ಮಂಗಳವಾರ, ಮಾರ್ಚ್ 28, 2023
31 °C

ಸೀಮೆ, ಕ್ಷೇತ್ರಕ್ಕೆ ಸೀಮಿತನಲ್ಲ; ಯಾರ ಅನುಮತಿ ಬೇಕಿಲ್ಲ:ಎಂ.ಬಿ.ಪಾಟೀಲ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಾಡಿನ ನೆಲ, ಜಲ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ಮಾತನಾಡಲು ನನಗೆ ಯಾರ ಅನುಮತಿ ಬೇಕಿಲ್ಲ. ಯಾವುದೇ ಸೀಮೆ, ಮತಕ್ಷೇತ್ರಕ್ಕೆ ನಾನು ಸೀಮಿತನಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ಅವರು ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವನಾಗಿ, ಗೃಹ ಸಚಿವನಾಗಿ ಆಡಳಿತ ನಡೆಸಿದ ಅನುಭವ ಇದೆ. ಪ್ರಬುದ್ಧನಿದ್ದೇನೆ. ನನ್ನ ಅವಧಿಯಲ್ಲಿ ಜಾರಿಗೆ ತಂದಿರುವ, ರೂಪಿಸಿರುವ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ತರುತ್ತೇನೆ ಎಂದು ಹೇಳಿದರು.

‘ನನಗೆ ಕೀಳುಮಟ್ಟದ ರಾಜಕಾರಣ, ಯಾವುದೇ ರಾಜಕೀಯ ಲಾಭ ನನಗೆ ಅಗತ್ಯವಿಲ್ಲ. ಅಂತ ಅಧೋಗತಿ  ನನಗೆ ಬಂದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಾರ ಮೇಲೂ ನನಗೆ ಅಸೂಯೆ ಇಲ್ಲ, ಟೀಕೆ–ಟಿಪ್ಪಣಿ ಮಾಡುವುದಿಲ್ಲ. ನೀರಾವರಿ ಸಚಿವನಾಗಿ ತೃಪ್ತಿಕರ ಕೆಲಸ ಮಾಡಿದ್ದೇನೆಯೇ ಹೊರತು ಬೈಯಿಸಿಕೊಳ್ಳುವ ಕೆಲಸ ಮಾಡಿಲ್ಲ’ ಎಂದು ಯಾರ ಹೆಸರೂ ಪ್ರಸ್ತಾಪಿಸದೇ ಟಾಂಗ್‌ ನೀಡಿದರು. 

ಜಿಲ್ಲೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಜಲಸಂಪನ್ಮೂಲ ಸಚಿವನಾಗಿ ಶ್ರಮಿಸಿದ್ದೇನೆ. ಬಾಕಿ ಇರುವ ಯೋಜನೆಗಳ ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರದ ಮೇಲೆ, ಸಂಬಂಧಿಸಿದ ಸಚಿವರ ಮೇಲೆ ಒತ್ತಡ ಹೇರುತ್ತೇನೆ. ಸಚಿವನಾಗುವ ಮೊದಲೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೋರಾಡಿದ್ದೇನೆ. ಸಚಿವನಾಗಿಯೂ ಮಾಡಿದ್ದೇನೆ. ಈಗಲೂ ಶ್ರಮಿಸುತ್ತಿದ್ದೇನೆ. ಮುಂದೆಯೂ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

‘ಮುಖ್ಯಮಂತ್ರಿಗಳು ನಿಮ್ಮ ಮಾತನ್ನು ಕೇಳುತ್ತಾರೆ. ಮನವಿ ಸಲ್ಲಸಿದ ತಕ್ಷಣ ಅನುಮೋದನೆ ನೀಡುತ್ತಾರೆ ಎಂದಾದರೆ ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆ ಅನುಷ್ಠಾನ ಮಾಡಿಸಿಕೊಂಡು ಬನ್ನಿ’ ಎಂಬ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನಾನು ನೀರಾವರಿ ಸಚಿವನಲ್ಲ. ಆದರೂ ಈ ಯೋಜನೆ ಅನುಷ್ಠಾನಕ್ಕೆ ನನ್ನ ಇತಿಮಿತಿಯಲ್ಲಿ ಪ್ರಯತ್ನಿಸುತ್ತೇನೆ. ಈ ಯೋಜನೆ ಅನುಷ್ಠಾನಗೊಳಿಸಲು ಮುಂದಿನ ದಿನಗಳಲ್ಲಿ ಆದ್ಯತೆ ನೀಡುತ್ತೇನೆ’ ಎಂದರು.

ವಚನ ಪಿತಾಮಹಾ ಫ.ಗು.ಹಳಕಟ್ಟಿ ಸಂಪಾದಿಸಿದ ಶಿವಾನುಭವ ಪತ್ರಿಕೆ ಮರುಮುದ್ರಿಸಿ, ಸಂಪುಟ ರೂಪದಲ್ಲಿ ಹೊರತರಲು ಆರ್ಥಿಕ ನೆರವು ಒದಗಿಸುವಂತೆ ಅದೇ ದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಏಕೆ ಅನುದಾನ ನೀಡಲಿಲ್ಲ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ಈ ವಿಷಯವಾಗಿ ಪ್ರಥಮ ಬಾರಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ಅದಕ್ಕೂ ಆರ್ಥಿಕ ನೆರವು ಲಭಿಸುವ ಸಾಧ್ಯತೆ ಇದೆ ಎಂದು ಹೇಳಿದರು. 

***

‘ತಿಡಗುಂದಿ ಅಕ್ಡಾಡೆಕ್ಟ್‌ ನನ್ನ ಯೋಜನೆ’

ವಿಜಯಪುರ: ಏಷ್ಯಾದಲ್ಲೇ ಅತಿ ಎತ್ತರದ ಮತ್ತು ಉದ್ದನೆಯ ತಿಡಗುಂದಿ ಅಕ್ಡಾಡೆಕ್ಟ್‌ ನಿರ್ಮಾಣ ಯೋಜನೆ, ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬುವ ಯೋಜನೆ ಮೂಲ ಅಥವಾ ಪರಿಷ್ಕೃತ ಯೋಜನೆಯಲ್ಲಾಗಲಿ ಇರಲಿಲ್ಲ. ಇದನ್ನು ನಾನು ಹುಟ್ಟುಹಾಕಿದ ಯೋಜನೆಯಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ ಸಮರ್ಥಿಸಿಕೊಂಡರು.

ಕೆಬಿಜಿಎನ್ಎಲ್‌ ಅಧಿಕಾರಿಗಳು, ತಜ್ಞರ ತಂಡವನ್ನು ಮಧ್ಯಪ್ರದೇಶಕ್ಕೆ ಕಳುಹಿಸಿ, ಅಲ್ಲಿ ಅಧ್ಯಯನ ನಡೆಸಿ ಮಧ್ಯಪ್ರದೇಶ ಮಾದರಿ ಯೋಜನೆಯನ್ನು  ರೂಪಿಸಿ, ಅನುಷ್ಠಾನಗೊಳಿಸಿದವನು ನಾನು. ಇದು ನನ್ನ ಕೂಸು ಎಂದು ಹೇಳಿದರು.

ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಬಳಿಕ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಿದ ಮೇಲೆ ಕೈಗೊಳ್ಳಬೇಕಾಗಿದ್ದ ತಿಡಗುಂದಿ ಅಕ್ವಾಡೆಕ್ಟ್‌ ಯೋಜನೆ ಹಾಗೂ ಇಂಡಿ ಭಾಗದ ಕೆರೆ ತುಂಬುವ ಯೋಜನೆಗಳನ್ನು ನಾನು ಆದ್ಯತೆ ಮೇರೆಗೆ ಕೈಗೊಂಡ ಪರಿಣಾಮ ಇಂದು ನೀರು ಹರಿಯುತ್ತಿದೆ ಎಂಬುದುನ್ನು ಟೀಕೆ–ಟಿಪ್ಪಣಿ ಮಾಡುವ ಮುನ್ನ ಅರಿಯಬೇಕು ಎಂದರು.

ರಮೇಶ ಜಾರಕಿಹೊಳಿ ಸಚಿವರಾಗಿದ್ದಾಗ ಅವರ ಮನೆಗೆ ಹೋಗಿ, ಇಂಡಿ ಭಾಗದ 16 ಕೆರೆಗಳನ್ನು ತುಂಬುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೆ. ಬೋರ್ಡ್‌ ಮೀಟಿಂಗ್‌ನಲ್ಲಿ ಅನುಮೋದನೆ ಲಭಿಸಿತ್ತು. ಆದರೆ, ಹಣಕಾಸು ಇಲಾಖೆ ಯೋಜನೆಯನ್ನು ತಡೆಹಿಡಿದಿತ್ತು. ಇದೀಗ ನನ್ನ ಮನವಿ ಮೇರೆಗೆ ಮುಖ್ಯಮಂತ್ರಿ ಯೋಜನೆಗೆ ಅನುದಾನ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಬೆಂಗಳೂರಿನಲ್ಲಿ ಜುಲೈ 9ರಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾಗ, ಹಳ್ಳಕೊಳ್ಳ ತುಂಬುವ ಯೋಜನೆಗೂ ಅನುಮೋದನೆ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಯಾವುದಾದರೂ ಒಂದು ಯೋಜನೆಗೆ ಸದ್ಯ ಅನುಮೋದನೆ ನೀಡುವುದಾಗಿ ಯಡಿಯೂರಪ್ಪನವರು ಹೇಳಿದರು. ಆಗ 16 ಕೆರೆ ತುಂಬುವ ಯೋಜನೆಯನ್ನು ಆದ್ಯತೆ ಮೇರೆಗೆ ಮಾಡುವಂತೆ ವಿನಂತಿಸಿದೆ ಎಂದು ಹೇಳಿದರು.

***

ಸಚಿವನಾಗಿದ್ದಾಗ ಕೆಂಪು ಲೈಟಿನ ಕಾರಲ್ಲಿ ಕುಳಿತು ರಾಜ್ಯ ಸುತ್ತಾಡುತ್ತಾ, ಗೆಸ್ಟ್‌ ಹೌಸ್‌ಗಳಲ್ಲಿ ತಂಗುತ್ತಾ, ಮಜಾ ಹೊಡೆಯುತ್ತಾ ಸುತ್ತಾಡಬಹುದಿತ್ತು. ಅಂಥ ಕೆಲಸ ಮಾಡುವ ಬದಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದೇನೆ 

–ಎಂ.ಬಿ.ಪಾಟೀಲ

ಮಾಜಿ ಜಲಸಂಪನ್ಮೂಲ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು