ಶುಕ್ರವಾರ, ಸೆಪ್ಟೆಂಬರ್ 25, 2020
25 °C

ಗೆದ್ದು ಬಂದವರು | ಕೊರೊನಾಗೆ ಧೈರ್ಯವೇ ಮದ್ದು

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ‘ಕೊರೊನಾ ಸೋಂಕು ದೃಢಪಟ್ಟಿದೆ. ಬ್ಯಾಗ್ ರೆಡಿ ಮಾಡಿ ಅಂಬುಲೆನ್ಸ್ ಬರುತ್ತದೆ’ ಎಂದು ನನ್ನ ನಂಬರಿಗೆ ಫೋನ್ ಬರುತ್ತಿದ್ದಂತೆ ಗಾಬರಿಗೊಂಡು ಕಣ್ಣಲ್ಲಿ ನೀರು ತುಂಬಿ ಬಂತು. ಮಾನಸಿಕವಾಗಿ ಸಂಪೂರ್ಣ ಕೆಳಗಿಳಿದೆ ಎಂದು ಕೋವಿಡ್‌ನಿಂದ ಗುಣಮುಖರಾಗಿರುವ ಇಲ್ಲಿಯ ಪುರಸಭೆ ಕಾರ್ಮಿಕ ಭೀಮಣ್ಣ ಕಟ್ಟಿಮನಿ.

‘ಧೈರ್ಯದಿಂದ ಕೋವಿಡ್ ಸೆಂಟರ್‌ಗೆ ಹೋಗಿ ಚಿಕಿತ್ಸೆ ಪಡೆದು ಬಾ’ ಎಂದು ಪುರಸಭೆ ಮುಖ್ಯಾಧಿಕಾರಿ ನನಗೆ ಧೈರ್ಯ ತುಂಬಿದವರು. ಆಗ ಸ್ವಲ್ಪ ಸಮಾಧಾನಗೊಂಡು ಸೆಂಟರ್‌ಗೆ ಹೋಗಿ ದಾಖಲಾದೆ. ಇನ್ನೂ ಸ್ವಲ್ಪ ಉಳಿದುಕೊಂಡಿದ್ದ ಅಧೈರ್ಯವನ್ನು ಅಲ್ಲಿನ ಆರೋಗ್ಯಾಧಿಕಾರಿ ಹಾಗೂ ಅಡುಗೆ ಸಿಬ್ಬಂದಿ ಸಂಪೂರ್ಣ ಹೋಗಲಾಡಿಸಿದರು.

ನಂತರ ಮನೆಯತ್ತ ಚಿಂತೆಯಾಯಿತು. ಹೆಂಡತಿಗೆ ಫೋನ್ ಮಾಡಿದರೆ ಮನೆ ಸುತ್ತ-ಮುತ್ತ ಮುಳ್ಳು ಹಚ್ಚಿದ್ದಾರೆ ಎಂದು ಎದೆ ಒಡೆದು ಕುಳಿತಿದ್ದಳು. ಸಮೀಪದಲ್ಲಿಯೇ ಹಬ್ಬ ಬೇರೆ ಇತ್ತು. ಹಬ್ಬದ ಸಂತಿ ಕೂಡ ಮಾಡಿರಲಿಲ್ಲ. ಆದರೆ, ಮನೆಗೆ ಅಗತ್ಯವಾಗಿರುವ ಎಲ್ಲ ಸಾಮಗ್ರಿಗಳನ್ನು ಮುಖ್ಯಾಧಿಕಾರಿ ಸುರೇಶ ಹಾಗೂ ಮಾಜಿ ಮುಖ್ಯಾಧಿಕಾರಿ ಮೂಲಿ ಮನೆಗೆ ತಲುಪಿಸಿರುವುದು ಕೇಳಿ ಇನ್ನಷ್ಟು ಸಮಾಧಾನ ಆಯ್ತು.

ಕೋವಿಡ್ ಸೆಂಟರ್‌ನಲ್ಲಿದ್ದ 20 ಜನ ಸೋಂಕಿತರು 2-3 ದಿನಗಳಲ್ಲಿಯೇ ತುಂಬಾ ಅನ್ಯೊನ್ಯವಾದೆವು. ಎಲ್ಲರೂ ಸೇರಿ ಹರಟೆ ಹೊಡೆಯುವುದರಲ್ಲಿ ಸಮಯ ಹೋಗಿದ್ದೆ ಗೊತ್ತಾಗ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರು ಗುಳಿಗೆ ಕೊಡುತ್ತಿದ್ದರು. ಕುಡಿಯಲು ಬಿಸಿನೀರು, ಚಹಾ, ಉಪಹಾರ ಹಾಗೂ ಉತ್ತಮ ಊಟ ನೀಡುತ್ತಿದ್ದರು. ಅಡುಗೆ ಸಿಬ್ಬಂದಿ ನಮ್ಮನ್ನು ಕುಟುಂಬದ ಸದಸ್ಯರಂತೆ ಕಂಡು ಊಟ ಬಡಿಸುತ್ತಿದ್ದರು ಎಂದರು.

ಸೆಂಟರ್‌ದಲ್ಲಿದ್ದ ಒಳ್ಳೆಯ ವಾತಾವರಣ ನನಗೆ ಸೋಂಕು ಇದೆ ಎಂಬುದನ್ನೆ ಮರೆಸಿ ಬಿಟ್ಟಿತ್ತು. ಹೀಗೆ ಐದನೇ ದಿನ ಗುಣಮುಖರಾದ ವರದಿ ಬಂದಿದೆ ಎಂದು ವೈದ್ಯಾಧಿಕಾರಿ  ಡಿಸ್ಚಾರ್ಜ್ ಮಾಡಿ, ಹೂವು ನೀಡಿ ಮನೆಗೆ ಬೀಳ್ಕೊಟ್ಟರು.ಮನೆಯಲ್ಲಿ ಮೂರ್ನಾಲ್ಕು ದಿನ ಹೋಂ ಕ್ವಾರಂಟೈನ್ ಆಗಿ ಈಗ ಪುನ: ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು