ಗುರುವಾರ , ಆಗಸ್ಟ್ 5, 2021
21 °C

ವಿದ್ಯಾರ್ಥಿ ವಿರೋಧಿ ನೀತಿಗೆ ಕಡಿವಾಣ ಹಾಕಿ: ಎಸ್‌ಡಿಪಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಶುಲ್ಕ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಗೆ ಮಣಿಯಬಾರದು ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)‌ದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್‌ ಕೊಡ್ಲಿಪೇಟೆ ಆಗ್ರಹಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಲ್ಕ ಪಾವತಿ ಹೆಸರಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಿರಾಕರಿಸಲಾಗುತ್ತಿದೆ. ಶಾಲಾ ಶುಲ್ಕವನ್ನು ಕಟ್ಟಬೇಕೆಂದು ವಿದ್ಯಾರ್ಥಿಗಳಿಗೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದ್ದು, ಸರ್ಕಾರ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕೂಡಲೇ ಖಾಸಗಿ ಶಾಲೆಗಳ ಸಿಬ್ಬಂದಿಗಳಿಗೆ ₹30 ಸಾವಿರ ಕೋವಿಡ್‌ ಪರಿಹಾರ ಧನ ನೀಡಬೇಕು. ಆಡಳಿತ ಸಮಿತಿಗಳ ಒತ್ತಡಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದು ಆಗ್ರಹಿಸಿದರು.

ರಾಜ್ಯ ಸಮಿತಿ ಸದಸ್ಯ ಅಬ್ದುಲ್‌ ಲತೀಫ್‌ ಮಾತನಾಡಿ, ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ಟ್ಯಾನಿ ಸ್ವಾಮಿ ಅವರ ಸಾವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, 84 ವರ್ಷದ ಹೋರಾಟಗಾರನ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಿ ಜೈಲಿನಲ್ಲಿ ಕೂಡಿಹಾಕಿ ನಿರಂತರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ಜಾಮೀನು ನಿರಾಕಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಸಾವಿರಾರು ನಿರಪರಾಧಿ ಸಾಮಾಜಿಕ ಹೋರಾಟಗಾರರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ ಜಾಮೀನು ರಹಿತವಾದ ಕರಾಳ ಕಾನೂನಿನಡಿ ಬಂಧಿಸಲಾಗುತ್ತಿದೆ. ಸರ್ಕಾರ ಕೂಡಲೇ ಇಂತಹ ನಿರಪರಾಧಿ ಪ್ರಗತಿಪರ, ಎಡ, ದಲಿತ, ಮುಸ್ಲಿಂ ಮತ್ತು ವಿದ್ಯಾರ್ಥಿ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಮಾಧ್ಯಮ ವಕ್ತಾರ ಅಕ್ರಂ ಹಸನ್‌ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲಗಳ ಮೇಲೆ ಅಪಾರ ಪ್ರಮಾಣದ ತೆರಿಗೆ ಹಾಕುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಆಪಾದಿಸಿದರು.

ಕೋವಿಡ್‌ ಲಾಕ್‌ಡೌನ್‌ ನಿಂದ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸರ್ಕಾರ ಈ ಸಮಯದಲ್ಲಿ ಜನಸಾಮಾನ್ಯರ ಸಹಾಯಕ್ಕೆ ಧಾವಿಸಬೇಕೇ ಹೊರತು, ಅವರ ಮೇಲೆ ತೆರಿಗೆಯ ಹೊರೆ ಹಾಕುವುದನ್ನು ನಿಲ್ಲಿಸಬೇಕು ಹಾಗೂ ಕೂಡಲೇ ಶೇ 30ರಷ್ಟು ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ವಿಜಯಪುರ ಜಿಲ್ಲಾ ಮುಖಂಡರಾದ ಶಫೀಕ್‌ ಕಣ್ಣೂರ್‌ ಹಾಗೂ ಇಸಾಕ್‌ ಸಯ್ಯದ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.