ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ ಭಾರತ ಯೋಜನೆಯಡಿ ಕೋವಿಡ್‌ ಚಿಕಿತ್ಸೆ

ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ ಸೂಚನೆ
Last Updated 14 ಆಗಸ್ಟ್ 2020, 14:58 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ (ಎ.ಬಿ.ಎ.ಆರ್.ಕೆ) ಯೋಜನೆಯಡಿ ದಾಖಲಾಗಬೇಕು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.

ನಗರದಲ್ಲಿ ಶುಕ್ರವಾರ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಲು ಅವರ ಆಧಾರ್‌ ಹಾಗೂ ಬಿ.ಪಿ.ಎಲ್ ಚೀಟಿಯನ್ನು ಪಡೆದು ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ ಚಿಕಿತ್ಸೆ ನೀಡುವಂತಾಗಬೇಕು. ಇದರಿಂದ ರೋಗಿಗಳು ಭರಿಸುವ ವೆಚ್ಚ ಕಡಿಮೆಯಾಗಲಿದ್ದು, ಬಡವರಿಗೆ ಸಹಾಯವಾಗಲಿದೆ ಎಂದರು.

ಆಯುಷ್ಮಾನ್ ಭಾರತ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸುವಾಗ ಅವರಿಗೆ ತಿಳಿವಳಿಕೆ ನೀಡಿ, ಆಧಾರ್‌ ಹಾಗೂ ಬಿ.ಪಿ.ಎಲ್ ಕಾರ್ಡ್‌ ಪ್ರತಿಗಳನ್ನು ಪಡೆದುಕೊಂಡು ಚಿಕಿತ್ಸೆ ನೀಡುವಂತಾಗಬೇಕು ಎಂದು ಸೂಚಿಸಿದರು.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚಿನ ದರ ವಸೂಲಿ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಭರಿಸದಂತೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ರೋಗಲಕ್ಷಣಗಳಿಲ್ಲದ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ ರೋಗಿಗಳಿಗೆ ಆಹಾರ ಹಾಗೂ ಮೂಲಸೌಕರ್ಯದ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಒಟ್ಟು 10 ಆಂಬುಲೆನ್ಸ್ ಇವೆ. ಇದರ ಜೊತೆಗೆ ಕೋವಿಡ್ ರೋಗದಿಂದ ಮೃತ ಪಟ್ಟವರ ಅಂತ್ಯಕ್ರಿಯೆಗೆ ನೆರವಾಗಲು ಎರಡು ವಾಹನಗಳನ್ನು ಇಡಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್‌ ಅವಶ್ಯಕತೆ ಇದ್ದಲ್ಲಿ ಗಮನಕ್ಕೆ ತಕ್ಷಣ ತರಬೇಕು ಎಂದು ಸೂಚಿಸಿದರು.

ಪ್ರವಾಹ ಮುನ್ನೆಚ್ಚರಿಕೆಗೆ ಸೂಚನೆ:ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿ ಸಾಕಷ್ಟು ಹಾನಿಗಳಾಗಿದ್ದು, ಈ ಸಾಲಿನಲ್ಲಿ ಯಾವುದೇ ರೀತಿಯ ಹಾನಿಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ನದಿ ತೀರದ ಪ್ರದೇಶಗಳಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ರಚಿಸಲಾದ ಗ್ರಾಮ ಮಟ್ಟದ ಕಾರ್ಯಪಡೆಯು ಪ್ರವಾಹಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ನೀಡುತ್ತಿದೆ. ಪ್ರವಾಹದ ಮುನ್ನೆಚ್ಚರಿಕೆಯಾಗಿ ಬೋಟ್‍ಗಳ ವ್ಯವಸ್ಥೆ ಮಾಡಿದೆ. ನದಿ ತೀರದ ಪ್ರದೇಶಗಳಲ್ಲಿ ಡಂಗೂರ ಬಾರಿಸುವ ಮೂಲಕ ಮುನ್ನೆಚ್ಚರಿಕೆ ನೀಡಿ ತಿಳಿವಳಿಕೆ ಹೇಳಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪ್ಸೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳ‘

ವಿಜಯಪುರಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ವ್ಯವಸ್ಥಿತವಾಗಿ ಹೋರಾಡುತ್ತಿದ್ದು, ಪರಿಣಾಮ ಜಿಲ್ಲೆಯಲ್ಲಿ ಕೋವಿಡ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್‍ದಿಂದ ಗುಣಮುಖರಾಗಿ ಮನೆಗೆ ತೆರಳುತ್ತಿರುವವರ ಸಂಖ್ಯೆ ಶೇ77 ರಷ್ಟಿದೆ. ರಾಜ್ಯದಲ್ಲಿ ಬಿಡುಗಡೆ ಪ್ರಮಾಣದಲ್ಲಿ ವಿಜಯಪುರ ಮುಂಚೂಣಿಯಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯದ್ಯಂತ ಪ್ರತಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಾಗುತ್ತಿದ್ದು, ಈ ಬಾರಿ ರಾಜ್ಯ ಸರ್ಕಾರದಿಂದ ಬೆಳೆ ಸಮೀಕ್ಷೆಗೆ ನೂತನ ಆ್ಯಪ್‌ ಮಾಡಲಾಗಿದ್ದು, ರೈತರೇ ನೇರವಾಗಿ ತಮ್ಮ ಬೆಳೆಯ ಸಮೀಕ್ಷೆಯನ್ನು ಅಪ್‍ಲೋಡ್ ಮಾಡಬಹುದಾಗಿದೆ ಎಂದರು.

ಫಾರ್ಮರ್ ಸರ್ವೆ ಕ್ರಾಪ್ ಆ್ಯಪ್‍ ಅನ್ನು ಪ್ರತಿ ರೈತ ಬಳಸಿಕೊಂಡು ಅಪ್‌ ಲೋಡ್ ಮಾಡಬಹುದಾಗಿದೆ. ಇದರ ಜೊತೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ ಮೂಲಕವು ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT