ಬುಧವಾರ, ಜುಲೈ 28, 2021
21 °C

ಹುತಾತ್ಮ ಯೋಧನ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್‌ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದೇಶಕ್ಕಾಗಿ ಮಡಿದ ಕಾಶಿರಾಯನಂತಹ ಯೋಧರನ್ನು ಹೊಂದಲು ನಾವು ಯುವಕರನ್ನು ಪ್ರೇರೇಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಉಕ್ಕಲಿ ಗ್ರಾಮದ ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಮನೆಗೆ ಮಂಗಳವಾರ‌ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ₹5 ಲಕ್ಷ ವಿತರಿಸಿ ಮಾತನಾಡಿದರು.

ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರು ಆಕಸ್ಮಿಕವಾಗಿ ವೀರ ಮರಣ ಹೊಂದಿದ್ದು, ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರಲ್ಲಿರುವ ದೇಶಪ್ರೇಮ ಇಡೀ ಭಾರತ ದೇಶ ಮೆಚ್ಚುವಂತಹದ್ದು. ಇಂದು ಉಕ್ಕಲಿ ಗ್ರಾಮ ಹಾಗೂ ಇಡೀ ದೇಶವೇ ದುಃಖದಲ್ಲಿ ಮುಳುಗಿದೆ. ಅಂತಹ ವೀರಯೋಧರನ್ನು ಪಡೆದ ನಾವು ಪುಣ್ಯವಂತರು. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಅವರು ಹೇಳಿದರು.

ಕುಟುಂಬ ಸದಸ್ಯರ ಮನವಿಯನ್ನು ಸ್ವೀಕರಿಸಿದ ಅವರು ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಹೆಚ್ಚಿನ ಸಹಾಯಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಗ್ರಾಮಸ್ಥರ ಬೇಡಿಕೆಯಂತೆ ಯೋಧರ ಸ್ಮಾರಕ ನಿರ್ಮಾಣಕ್ಕಾಗಿ ಶಾಸಕರ ಅನುದಾನದಿಂದ ಹಣ ಮಂಜೂರು ಮಾಡಿ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸೋಣ ಎಂದರು.

ಹಿಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬಗಳಿಗೂ ಕೂಡ ಡಿಸಿಸಿ ಬ್ಯಾಂಕ್ ಸಹಾಯ ಮಾಡುತ್ತಾ ಬಂದಿದೆ. ಮುಂದೆಯೂ ಕೂಡ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಅವರು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ್ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ. ಬ್ಯಾಂಕಿನ ಸಿಇಓ ಬಿರಾದಾರ, ಬ್ಯಾಂಕಿನ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು, ಗ್ರಾಮದ ಜನತೆ, ಯೋಧರಾದ ಕಿಶನ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು