಾರ್‌ ಮಾತನಾಡಿ, ‘ಪ್ರತಿಯೊಬ್ಬ ವಿದ್ಯಾರ್ಥಿ ತಾವು ಪ್ರತಿನಿಧಿಸುವ ರಾಜ್ಯಗಳ ಸಾಂಪ್ರದಾಯಿಕ ನೃತ್ಯ, ಕಲೆ, ಸಂಸ್ಕೃತಿ, ಉಡುಗೆ- ತೊಡುಗೆಗಳನ್ನು ಪ್ರದರ್ಶಿಸುವ ಮೂಲಕ ವಿವಿಧತೆಯನ್ನು ಪರಿಚಯಿಸಿದರು. ಈ ವಿವಿಧತೆಯಲ್ಲೂ ಏಕತೆ ಅಡಗಿದೆ ಎಂಬ ಸಂದೇಶವನ್ನು ಇದೇ ಸಂದರ್ಭ ಸಾರಿದ್ದಾರೆ’ ಎಂದು ಹೇಳಿದರು.

‘ಮೂರು ದಿನದ ಈ ಸಮಾರಂಭವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ತಮಿಳುನಾಡಿನ ತಂಡದಲ್ಲಿ ಗುಜರಾತ್ ಕೆಡೆಟ್‌ಗಳು ಆ ರಾಜ್ಯದ ಸಂಸ್ಕೃತಿಯ ನೃತ್ಯ ಪ್ರದರ್ಶಿಸಿದರೆ, ತಮಿಳುನಾಡಿನ ಸದಸ್ಯರು ದಾಂಡಿಯಾ ಪ್ರದರ್ಶಿಸಿದ್ದು ಸಹ ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ. ಪ್ರತಿಯೊಬ್ಬರು ವಿವಿಧತೆಯಲ್ಲಿ ಏಕತೆಯ ಗುಣವನ್ನು ಜೀವಂತವಾಗಿರಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಹೇಳಿದರು.

ಸೈನಿಕ ಶಾಲೆಯ ಪ್ರಾಚಾರ್ಯ, ನೌಕಾದಳದ ಕ್ಯಾಪ್ಟನ್ ವಿನಯ್ ತಿವಾರಿ, ಉಪ ಪ್ರಾಚಾರ್ಯ ರಾಜೀವ್‌ ಶುಕ್ಲಾ, ಮುರುಳೀಧರನ್, ಕೆ.ದಾಮೋದರ, ಶ್ರೀರಾಮಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT