ಗುರುವಾರ , ಜನವರಿ 20, 2022
15 °C
ಅನುದಾನ ಕೊರತೆ; ಅರ್ಧಕ್ಕೆ ನಿಂತ ಅಭಿವೃದ್ಧಿ ಕಾಮಗಾರಿಗಳು

ಕೋವಿಡ್‌ ನೆಪ; ‘ಬಾರಾಕಮಾನ್‌’ಗಳಿಗೆ ಬರವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕಟ್ಟಿದರೆ ಗುಮ್ಮಟ; ಬಿಟ್ಟರೆ ಬಾರಾಕಮಾನ್‌‘ ಎಂಬ ಮಾತು ಆದಿಲ್‌ಶಾಹಿ ಅರಸರ ಕಾಲದಿಂದಲೂ ವಿಜಯಪುರಕ್ಕೆ ಹೊಸದಲ್ಲ. ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಈ ಮಾತು ಅನ್ವರ್ಥ.

ಹೌದು, ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ವಿಚಾರಿಸಿದರೆ ಕೋವಿಡ್‌ ಕಾರಣದಿಂದ ಅನುದಾನ ಬಿಡುಗಡೆಯಾಗದೇ ಅರ್ಧಕ್ಕೆ ನಿಂತಿವೆ. ಅನುದಾನ ಬಂದ ಬಳಿಕ ಕಾಮಗಾರಿ ಆರಂಭಿಸುವುದಾಗಿ ನೆಪ ಹೇಳುತ್ತಾರೆ. ಆದರೆ, ಬಹುತೇಕ ಕಾಮಗಾರಿಗಳು ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅರ್ಧಕ್ಕೆ ನಿಂತಿವೆ.

ವಿಜಯಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಸೈಕ್ಲಿಂಗ್‌ ವೆಲೋಡ್ರೋಮ್‌, ಇಬ್ರಾಹಿಂಪುರ ರೈಲ್ವೇ ಮೇಲ್ಸೇತುವೆ ಸೇರಿದಂತೆ ಅನೇಕ ರಸ್ತೆ, ಸೇತುವೆ, ವೃತ್ತಗಳು,  ನೀರು ಪೂರೈಕೆ ಯೋಜನೆ, ಯುಜಿಡಿ ಕಾಮಗಾರಿ, ಸರ್ಕಾರಿ ಕಚೇರಿ ಕಟ್ಟಡ, ಸಮುದಾಯಭವನ, ಶಾಲಾ ಕಟ್ಟಡಗಳು ಅರ್ಧಕ್ಕೆ ನಿಂತಿರುವುದನ್ನು ಉದಾಹರಣೆಯಾಗಿ ನೀಡಬಹುದಾಗಿದೆ. 

ಕಾಮಗಾರಿಗಳಿಗೆ ಅರ್ಧಚಂದ್ರ:

ಚಡಚಣ ನೂತನ ತಾಲ್ಲೂಕು ರಚನೆಯಾದ ಬಳಿಕ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗಿವೆ.

ಎರಡು ವರ್ಷಗಳ ಹಿಂದೆ ಪಟ್ಟಣದ  ಮುಖ್ಯ ರಸ್ತೆಯನ್ನು ಕಾಂಕ್ರೆಟ್‌ ರಸ್ತೆಯನ್ನಾಗಿ ಪರಿವರ್ತಿಸಲು ಮಂಜೂರಾತಿ ದೊರೆಯಿತು.   ₹ 4 ಕೋಟಿ ವೆಚ್ಚದ ಕಾಮಗಾರಿ ಅರಂಭಗೊಂಡು ಶೇ75 ರಷ್ಟು ಕಾಮಗಾರಿ ಮುಗಿಯುವ ಹಂತದಲ್ಲಿಯೇ ಸ್ಥಗಿತಗೊಂಡಿದೆ. ಇದರಿಂದಾಗಿ ರಸ್ತೆ ಪಕ್ಕದಲ್ಲಿನ ಅಂಗಡಿಗಳ ವ್ಯಾಪಾರಕ್ಕೆ ಹೊಡೆತಬಿದ್ದಿದೆ, ನಾಗರಿಕರಿಗೆ, ವಾಹನ ಸವಾರರಿಗೂ ತೀವ್ರ ತೊಂದರೆ ಉಂಟಾಗಿದೆ.  

ಈ ಅರ್ಧಚಂದ್ರ ಕಾಮಗಾರಿಗೆಯ ಹಿಂದೆ ರಾಜಕೀಯ ದಾಳ ಅಡಗಿದೆ ಎಂದು ಸಾರ್ವಜನಿಕರು ಅರೋಪಿಸುತ್ತಿದ್ದಾರೆ.

ಚಡಚಣ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ರಸ್ತೆಗಳ ನಿರ್ಮಾಣ, ಸಣ್ಣ ಹಾಗೂ ಬೃಹತ್‌ ನಿರಾವರಿ ಯೋಜನೆಗಳ ಮಂಜೂರಾದ ನೂರಾರು ಕೋಟಿ ಮೊತ್ತದ 130 ಕಾಮಗಾರಿಗಳನ್ನು ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರೊಬ್ಬರು ತಡೆ ಹಿಡಿದಿದ್ದಾರೆ. ಈ ಬಗ್ಗೆ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುತ್ತಾರೆ  ನಾಗಠಾಣ ಶಾಸಕ ದೇವಾನಂದ ಚವ್ಹಾಣ.

ಶಾಂತವೀರ ಶ್ರೀ ವನ:

ಸಿಂದಗಿ ಪಟ್ಟಣದ ಗೋಲಗೇರಿ ರಸ್ತೆಯಲ್ಲಿ ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ ಅಡಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಭೂ ಸೇನಾ ನಿಗಮದಿಂದ ನಿರ್ಮಾಣವಾಗಬೇಕಿದ್ದ ’ಸಿಂದಗಿ ಸಿರಿ ಶಾಂತವೀರ ಶ್ರೀ ವನ‘ ಕಳೆದ ಎರಡೂವರೆ ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿದೆ. ಈಗಾಗಲೇ ₹ 1 ಕೋಟಿ  ವೆಚ್ಚವಾಗಿದ್ದರೂ ಎದ್ದು ಕಾಣುವಂಥ ಯಾವ ಕೆಲಸವೂ ಆಗಿಲ್ಲ.  

ಇನ್ನೂ ಪ್ರವಾಸೋದ್ಯಮ ಇಲಾಖೆಯಿಂದ ₹1.50 ಕೋಟಿ, ತೋಟಗಾರಿಕೆ ಇಲಾಖೆಯಿಂದ ₹ 50 ಲಕ್ಷ  ಬಿಡುಗಡೆಗೊಳ್ಳಬೇಕಿದೆ. ಹಣ ಬಿಡುಗಡೆಗೊಂಡ ನಂತರ ಬಾಕಿ ಉಳಿದ ಕಾಮಗಾರಿ ಮಾಡಲಾಗುವುದು ಎಂದು ಭೂಸೇನಾ ನಿಮಗದ ಎಇಇ ಮುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಕಾಮಗಾರಿ ಹಣ ಎತ್ತಿ ಹಾಕಲಾಗಿದ್ದರಿಂದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಆಗಲೇ ಅಲ್ಲಿ ಅವಶೇಷವೂ ಇಲ್ಲದ ಪರಿಸ್ಥಿತಿ ಇದೆ ಎಂದು ಪುರಸಭೆ ಸದಸ್ಯ ಹಣಮಂತ ಸುಣಗಾರ ಆರೋಪಿಸಿದ್ದಾರೆ.

ಮಲಘಾಣ ರಸ್ತೆ ಕ್ರಾಸ್‌ನಲ್ಲಿ ಕಳೆದ ಏಳು ವರ್ಷಗಳ ಹಿಂದೆ ಪುರಸಭೆಯಿಂದ ನಿರ್ಮಾಣಗೊಂಡು ಅರ್ಧಕ್ಕೆ ನಿಂತ ಮಟನ್ ಮಾರ್ಕೆಟ್ ವ್ಯರ್ಥವಾಗಿದೆ.

ಸ್ವಾಮಿ ವಿವೇಕಾನಂದ ವೃತ್ತದಲ್ಲಿದ್ದ ವಿವೇಕಾನಂದ ಪುತ್ಥಳಿ ತೆಗೆದು ಅಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡುವುದಾಗಿ ವೃತ್ತದ ಕೆಲಸ ಕೈಗೆತ್ತಿಕೊಂಡರೂ ಕಳೆದ ಎರಡು ವರ್ಷಗಳಿಂದ ಅರ್ಧಕ್ಕೆ ನಿಂತಿದೆ. 

ಆರಂಭವಾಗದ ನೂತನ ಕಟ್ಟಡ:

ದೇವರಹಿಪ್ಪರಗಿ ಪಟ್ಟಣದ ಆಡಳಿತ ಕೇಂದ್ರ ಪಟ್ಟಣ ಪಂಚಾಯಿತಿ ನೂತನ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮೂರು ತಿಂಗಳಾದರೂ ಇನ್ನೂ ಕಟ್ಟಡದ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.

ಜುಲೈನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇಸಲಾಗಿತ್ತು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಮುಂದಿನ 9 ತಿಂಗಳಲ್ಲಿ ನೂತನ ಪಂಚಾಯಿತಿ ಕಟ್ಟಡ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದರು. ಆದರೆ, ನವೆಂಬರ್ ಆದರೂ  ಸಹ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿಲ್ಲ.  

ಪಟ್ಟಣ ಪಂಚಾಯಿತಿ ನೂತನ ಕಟ್ಟಡದ ನಿರ್ಮಾಣ ಕಾರ್ಯ ವಿಳಂಬವಾಗಿದ್ದು, ಈ ಕುರಿತು ಗುತ್ತಿಗೆದಾರರೊಂದಿಗೆ ಮಾತನಾಡಿದ್ದು, ಕೆಲವೇ ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿರುವುದಾಗಿ ದೇವರ ಹಿಪ್ಪರಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಹೇಳಿದರು.

ಸೈಕ್ಲಿಂಗ್‌ ವೆಲೋಡ್ರೋಮ್‌

ವಿಜಯಪುರ: ರಾಷ್ಟ್ರ, ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ಗಳ ತವರು ವಿಜಯಪುರ. ಇಲ್ಲಿಯ ಸೈಕ್ಲಿಸ್ಟ್‌ಗಳು ಮೂರು ದಶಕದಿಂದ ಸೈಕ್ಲಿಂಗ್‌ ತರಬೇತಿ ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಸಂಬಂಧ ವೆಲೋಡ್ರೋಮ್‌ ಬೇಡಿಕೆ ಇಟ್ಟಿದ್ದು, ಇದುವರೆಗೂ ಈಡೇರಿಲ್ಲ!

ಹೌದು, ಜಿಲ್ಲೆಯ ಸೈಕ್ಲಿಸ್ಟ್‌ಗಳ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಅಭಯಚಂದ್ರ ಜೈನ್‌ ಅವರು 2015ರಲ್ಲಿ ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆ ಸಮೀಪ, ಕೆಎಂಎಫ್‌ ಎದುರು ಸೈಕ್ಲಿಂಗ್‌ ವೆಲೋಡ್ರೋಮ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಆರು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

8.10 ಎಕರೆ ಜಾಗದಲ್ಲಿ ₹7.34 ಕೋಟಿ ಮೊತ್ತದಲ್ಲಿ ಸುಸಜ್ಜಿತ ಅಂತರರಾಷ್ಟ್ರೀಯ ಮಟ್ಟದ 300.33 ಮೀಟರ್‌ ಸುತ್ತಳತೆಯ ಸೈಕ್ಲಿಂಗ್‌ ವೆಲೋಡ್ರೊಮ್‌ ನಿರ್ಮಾಣ ಕಾಮಗಾರಿಯನ್ನು ದಾವಣಗೆರೆಯ ’ಮಾರುತಿ ಕನ್‌ಸ್ಟ್ರಕ್ಷನ್‌‘ಗೆ ವಹಿಸಲಾಗಿತ್ತು. ಆದರೆ, ಕಾಮಗಾರಿ ತಾಂತ್ರಿಕ ದೋಷದಿಂದ ಪೂರ್ಣವಾಗದೇ ಅರ್ಧಕ್ಕೆ ನಿಂತಿದೆ.  

ಅರ್ಧಕ್ಕೆ ನಿಂತಿರುವ ವೆಲೋಡ್ರೋಮ್‌ ಕಾಮಗಾರಿ ಪರಿಶೀಲನೆ ಮತ್ತು ಆದಷ್ಟು ಶೀಘ್ರ ಪೂರ್ಣಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಅವರ ನೇತೃತ್ವದಲ್ಲಿ ಸಮಿತಿಯೊಂದು ಇತ್ತೀಚೆಗೆ ರಚನೆಯಾಗಿದೆ. ಯಾವಾಗ ವೆಲೋಡ್ರೋಮ್‌ ಪೂರ್ಣಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.

ಜಿಲ್ಲೆಯ ಸೈಕ್ಲಿಸ್ಟ್‌ಗಳಿಗೆ ತರಬೇತಿಗೆ ಸೂಕ್ತ ವೆಲೋಡ್ರೋಮ್‌ ಇಲ್ಲದ ಕಾರಣ ಹೆದ್ದಾರಿ, ರಸ್ತೆಗಳ ಮೇಲೆ ನಿತ್ಯ ತರಬೇತಿ ಮಾಡುತ್ತಾರೆ. ಈ ವೇಳೆ ಮೂರು ಯುವ ಸೈಕ್ಲಿಸ್ಟ್‌ಗಳು ಅಪಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 15 ಜನ ಕೈಕಾಲು ಮುರಿದುಕೊಂಡಿದ್ದಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಮೇಚೂರ್‌ ಸೈಕ್ಲಿಂಗ್‌ ಅಸೋಸಿಯೇಷನ್‌ ಅಧ್ಯಕ್ಷ ರಾಜು ಬಿರಾದಾರ.

ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ

ವಿಜಯ‍ಪುರ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿ ಇಬ್ರಾಹಿಂಪುರ ರೈಲ್ವೆ ಗೇಟ್‌ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷ ಸಮೀಪಿಸುತ್ತಾ ಬಂದರೂ ಮುಗಿಯುವ ಸೂಚನೆಗಳು ಕಂಡುಬರುತ್ತಿಲ್ಲ.

ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಯ ವೆಚ್ಚ ಹಂಚಿಕೆ ಆಧಾರದ ಮೇಲೆ ಇಬ್ರಾಹಿಂಪುರ ರೈಲ್ವೆ ಗೇಟ್ ಮೇಲ್ಸೇತುವೆ(ಆರ್‌ಒಬಿ)ಯನ್ನು ₹23 ಕೋಟಿ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಈ ರೈಲ್ವೆ ಮೇಲ್ಸೇತುವೆಯನ್ನು ಎಂ.ವಿ.ಕನ್‌ಸ್ಟ್ರಕ್ಷನ್‌ ನಿರ್ಮಿಸುತ್ತಿದೆ. ಒಟ್ಟು 700 ಮೀಟರ್‌ ಉದ್ದ ಮತ್ತು 7.5 ಮೀಟರ್‌ ಅಗಲ ಇರುವ ದ್ವಿಪಥವನ್ನು ಒಳಗೊಂಡಿದೆ.

ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ಬಳಿಕ ಒಂದು ವರ್ಷದಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಿರುವುದರಿಂದ ಜನ, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ಭಾಗದ ಜನರು ನಗರಕ್ಕೆ ಬರಬೇಕೆಂದರೆ ಬೈಪಾಸ್‌ ಮೂಲಕ ಎರಡರಿಂದ ಮೂರು ಕಿ.ಮೀ. ಸುತ್ತುಹಾಕಿ ಬಾಗಲಕೋಟೆ ರಸ್ತೆ ಮೂಲಕವಾಗಿ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇಬ್ರಾಹಿಂಪುರ ಭಾಗದ ಅಂಗಡಿ, ಹೋಟೆಲ್‌ ವ್ಯಾಪಾರ, ವಹಿವಾಟು ಇಲ್ಲದೇ ಹಾಗೂ ಆಟೊ ಚಾಲಕರು ಪ್ರಯಾಣಿಕರಿಲ್ಲದೆ ತೀವ್ರ ನಷ್ಠ ಅನುಭವಿಸುತ್ತಿದ್ದಾರೆ. ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಿಂದ ಬೇಸಿಗೆಯಲ್ಲಿ ಏಳುತ್ತಿರುವ ದೂಳು, ಮಳೆಗಾಲದಲ್ಲಿ ಉಂಟಾಗುತ್ತಿರುವ ಕೆಸರಿನಿಂದ ಇಲ್ಲಿಯ ಜನ ಜೀವನ, ಆರೋಗ್ಯವೇ ಏರುಪೇರಾಗಿದೆ. 

–ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಅಮರನಾಥ ಹಿರೇಮಠ, ಅಲ್ಲಮಪ್ರಭು ಕರಜಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು