ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿಗೆ ಸಿಎಂ ಭೇಟಿ, ವೈಮಾನಿಕ ಸಮೀಕ್ಷೆ ನಾಳೆ

ಖಚಿತವಾಗದ ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ
Last Updated 23 ಆಗಸ್ಟ್ 2020, 13:50 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಆಗಸ್ಟ್‌ 25ರಂದು ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮೂರು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಬಹುತೇಕ ಭರ್ತಿಯಾಗಿರುವ ಆಲಮಟ್ಟಿ ಜಲಾಶಯಕ್ಕೆ ಅಂದು ಮುಖ್ಯಮಂತ್ರಿ ಬಾಗಿನ ಅರ್ಪಿಸುವರೆ ಎಂಬುದು ಇನ್ನೂ ಖಚಿತವಾಗಿಲ್ಲ.

‘ಸದ್ಯದ ಮಾಹಿತಿಯ ಪ್ರಕಾರ ಜಲಾಶಯಕ್ಕೆ ಮಾತ್ರ ಸಿಎಂ ಭೇಟಿ ನೀಡಲಿದ್ದು, ಬಾಗಿನ ಅರ್ಪಿಸುವ ಕಾರ್ಯಕ್ರಮ ಇಲ್ಲ. ಒಂದು ವೇಳೆ ಬಾಗಿನ ಅರ್ಪಣೆಗೆ ಇಚ್ಛಿಸಿದ್ದಲ್ಲಿ ಅದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದುಜಿಲ್ಲಾಧಿಕಾರಿ ಹಾಗೂ ಕೆಬಿಜೆಎನ್‌ಎಲ್‌‌ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯಾಲಯ ಬಿಡುಗಡೆ ಮಾಡಿರುವ ಪ್ರವಾಸದ ಪಟ್ಟಿಯಲ್ಲೂ ಆಲಮಟ್ಟಿ ಜಲಾಶಯಕ್ಕೆ ಭೇಟಿ ಎಂಬ ವಿಷಯ ಮಾತ್ರವಿದ್ದು, ಎಲ್ಲಿಯೂ ಕೃಷ್ಣೆಗೆ ಬಾಗಿನ ಅರ್ಪಣೆಯ ವಿಷಯ ಪ್ರಸ್ತಾಪವಾಗಿಲ್ಲ.
ಆದರೆ, ಬಾಗಿನ ಅರ್ಪಿಸಲು ಅಗತ್ಯ ಸಿದ್ಧತೆಯೂ ಆರಂಭಗೊಂಡಿದೆ. ಬಾಗಿನ ಪೂಜೆಗೆ ಕೇವಲ ಇಬ್ಬರೇ ಅರ್ಚಕರು ಇರಬೇಕೆಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ್‌ ಭಾನುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲನೆ:ಆ.25 ರಂದು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಆಲಮಟ್ಟಿಗೆ ಭೇಟಿ ನೀಡಿ, ಕೆಬಿಜೆಎನ್ ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಹೆಲಿಪ್ಯಾಡ್, ಸಭೆ ನಡೆಯುವ ಎಂ.ಡಿ. ಕಚೇರಿ, ಪ್ರವಾಸಿ ಮಂದಿರ, ಜಲಾಶಯದಲ್ಲಿ ಬಾಗಿನ ಅರ್ಪಿಸುವ ಸ್ಥಳ ಪರಿಶೀಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಬೆಳಗಾವಿಯಿಂದ ಆಲಮಟ್ಟಿಗೆ ಮಧ್ಯಾಹ್ನ 12.30ಕ್ಕೆ ಆಗಮಿಸುವ ಮುಖ್ಯಮಂತ್ರಿ ಅವರು ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಆಲಮಟ್ಟಿ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಮಧ್ಯಾಹ್ನ 1ಕ್ಕೆ ಇಲ್ಲಿಯ ಎಂ.ಡಿ ಕಚೇರಿಯಲ್ಲಿ ವಿಜಯಪುರ, ಗದಗ, ಬಾಗಲಕೋಟೆ ಜಿಲ್ಲೆಗಳ ಸಚಿವರು, ಶಾಸಕರು, ಸಂಸತ್ ಸದಸ್ಯರು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಳೆ ಹಾನಿಗೆ ಸಂಬಂಧಿಸಿದ ಚರ್ಚೆ ನಡೆಸಿ, ಮಧ್ಯಾಹ್ನ 2.30ಕ್ಕೆ ಆಲಮಟ್ಟಿಯಿಂದ ಬೆಳಗಾವಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.

ಪ್ರವೇಶ ನಿರ್ಬಂಧ:ಮುಖ್ಯಮಂತ್ರಿಯವರು ಆಲಮಟ್ಟಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಂದು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮುಖ್ಯಮಂತ್ರಿಗೆ ಮನವಿ ಅರ್ಪಣೆಗೂ ಸದ್ಯಕ್ಕೆ ಅವಕಾಶವಿಲ್ಲ ಎಂದರು.

ಆರೋಗ್ಯ ಪರೀಕ್ಷೆ:ಮುಖ್ಯಮಂತ್ರಿಗಳ ಜತೆ ತೀರಾ ಹತ್ತಿರದಲ್ಲಿರಬೇಕಾದ ಇಲ್ಲಿಯ ಅಧಿಕಾರಿಗಳ ಕೋವಿಡ್ ಪರೀಕ್ಷೆಗೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಪ್ರತಿಯೊಬ್ಬರ ಥರ್ಮಲ್‌ ಸ್ಕ್ರೀನಿಂಗ್ ಜತೆಗೆ ಪಲ್ಸ್ ಆಕ್ಸಿಮೀಟರ್ ನಿಂದಲೂ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಹಾರಾಷ್ಟ್ರದ ಜತೆ ಸಂಪರ್ಕ:ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಅಧಿಕಾರಿಗಳ ಜತೆ ಸತತ ಸಂಪರ್ಕ ಇಟ್ಟುಕೊಂಡು ಕೃಷ್ಣೆಯ ಹರಿವಿನ ಮಾಹಿತಿ ವಿನಿಮಯದ ಕಾರಣ ಈ ಬಾರಿ ನೆರೆಯ ಪ್ರವಾಹವನ್ನು ಸಾಕಷ್ಟು ನಿಯಂತ್ರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದರು.

ಎಸ್. ಪಿ. ಅನುಪಮ್ ಅಗರವಾಲ್, ಕೆಬಿಜೆಎನ್ ಎಲ್ ಸುಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಶರಣಪ್ಪ ಚಲವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT