ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ: ಅಪಾಯಕಾರಿ ವಿದ್ಯುತ್ ಮೀಟರ್ ಬೋರ್ಡ್..!

ಬೆಳಕು ಕೊಡದ ಹೈಮಾಸ್ಟ್
ಶಂಕರ ಈ.ಹೆಬ್ಬಾಳ
Published 28 ಆಗಸ್ಟ್ 2024, 4:41 IST
Last Updated 28 ಆಗಸ್ಟ್ 2024, 4:41 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಹಲವು ತಿಂಗಳುಗಳಿಂದ ಇಲ್ಲಿನ ಗಣಪತಿ ದೇವಸ್ಥಾನದ ಬಳಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪ ಬೆಳಗುತ್ತಿಲ್ಲ.

ಮಹಾಂತೇಶ ನಗರದಲ್ಲಿ ಬರುವ ಈ ಹೈಮಾಸ್ಟ್ ದೀಪದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಗಣೇಶ ಗುಡಿ, ರಾಘವೇಂದ್ರ ಮಠಕ್ಕೆ ತೆರಳುವ ರಸ್ತೆಯಲ್ಲೆಲ್ಲ ವ್ಯಾಪಕವಾದ ಬೆಳಕು ಬಿದ್ದು ಜನರಿಗೆ ಅನುಕೂಲ ಒದಗಿಸಿತ್ತು. ಆದರೆ, ಇದೀಗ ವಿದ್ಯುತ್ ದೀಪ ಬಂದ್ ಆಗಿದ್ದರಿಂದ ಜನರಿಗೆ ತೊಂದರೆ ಆಗಿದೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಹೈಮಾಸ್ಟ್ ದೀಪ ವ್ಯರ್ಥವಾದಂತಾಗಿ ಬಿದ್ದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲದವರಂತೆ ವರ್ತಿಸುತ್ತಿದ್ದಾರೆ’ ಎಂದು ವಾರ್ಡ್‌ ನಿವಾಸಿಗಳಾದ ಹಣಮಂತ ನಲವಡೆ ದೂರಿದ್ದಾರೆ.

ಮುದ್ದೇಬಿಹಾಳದಲ್ಲಿ ಒಟ್ಟು 12 ಹೈಮಾಸ್ಟ್ ದೀಪಗಳಿವೆ. ಅದರಲ್ಲಿ ಒಂದಕ್ಕೆ ₹2 ಲಕ್ಷದಿಂದ ₹3 ಲಕ್ಷ ವೆಚ್ಚ ತಗಲುತ್ತದೆ. ಸದ್ಯಕ್ಕೆ ಖಾಸಗಿಯಾಗಿ ಸಮರ್ಥ ಎಲೆಕ್ಟ್ರಿಕಲ್‌ನವರಿಗೆ ಟೆಂಡರ್ ಕೊಟ್ಟಿದ್ದು, ಅದರ ನಿರ್ವಹಣೆಗೆ ವಹಿಸಲಾಗಿದೆ.

ಅಪಾಯಕಾರಿ ಮೀಟರ್ ಬೋರ್ಡ್: ಹೈಮಾಸ್ಟ್ ವಿದ್ಯುತ್ ದೀಪ ಚಾಲನೆ ಮಾಡುವ ವಿದ್ಯುತ್ ಮೀಟರ್ ಬೋರ್ಡ್‌ಗೆ ಇದ್ದ ಬಾಗಿಲು ಕಿತ್ತು ಹೋಗಿದ್ದು ಸುರಕ್ಷತೆಯೇ ಇಲ್ಲವಾಗಿದೆ. ಇಲ್ಲಿ ಜೀವಂತವಾದ ವಿದ್ಯುತ್ ತಂತಿಗಳ ಸಂಪರ್ಕ ಇದ್ದರೂ ಅದಕ್ಕೆ ರಕ್ಷಣಾ ಕವಚ ಅಳವಡಿಸುವ, ಬೋರ್ಡ್‌ ಬಾಗಿಲು ಹಾಕಿ ಯಾರಿಗೂ ಅಪಾಯ ಆಗದಂತೆ ನೋಡಿಕೊಳ್ಳುವ ಕೆಲಸ ಆಗಿಲ್ಲ.

ಸಂಜೆಯಾದರೆ ಸಂಗೊಳ್ಳಿ ರಾಯಣ್ಣ ಸರ್ಕಲ್ ಸುತ್ತಮುತ್ತ ಫಾಸ್ಟ್ ಫುಡ್ ತಿನ್ನುವುದಕ್ಕೆ, ಅಲ್ಪೋಪಹಾರ ಮನೆಗಳಿಗೆ ತೆಗೆದುಕೊಂಡು ಹೋಗಲು ನೂರಾರು ಜನರು ಬಂದು ಸೇರುತ್ತಾರೆ. ಇಲ್ಲಿ ಯಾರಾದರೂ ಗೊತ್ತಿಲ್ಲದೇ ಮಕ್ಕಳು, ಮಹಿಳೆಯರು, ವೃದ್ಧರು, ಯುವಕರು ವಿದ್ಯುತ್ ಮೀಟರ್ ಬೋರ್ಡ್ ಸ್ಪರ್ಶಿಸಿದರೆ ಜೀವ ಹಾನಿ ಆಗುವುದು ಖಚಿತ ಎನ್ನುವ ಪರಿಸ್ಥಿತಿ ಇದೆ.

ಮಳೆ ಆದಾಗಲೊಮ್ಮೆ ಇಲ್ಲಿ ವಿದ್ಯುತ್ ಅರ್ಥಿಂಗ್ ಆಗುತ್ತಿದೆ ಎನ್ನುವುದು ನಿವಾಸಿಗಳ ಆತಂಕ. ಬೇಗನೇ ಇಲ್ಲಿನ ಹೈಮಾಸ್ಟ್ ದೀಪ ಬೆಳಗಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜೀವ ಹಾನಿ ಆದರೆ ಅದರ ಹೊಣೆಯನ್ನು ಅಧಿಕಾರಿಗಳೇ ಹೊರಬೇಕು ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಗಣಪತಿ ಗುಡಿ ಹತ್ತಿರ ಇರುವ ಹೈಮಾಸ್ಟ್ ದೀಪದ ವಿದ್ಯುತ್ ಮೀಟರ್ ಬೋರ್ಡ್
ಮುದ್ದೇಬಿಹಾಳ ಪಟ್ಟಣದ ಗಣಪತಿ ಗುಡಿ ಹತ್ತಿರ ಇರುವ ಹೈಮಾಸ್ಟ್ ದೀಪದ ವಿದ್ಯುತ್ ಮೀಟರ್ ಬೋರ್ಡ್
ಹೈಮಾಸ್ಟ್ ದೀಪದ ಟೈಮರ್ ದುರಸ್ತಿಗೆ ಬಂದಿರಬಹುದಾದ ಸಾಧ್ಯತೆ ಇದ್ದು ಅದನ್ನು ಗಮನಿಸಿ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಿ ದುರಸ್ತಿ ಮಾಡಿಸಲಾಗುವುದು
ಮಲ್ಲಿಕಾರ್ಜುನ ಬಿರಾದಾರ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT