ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪಾಲಿಕೆ ಚುನಾವಣೆಯಲ್ಲಿ ಶಾಸಕ ಯತ್ನಾಳಗೆ ಹಿನ್ನೆಡೆ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೂಚಬಾಳ ರಾಜೀನಾಮೆಗೆ ಆಗ್ರಹ
Last Updated 19 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು 24 ಜನತಮ್ಮ ಹಿಂಬಾಲಕರಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದರು. ಆದರೆ, ಇದರಲ್ಲಿ ಗೆದ್ದವರು ಕೇವಲ 9 ಜನ ಮಾತ್ರ ಎಂದು ಬಿಜೆಪಿಯ ಉಚ್ಛಾಟಿತ ಮುಖಂಡ ರವಿಕಾಂತ ಬಗಲಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ 35 ವಾರ್ಡ್‌ಗಳ ಪೈಕಿ ಬಿಜೆಪಿ 17 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಆದರೆ, ಇದರಲ್ಲಿ ಮೂರು ಜನ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 5 ಜನ ಪಕ್ಷದ ಚುನಾಯಿತ ಸದಸ್ಯರಾಗಿದ್ದಾರೆ. ಇನ್ನುಳಿದ 9 ಜನ ಮಾತ್ರ ಯತ್ನಾಳ ಅವರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ ಎಂದರು.

ಪಾಲಿಕೆ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಬಿಜೆಪಿಗೆ 47,759, ಕಾಂಗ್ರೆಸ್‌ಗೆ 40,124, ಪಕ್ಷೇತರರಿಗೆ 38,644, ಜೆಡಿಎಸ್‌ಗೆ 9717, ಎಎಪಿಗೆ 4323 ಹಾಗೂ ನೋಟಾಕ್ಕೆ 1081 ಮತಗಳು ಚಲಾವಣೆಯಾಗಿವೆ. ಈ ಮತಗಳನ್ನು ಪರಿಗಣಿಸಿದರೆಪಾಲಿಕೆ ಚುನಾವಣೆಯಲ್ಲಿ ಯತ್ನಾಳ ಅವರಿಗೆ ದೊಡ್ಡ ಹಿನ್ನೆಡೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯತ್ನಾಳ ಅವರ ಮೇಲೆ ಪರಿಣಾಮ ನಿಶ್ಚಿತ ಎಂದು ವಿಶ್ಲೇಷಿಸಿದರು.

ಇದು ಸರಿಯೇ?

‘ಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹತ್ತಾರು ವರ್ಷಗಳಿಂದ ದುಡಿದವರಿಗೆ, ಪಕ್ಷವನ್ನು ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಟಿಕೆಟ್‌ ನೀಡಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ, ಶಾಸಕರಿಗೆ ಮನವಿ ಮಾಡಿದ್ದೆವು. ಆದರೆ, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ನೀಡದೇ ಶಾಸಕರ ಹಿಂಬಾಲಕರಿಗೆ ಟಿಕೆಟ್‌ ನೀಡಿದರು. ಇದನ್ನು ವಿರೋಧಿಸಿ ನಾನು ಸೇರಿದಂತೆ ಅನೇಕರು ಪಕ್ಷಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಗಳಾಗಿ ಚುನಾವಣೆಗೆ ಸ್ಪರ್ಧಿಸಿದ್ದೆವು. ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷರು ಪಕ್ಷದಿಂದ ಉಚ್ಛಾಟನೆ ಮಾಡಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಸಿದ್ಧಾಂತದ ಪ್ರಕಾರ ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಆನಂತರ ಎಂಬ ಸಿದ್ಧಾಂತವನ್ನು ಗಾಳಿಗೆ ತೂರಿ ನಗರ ಶಾಸಕ ಯತ್ನಾಳರ ಕೈಗೊಂಬೆಯಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘35 ವಾರ್ಡ್‌ಗಳಲ್ಲಿ 33 ವಾರ್ಡ್‌ಗಳಿಗೆ ಮಾತ್ರ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೀರಿ. ಇನ್ನೆರಡು ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳು ಇದ್ದರೂ ಕಣಕ್ಕಿಳಿಸಲು ಅವಕಾಶ ನೀಡದೇ ಅಸಮರ್ಥತೆ ತೋರಿದ್ದೀರಿ’ ಎಂದು ಕೂಚಬಾಳ ವಿರುದ್ಧ ದೂರಿದರು.

‘ಕೇವಲ 10–15 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿ, ಈಗ ಜಿಲ್ಲೆಯ ಅಧ್ಯಕ್ಷರಾಗಿದ್ದೀರಿ. ನಿಮ್ಮ ಸ್ವಂತ ಕ್ಷೇತ್ರವಾದ ಮುದ್ದೇಬಿಹಾಳ ಹಾಗೂ ತಾಳಿಕೋಟೆಯಲ್ಲಿ ಪಕ್ಷ ಸಂಘಟನೆ ಎಷ್ಟು ಮಾಡಿದ್ದೀರಿ ಎಂದು ಜಿಲ್ಲೆಗೆ ಗೊತ್ತಿದೆ’ ಎಂದರು.

‘ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ನಡೆ ಇದೇ ರೀತಿ ಮುಂದುವರಿದರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡುವುದರ ಜೊತೆಗೆ ಪಕ್ಷವನ್ನು ಅದೋಗತಿಗೆ ಒಯ್ಯುವುದು ನಿಶ್ಚಿತ’ ಎಂದರು.‌

‘ಪಕ್ಷದ ಸಂಘಟನೆಗಾಗಿ ತನು, ಮನ, ಧನ ನೀಡಿ ಶ್ರಮಿಸುತ್ತಿರುವ ನಿಷ್ಠಾವಂತ ಕಾರ್ಯ ನಿರ್ವಹಿಸುತ್ತಿದ್ದರೂ ಸಹ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಿಂದ ಕಾರ್ಯಕರ್ತರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಯೋಚಿಸಬೇಕು’ ಎಂದು ಹೇಳಿದರು.

’ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಒಬ್ಬ ಶೃಂಗಾರ ಗೊಂಬೆಯಂತೆ ಇದ್ದಾರೆ. ಪಕ್ಷ ಸಂಘಟನೆ ಮಾಡುವಂತಹ ಯಾವುದೇ ಶಕ್ತಿ ಅವರಲ್ಲಿ ಕಂಡು ಬರುವುದಿಲ್ಲ, ಈ ವಿಷಯವಾಗಿ ರಾಜ್ಯದ ನಾಯಕರಿಗೆ ಹಾಗೂ ಪಕ್ಷದ ಹಿರಿಯರಿಗೆ ಪತ್ರದ ಮೂಲಕ ಹಾಗೂ ಖುದ್ದಾಗಿ ತಿಳಿಸಲಾಗುವುದು’ ಎಂದು ಹೇಳಿದರು.

ಮುಖಂಡರಾದ ಅಭಿಷೇಕ ಸಾವಂತ, ಬಸವರಾಜ ಹಳ್ಳಿ, ಬಾಬು ಚವ್ಹಾಣ, ಬಾಬು ಏಳಗಂಟಿ, ಚಿನ್ನು ಚಿನಮುಡಿ,ಶಿವಾಜಿ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

₹1 ಸಾವಿರ ಕೋಟಿ ಕೊಟ್ಟವರಿಗೆ ಮಂತ್ರಿ, ₹2,500 ಕೋಟಿ ಕೊಟ್ಟವರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಹೇಳಿಕೆ ಯತ್ನಾಳ ಹೇಳಿಕೆ ಕೊಟ್ಟಾಗ ಜಿಲ್ಲಾ ಘಟಕದ ಅಧ್ಯಕ್ಷರು ಮಲಗಿಕೊಂಡಿದ್ದರಾ?

–ರವಿಕಾಂತ ಬಗಲಿ,ಮುಖಂಡ

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯ, ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಗಳೂರು, ಮುಧೋಳದಿಂದ ಹಣ ಬಂದಿದೆ ಎಂದು ಆರೋಪ ಮಾಡಿರುವ ಶಾಸಕರು ಸಿದ್ದೇಶ್ವರ ಗುಡಿಗೆ ಬಂದು ಪ್ರಮಾಣ ಮಾಡಲಿ, ನಾವು ಮಾಡಲು ಸಿದ್ಧರಿದ್ದೇವೆ

–ರಾಜು ಬಿರಾದಾರ,ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT