ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪಚುನಾವಣೆ: ಮೂರೂ ಪಕ್ಷಗಳ ಪ್ರಚಾರ ಭರಾಟೆ

ರಂಗೇರಿದ ಅಖಾಡ, ಪರಸ್ಪರ ಟೀಕೆ, ಪ್ರತಿಟೀಕೆ
Last Updated 15 ಅಕ್ಟೋಬರ್ 2021, 13:54 IST
ಅಕ್ಷರ ಗಾತ್ರ

ಮೋರಟಗಿ (ಸಿಂದಗಿ): ಜನವಿರೋಧಿ ಬಿಜೆಪಿ ಸರ್ಕಾರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಅಂಬಾನಿಯಂಥ ಶ್ರೀಮಂತರ ಹಿತ ಕಾಪಾಡುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಟೀಕಿಸಿದರು.

ತಾಲ್ಲೂಕಿನ ಮೋರಟಗಿಯಲ್ಲಿ ಗುರುವಾರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ‘ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದ 169 ಪ್ರಣಾಳಿಕೆಗಳಲ್ಲಿ 159 ಭರವಸೆಗಳು ಈಡೇರಿಸಿ ಸಿದ್ದರಾಮಯ್ಯ ಅವರು ಎರಡನೇ ದೇವರಾಜ ಅರಸು ಎನಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಾಗಿ ಅಪಾರ ಅನುದಾನ ನೀಡಿದ್ದಾರೆ. ಈ ಭಾಗದ ಕೋರವಾರ ಶಾಖಾ ಕಾಲುವೆ ಮೂಲಕ ಬಹುಹಳ್ಳಿಗಳ ಕುಡಿಯುವ ನೀರು ಯೋಜನೆ ಸಾಕಾರಗೊಂಡಿದೆ‘ ಎಂದು ತಮ್ಮ ಪಕ್ಷದ ಸಾಧನೆಗಳನ್ನು ವಿವರಿಸಿದರು.

ಅ. 18ರಂದು ಮೋರಟಗಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, 'ಈ ಬಾರಿಯ ಚುನಾವಣೆಗೆ ನಾನೂ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಪಕ್ಷ ಅಶೋಕ ಅವರಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಬೇಸರವಿಲ್ಲ. ಅವರ ಗೆಲುವಿಗಾಗಿ ಶ್ರಮಿಸುತ್ತೇನೆ‘ ಎಂದರು.

ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ‘ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರದಲ್ಲಿದೆ. ದೇಶದಲ್ಲಿ ಮುಸ್ಲಿಮರು ಆತಂಕದ ಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿದರೆ ಮಾತ್ರ ಮುಸ್ಲಿಮರು ಉಳಿಯುತ್ತಾರೆ‘ ಎಂದರು.

‘ಜೆಡಿಎಸ್ ಪಕ್ಷದ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರು ಉಪಚುನಾವಣೆಗಳಲ್ಲಿ ಮಾತ್ರ ಮುಸ್ಲಿಮರಿಗೆ ‌ಟಿಕೆಟ್ ನೀಡಿದ್ದಾರೆ. ತಮ್ಮ ಪ್ರದೇಶದ ವಿವಿಧ ಮತಕ್ಷೇತ್ರಗಳಲ್ಲಿ ಉಳಿದ ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತಲ್ಲವೇ‘ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿದ್ದ ಕಾಂಗ್ರೆಸ್‌ನ ಮತ ವಿಭಜನೆ ಮಾಡುವ ಕುತಂತ್ರ ಎಂದರು.

ವೇದಿಕೆಯಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೂ ಆಲಗೂರ, ಸುಭಾಸ ಛಾಯಾಗೋಳ, ಸುರೇಶ ಗೊಣಸಗಿ, ನರಸಿಂಗಪ್ರಸಾದ ತಿವಾರಿ, ಮುರಗೆಪ್ಪಗೌಡ ರದ್ದೇವಾಡಗಿ, ಭಾಗಪ್ಪಗೌಡ ಪಾಟೀಲ ಆಹೇರಿ, ಚನ್ನೂ ವಾರದ, ಮೈಬೂಬ ಕಣ್ಣಿ, ಮಲ್ಲಿಕಾರ್ಜುನ ಸಾವಳಸಂಗ ಇದ್ದರು.

ಜೆಡಿಎಸ್‌ ಅಭ್ಯರ್ಥಿ ಮತಯಾಚನೆ

ಸಿಂದಗಿ: ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿಯವರು ಈಗಾಗಲೇ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಮತದಾರರಿಂದ ವ್ಯಾಪಕ ಬೆಂಬಲವೂ ಉಂಟಾಗಿದೆ. ಆದರೆ ನಮ್ಮ ಎದುರಾಳಿಗಳು ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಕುಹಕ, ಕಪೋಲಕಲ್ಪಿತ ಹಾಗೂ ಪೂರ್ವಾಗ್ರಹಪೀಡಿತ ಮಾತುಗಳ ಮೂಲಕ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ನಮ್ಮ ಅಭ್ಯರ್ಥಿಗೆ ದಿನದಿಂದ ದಿನಕ್ಕೆ ಮತದಾರರ ವ್ಯಾಪಕ ಬೆಂಬಲ ದೊರಕುತ್ತಿರುವ ಹಿನ್ನೆಲೆಯಲ್ಲಿ ಬೆಳವಣಿಗೆ ಸಹಿಸದೇ ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ನಮ್ಮ ಜೆಡಿಎಸ್ ಯಾವುದೇ ಪಕ್ಷದ ಎ ಟೀಮ್, ಬಿ ಟೀಮ್ ಅಲ್ಲ ನಮ್ಮದು ಸ್ವಂತ ಅಸ್ತಿತ್ವ ಹೊಂದಿದ ಪಕ್ಷವಾಗಿದೆ. ಮತದಾರರು ಸುಳ್ಳು ಸುದ್ದಿಗೆ ಕಿವಿಗೊಡಬೇಡಿ. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ‘ ಎಂದು ಅವರು ಕೇಳಿಕೊಂಡಿದ್ದಾರೆ.

ಅಭಿವೃದ್ಧಿಗೆ ಮತ ನೀಡಿ: ರಮೇಶ

ಸಾಸಾಬಾಳ (ಸಿಂದಗಿ): ಅನುಕಂಪದ ಆಧಾರದ ಮೇಲೆ ಅಭ್ಯರ್ಥಿಗೆ ಮತ ನೀಡದೆ ಅಭಿವೃದ್ಧಿ ಆಧಾರದ ಮೇಲೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಮನವಿ ಮಾಡಿದರು.

ತಾಲ್ಲೂಕಿನ ಸಾಸಾಬಾಳ ಗ್ರಾಮದಲ್ಲಿ ಶುಕ್ರವಾರ ಪಾದಾಯಾತ್ರೆ ಮೂಲಕ ಮತಯಾಚನೆ ಮಾಡಿದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿ ‘ಎರಡು ಬಾರಿ ಶಾಸಕನಾಗಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿರುವೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡರೂ, ಕ್ಷೇತ್ರದ ಎಲ್ಲ ಗ್ರಾಮಗಳ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಸರ್ಕಾರದ ಯೋಜನೆಗಳನ್ನು ತಲುಪಿಸುವ ಸೇವೆ ಮಾಡಿರುವೆ‘ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ‘ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಜನಪರ ಯೋಜನೆ ಮನೆ, ಮನೆಗೂ ತಲುಪಿವೆ. ಭೂಸನೂರ ಅವರಿಗೆ ಮತ ನೀಡಿದರೆ ಮತಕ್ಷೇತ್ರದ ಅಭಿವೃದ್ದಿಗಾಗಿ ಮತ ನೀಡಿದಂತೆ‘ ಎಂದು ಮತಯಾಚನೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಸಂತೋಷ ಪಾಟೀಲ ಡಂಬಳ ಮಾತನಾಡಿದರು.

ಸೇರ್ಪಡೆ: ಸಿಂದಗಿ ಪಟ್ಟಣದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ಬಿಜೆಪಿ ಸೇರ್ಪಡೆಗೊಂಡರೆ, ಗುಂದಗಿ ಗ್ರಾಮದಲ್ಲಿ ಸಚಿವ ಸಿ.ಸಿ.ಪಾಟೀಲ ರ ಸಮ್ಮುಖದಲ್ಲಿ ಗ್ರಾಪಂ ಅಧ್ಯಕ್ಷ ಶಿವಶಂಕರ ಕರ್ಜಗಿ, ಬಸವರಾಜ ಭಾಸಗಿ, ಶರಣಯ್ಯ ಮಠಪತಿ, ಸಿದ್ದಪ್ಪ ನೆಗಿನಾಳ, ಮಲಕಪ್ಪ ಭಾಸಗಿ, ಶಂಕರಲಿಂಗ ಪಾಟೀಲ, ಶರಣು ಕುದರಗೊಂಡ ಬಿಜೆಪಿ ಗೆ ಸೇರ್ಪಡೆಗೊಂಡರು.

ಕೋರಳ್ಳಿ ಗ್ರಾಮದಲ್ಲಿ ರಮೇಶ ಕೋರಳ್ಳಿ, ಶರಣು ನಿಂಬಾಳ, ಬಸವರಾಜ ಮಲಘಾಣ, ಮಲಕಪ್ಪ ಮಾದರ, ಮಾಂತೂ ತಳವಾರ, ಸಿದ್ದನಗೌಡ ಬಿರಾದಾರ, ಮಾಳಪ್ಪ ಪೂಜಾರಿ ಬಿಜೆಪಿ ಗೆ ಸೇರ್ಪಡೆಯಾದರು ಎಂದು ಬಿಜೆಪಿ ಮಾಧ್ಯಮ ವಕ್ತಾರ ಸುದರ್ಶನ ಜಂಗಣ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT