ಶನಿವಾರ, ಜುಲೈ 24, 2021
22 °C

‘ಮಂದಿ ಮಾತಿಗೆ ಕಿವಿಗೊಡಬೇಡಿ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕೋವಿಡ್‌ ರೋಗದ ಬಗ್ಗೆ ನೈಜತೆಗಿಂತ ಊಹಾಪೂಹದ ಮಾತುಗಳೇ ಸಮಾಜದಲ್ಲಿ ಹೆಚ್ಚಾಗಿವೆ. ರೋಗದ ಕುರಿತು ಮಂದಿ ಹೇಳುವ ಆತಂಕಕಾರಿ ಮಾತಿಗೆ ಅಂಜಬಾರದು. ವಿಲ್‌ ಪವರ್‌ ಹೆಚ್ಚಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೋವಿಡ್‌ ಪೀಡಿತರನ್ನು ಸಮಾಜ ತಾರತಮ್ಯದಿಂದ ನೋಡಬಾರದು’ ಎಂದು ಕೋವಿಡ್‌ನಿಂದ ಗುಣಮುಖರಾಗಿರುವ ವಿಜಯಪುರದ ಪತ್ರಿಕಾ ಛಾಯಾಗ್ರಾಹಕ ಮಜರ್‌ ಕಲಾದಗಿ ಹೇಳಿದರು.

‘ಏಪ್ರಿಲ್‌ 24 ರಂದು ಜಿಲ್ಲಾಸ್ಪತ್ರೆಯಲ್ಲಿ ಪತ್ರಕರ್ತರಿಗೆ ಕೋವಿಡ್‌ ಪರೀಕ್ಷೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಆ ಸಂದರ್ಭದಲ್ಲಿ ಇತರೆ ಪತ್ರಕರ್ತರೊಂದಿಗೆ ನಾನೂ ಸಹ ಪರೀಕ್ಷೆಗೆ ಒಳಗಾಗಿದ್ದೆ. ನನಗೆ ಯಾವುದೇ ರೋಗ ಲಕ್ಷಣಗಳಾಗಲಿ, ಆರೋಗ್ಯವಾಗಿದ್ದೆ. ಆದರೆ, ಪರೀಕ್ಷಾ ವರದಿ ಕೋವಿಡ್‌ ಪಾಸಿಟಿವ್‌ ಎಂದು ಬಂದಿತ್ತು. ಮನೆಮಂದಿಯಲ್ಲ ಗಾಬರಿಯಾದರು’ ಎಂದು ಅವರು ನೆನಪಿಸಿಕೊಂಡರು.

‘ವೈದ್ಯರು ನನ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಕುಟುಂಬದವರನ್ನು ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿ ಇಟ್ಟರು. ಎರಡು–ಮೂರು ದಿನ ಕಣ್ಣಿಗೆ ನಿದ್ರೆಯೇ ಬರಲಿಲ್ಲ’ ಎಂದರು.

‘ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ವೈದ್ಯರು ಬಹಳ ಚನ್ನಾಗಿ ಉಪಚರಿಸಿದರು. ವೈದ್ಯರು ನನಗೆ ತುಂಬಾ ಧೈರ್ಯ ತುಂಬಿದರು. ಬಳಿಕ ರಿಲ್ಯಾಕ್ಸ್‌ ಆದೆ. ನಾಲ್ಕೈದು ದಿನಗಳ ಬಳಿಕ ಆಸ್ಪತ್ರೆಗೆ ಗಾಬರಿಯಿಂದ ಬರುವ ಹೊಸ ರೋಗಿಗಳಿಗೆ ನಾನೇ ಧೈರ್ಯ ತುಂಬಿದೆ. ಏನೂ ಆಗಲ್ಲ ಎಂದು ಬುದ್ದಿ ಮಾತು ಹೇಳಿದೆ. 14 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್‌ ಆದೆ’ ಎಂದು ಹೇಳಿದರು.

‘ರಂಜಾನ್‌ ಮಾಸದಲ್ಲೇ ನನಗೆ ಕೋವಿಡ್‌ ಪಾಸಿಟಿವ್ ಬಂದು ಆಸ್ಪತ್ರೆಯಲ್ಲಿ ಇದ್ದೆ. ಹಬ್ಬಕ್ಕೆ ಎರಡು ದಿನ ಇದ್ದಾಗ ಮನೆಗೆ ಬಂದೆ. ಕುಟುಂಬದವರು ನಿರಾಳರಾದರು’ ಎಂದರು.

‘ಕೋವಿಡ್‌ ಬಂದ ತಕ್ಷಣ ಯಾರೂ ಸಾಯುವುದಿಲ್ಲ. ಒಂದು ವೇಳೆ ಕೋವಿಡ್‌ ಪಾಸಿಟಿವ್‌ ಬಂದರೆ ಅಂಜಬೇಡಿ. ನಿಮ್ಮ ಮೇಲೆ ನೀವು ವಿಶ್ವಾಸವಿಡಿ. ವೈದ್ಯರು ಹೇಳಿದ ಹಾಗೆ ಕೇಳಿ. ಗುಳಿಗೆ, ಔಷಧ ಸೇವಿಸಿ. ಚನ್ನಾಗಿ ಊಟ ಮಾಡಿ. ಅನಗತ್ಯವಾಗಿ ಟೆನ್ಷನ್‌ ಮಾಡಿಕೊಳ್ಳಬೇಡಿ. ಪ್ರೀ ಮೈಂಡೆಡ್‌ ಆಗಿದ್ದರೆ ಕೊರೊನಾ ವೈರಸ್‌ ಅನ್ನು ಸುಲಭವಾಗಿ ಗೆಲ್ಲಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.