ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸ್ಫೋಟ; 350 ಜನರಿಗೆ ಪಾಸಿಟಿವ್‌

ಕೋವಿಡ್ ಮಾರ್ಗಸೂಚಿ ಸ್ವಯಂ ಪ್ರೇರಣಿಯಿಂದ ಅನುಸರಿಸಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮನವಿ
Last Updated 20 ಏಪ್ರಿಲ್ 2021, 13:42 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ವೈರಸ್‌ ಲಂಗುಲಗಾಮಿಲ್ಲದೇ ವ್ಯಾಪಿಸತೊಡಗಿದೆ. ಮಂಗಳವಾರ ಒಂದೇ ದಿನ 350 ಜನರಿಗೆ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ.

ವಿಜಯಪುರ ನಗರವೊಂದರಲ್ಲೇ 204 ಜನರಲ್ಲಿ ಕೋವಿಡ್‌ ವೈರಸ್‌ ಕಾಣಿಸಿಕೊಂಡಿದೆ. ಸಿಂದಗಿ ತಾಲ್ಲೂಕಿನಲ್ಲಿ 43, ವಿಜಯಪುರ ಗ್ರಾಮೀಣ 34, ಇಂಡಿಯಲ್ಲಿ 13, ಬಸವನ ಬಾಗೇವಾಡಿಯಲ್ಲಿ 10 ಜನ ಸೇರಿದಂತೆ ಒಟ್ಟು 350 ಜನರಿಗೆ ಸೋಂಕು ತಗುಲಿದೆ.

ಜಿಲ್ಲಾಧಿಕಾರಿ ಸೂಚನೆ:

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

ಸಮಾರಂಭ, ಆಚರಣೆಗ, ಮನರಂಜನೆ ಕಾರ್ಯಕ್ರಮಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಿದೆ ಎಂದು ಅವರು ಸೂಚಿಸಿದ್ದಾರೆ.

ಮದುವೆಗೆ 200 ಜನಸಂಖ್ಯೆ(ತೆರೆದ ಪ್ರದೇಶ) ಮೀರದಂತೆ ಹಾಗೂ ಕಲ್ಯಾಣ ಮಂಟಪ ಇತ್ಯಾದಿ (ಮುಚ್ಚಿದ ಪ್ರದೇಶಗಳು)100 ಜನ ಮೀರದಂತೆ ಆಚರಿಸಬಹುದು.

ಜನ್ಮದಿನ ಹಾಗೂ ಇತರೆ ಆಚರಣೆಗಳಲ್ಲಿ 50 ಜನ ಮೀರದಂತೆ (ತೆರೆದ ಪ್ರದೇಶಗಳು) 25 ಜನ ಮೀರದಂತೆ ಸಭಾಂಗಣಗಳು ಹಾಲ್‍ಗಳು ಇತ್ಯಾದಿ (ಮುಚ್ಚಿದ ಪ್ರದೇಶಗಳು) ಅಂತ್ಯಕ್ರಿಯೆಯಲ್ಲಿ 25 ಜನ ಮೀರದಂತೆ ಇರಬೇಕು.

ಇತರೆ ಸಮಾರಂಭಗಳು 50 ಜನ ಮೀರದಂತೆ ಸಭಾಂಗಣದ ವಿಸ್ತೀರ್ಣಕ್ಕೆ ಅನುಗುಣವಾಗಿ ಇರಬೇಕು. ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ. ರಾಜಕೀಯ ಆಚರಣೆಗಳು, ಸಮಾರಂಭಗಳಲ್ಲಿ ಜನಸಂಖ್ಯೆ 200 ಮೀರದಂತೆ (ತೆರೆದ ಪ್ರದೇಶಗಳಲ್ಲಿ) ಇರಬೇಕು ಎಂದು ತಿಳಿಸಿದ್ದಾರೆ.

ಸರ್ಕಾರ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಕರು, ಕಟ್ಟಡ ಮಾಲೀಕರು ಕಾರ್ಯಕ್ರಮದ ಬಗ್ಗೆ ಕನಿಷ್ಠ 15 ದಿನಗಳ ಮುಂಚಿತವಾಗಿಯೇ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ಈ ಮಾಹಿತಿಯಂತೆ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಸಂಖ್ಯೆಗೆ ಅನುಗುಣವಾಗಿ ಪಾಸ್‍ಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಪಡೆಯಬೇಕು. ಕಾರ್ಯಕ್ರಮ ದಿನದಂದು ಅಧಿಕಾರಿಗಳು ತಪಾಸಣೆಗೆ ಬಂದಾಗ ವಿತರಿಸಲಾದ ಪಾಸ್‌ಗಳನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಹೇಳಿದ್ದಾರೆ.

ಒಂದು ವೇಳೆ ಪಾಸ್ ವಿತರಿಸಲಾದ ವ್ಯಕ್ತಿಯ ಬದಲಿಗೆ ಬೇರೆ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಆಗಮಿಸಿದಲ್ಲಿ ಅಥವಾ ಪಾಸ್ ರಹಿತ ವ್ಯಕ್ತಿಗಳು ಇದ್ದಲ್ಲಿ ಅಂಥವರ ವಿರುದ್ಧ ಹಾಗೂ ಸಂಬಂಧಿಸಿದ ಸಮುದಾಯ ಭವನ, ಕಲ್ಯಾಣ ಮಂಟಪ ಮಾಲೀಕರು, ವ್ಯವಸ್ಥಾಪಕರು ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮ ಜರುಗಿಸಲಾಗುವುದು. ಪಾಸುಗಳನ್ನು ಗ್ರಾಮೀಣ ಭಾಗದಲ್ಲಿ ಆಯಾ ತಹಶೀಲ್ದಾರರಿಂದ ಹಾಗೂ ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳಿಂದ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡುಬಂದರೆ ಕೂಡಲೇ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಎಂದು ತಿಳಿಸಿದ್ದಾರೆ.

45 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಲಸಿಕೆಯನ್ನು ಪಡೆದುಕೊಳ್ಳಬೇಕು. ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟರೆ ಆಸ್ಪತ್ರೆಗೆ ದಾಖಲಾಗಬೇಕು. ಇಲ್ಲವೇ, ವೈದ್ಯರ ಸಲಹೆಯಂತೆ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ.

ಕೋವಿಡ್ ಪಾಸಿಟಿವ್ ಸಂಪರ್ಕದಲ್ಲಿ ಇದ್ದವರಿಗೆ ರೋಗಲಕ್ಷಣಗಳು ಇಲ್ಲದಿದ್ದರೂ ಪರೀಕ್ಷೆಗೆ ಒಳಗಾಗಬೇಕು ಹಾಗೂ ವೈದ್ಯರ ಸಲಹೆಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹೊರರಾಜ್ಯಗಳಿಗೆ ಪ್ರಯಾಣವಿದ್ದಲ್ಲಿ ಮುಂದೂಡುವುದು ಅವಶ್ಯಕ. ಅನಾವಶ್ಯಕವಾಗಿ ಮನೆಯಿಂದ ಹೊರ ಹೋಗುವುದನ್ನು ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

***

ಕೋವಿಡ್-19 ಸಾಂಕ್ರಾಮಿಕ ಎರಡನೇ ಅಲೆ ತಡೆಗಟ್ಟಲು ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸೋಂಕನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಸಹಕಾರ ನೀಡಬೇಕು

–ಪಿ.ಸುನೀಲ್‌ಕುಮಾರ್‌, ಜಿಲ್ಲಾಧಿಕಾರಿ

***

ಲಾಕ್‌ಡೌನ್‌ ಮಾಡಿದರೆ ಮಾತ್ರ ನಮ್ಮ ಹಿರಿಯರನ್ನು ಕೋವಿಡ್‌ನಿಂದ ಉಳಿಸಿಕೊಳ್ಳಲು ಸಾಧ್ಯ. ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌, ರೆಮಿಡೆಸಿವಿರ್‌ ಔಷಧ ಸಿಗುತ್ತಿಲ್ಲ. ಸರ್ಕಾರ ಆದ್ಯತೆ ಮೇಲೆ ಒದಗಿಸಬೇಕು

ರಿಜ್ವಾನ್‌ ಜಹಗೀರ್‌ದಾರ್‌

ದ್ರಾಕ್ಷಿ ಬೆಳೆಗಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT