ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಪ್ರತ್ಯೇಕ ಮಂತ್ರಾಲಯ ಆರಂಭಿಸಿ

ಕೆಪಿಸಿಸಿ ವಕ್ತಾರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಒತ್ತಾಯ
Last Updated 5 ಜೂನ್ 2021, 13:07 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಲಸಿಕಾ ಕಾರ್ಯಕ್ಕೆ ಕೇಂದ್ರ ಸರ್ಕಾರ ಸ್ಪಷ್ಟವಾದ ನೀತಿ ರೂಪಿಸಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಲಸಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಮಂತ್ರಾಲಯ ಆರಂಭಿಸಿ, ಸಚಿವರನ್ನು ನೇಮಕ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಗಿರುವ ಸಾವು-ನೋವುಗಳಿಗೆ ಕೇಂದ್ರ ಸರ್ಕಾರದ ವೈಫಲ್ಯವೇ ನೇರ ಕಾರಣವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಕೋವಿಡ್‌ ಲಸಿಕಾ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ನೀತಿಯಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಮೂರು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಈ ಕೂಡಲೇ ಕೋವಿಡ್‌ ಲಸಿಕೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಸೋಂಕು ಇಳಿಕೆಯಾಗುತ್ತಿದೆ ಎಂದು ಸರ್ಕಾರಗಳು ಬಿಂಬಿಸುತ್ತಿವೆ. ಆದರೆ, ವಾಸ್ತವಿಕವಾಗಿ ಕೋವಿಡ್ ಪರೀಕ್ಷೆ ಕಡಿಮೆಯಾಗಿದೆ ಹೀಗಾಗಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆದರೆ, ವಾಸ್ತವಿಕ ಅಂಕಿ-ಅಂಶಗಳನ್ನು ಮರೆ ಮಾಚಲಾಗುತ್ತಿದೆ ಎಂದು ಹೇಳಿದರು.

ಲಸಿಕೆ ಹಂಚಿಕೆಯಲ್ಲಿಯೂ ಅಸ್ತವ್ಯಸ್ತತೆ ಉಂಟಾಗಿದೆ. ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಬೇಕಾಗಿರುವುದು ನಾಗರಿಕರಿಗೆ ಹೊರೆಯಾಗಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಲಭಿಸುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು.

ಲಾಕ್‌ಡೌನ್ ಪರಿಣಾಮವಾಗಿ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಸರ್ಕಾರ ಘೋಷಿಸಿರುವ ಪ್ಯಾಕೇಜ್ ಯಾರಿಗೂ ಮುಟ್ಟುತ್ತಿಲ್ಲ, ನಾಮಕಾವಸ್ತೆ ಪರಿಹಾರ ಘೋಷಿಸುವ ಮೂಲಕ, ಅದೂ ಸಹ ತಡವಾಗಿ ಘೋಷಣೆ ಮಾಡುವ ಮೂಲಕ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡಬೇಕು ಮತ್ತು ಉಚಿತವಾಗಿ ಬೀಜ ಹಾಗೂ ಗೊಬ್ಬರವನ್ನು ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರಿಗೆ ಔಷಧ, ಆಕ್ಸಿಜನ್ ಮತ್ತು ಅಂಬುಲೆನ್ಸ್ ಸೌಲಭ್ಯ ಒದಗಿಸಿಕೊಡುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಒಂದು ಹೆಲ್ಪ್ ಲೈನ್ ಸೆಂಟರ್‌ ಮಾಡುವುದಾಗಿ ಅವರು ತಿಳಿಸಿದರು.

ಕೇಂದ್ರ ಸರ್ಕಾರ ಪಿ.ಯು.ಸಿ ಪರೀಕ್ಷೆ ರದ್ದು ಪಡಿಸಿದೆ. ಆದರೆ, ರಾಜ್ಯ ಸಕಾ೯ರ ಎಸ್.ಎಸ್.ಎಲ್.ಸಿ‌ ಪರೀಕ್ಷೆ ಮಾಡುವುದಾಗಿ ಶಿಕ್ಷಣ ಸಚಿವರು ಅವೈಜ್ಞಾನಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದರು.

ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ ಆಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ತೈಲ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ಧತೆ ಕೈಗೊಳ್ಳಿ:

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಕೊರೊನಾ ಮೂರನೇ ಅಲೆ ವ್ಯಾಪಿಸುವ ಮುನ್ನವೇ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಹೆಲ್ತ್ ಸೆಂಟರ್‌ಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಿ, ಅಲ್ಲಿ ಬೇಕಾಗಿರುವ ಅಗತ್ಯ ಬೆಡ್, ಸುಸಜ್ಜಿತ ಅಂಬುಲೆನ್ಸ್‌, ಕೊರೊನಾ ಹಾಗೂ ಬ್ಲ್ಯಾಕ್ ಫಂಗಸ್‌ಗೆ ಸಂಬಂಧಿಸಿದಂತೆ ಔಷಧ ಸಂಗ್ರಹ ಸೇರಿದಂತೆ ಸಕಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಅವರು ಅರ್ಥಪೂರ್ಣವಾಗಿ ಕಾರ್ಯ ಮಾಡುತ್ತಿದ್ದಾರೆ. ಫುಡ್‌ಕಿಟ್ ವಿತರಣೆ, ಬೆಡ್ ಹಂಚಿಕೆಯ ವಿಷಯದಲ್ಲಿ ಮಾದರಿಯಾಗಿ ನಡೆದುಕೊಂಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಮೊಹ್ಮದ್‌ರಫೀಕ್ ಟಪಾಲ್, ಐ.ಎಂ.ಇಂಡೀಕರ, ಸುರೇಶ ಘೋಣಸಗಿ, ಈರಪ್ಪ ಜಕ್ಕಣವರ, ಚನ್ನಬಸಪ್ಪ ನಂದರಗಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT