ಶನಿವಾರ, ನವೆಂಬರ್ 28, 2020
18 °C
ಮನೆ, ಮನೆಗಳಲ್ಲಿ ಬೆಳಗಿದ ಹಣತೆ; ಅಂಗಡಿ, ಮಳಿಗೆಗಳಲ್ಲಿ ವಿಶೇಷ ಪೂಜೆ

ಲಕ್ಷ್ಮೀ ಪೂಜೆ ಸಂಭ್ರಮ; ಪಟಾಕಿ ಸದ್ದಿನ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ದೀಪಾವಳಿ ಪ್ರಯುಕ್ತ ಮನೆ, ಮನೆಗಳಲ್ಲಿ, ಅಂಗಡಿ, ಮಳಿಗೆಗಳಲ್ಲಿ ಶನಿವಾರ ಲಕ್ಷ್ಮೀಯನ್ನು ಭಕ್ತಿ, ಭಾವದಿಂದ ಪೂಜಿಸಲಾಯಿತು.

ಅಂಗಡಿ, ಮಳಿಗೆಗಳನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು, ತಳಿರು, ತೋರಣ, ಬಾಳೆಗಿಡ, ಹೂವು, ಜಗಮಗಿಸುವ ವಿದ್ಯುತ್‌ ದೀಪಗಳಿಂದ ಆಲಂಕರಿಸಲಾಗಿತ್ತು. ಮನೆ, ಅಂಗಡಿ, ಮಳಿಗೆಗಳ ಎದುರು ಮಹಿಳೆಯರು ಬೃಹದಾಕಾರದ ರಂಗೋಲಿಯನ್ನು ಬಿಡಿಸಿದ್ದರು. ಲಕ್ಷ್ಮೀಯ ಫೋಟೊವನ್ನು ಅಂಗಡಿಗಳ ಒಳಗೆ ಇಟ್ಟು ಪೂಜಿಸಲಾಯಿತು. ಕುಟುಂಬಸ್ಥರು, ನೆಂಟರು, ಸ್ನೇಹಿತರನ್ನು ಪೂಜೆಗೆ ಆಹ್ವಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.  ಹಬ್ಬದ ಪ್ರಯುಕ್ತ ಮನೆಗಳಲ್ಲಿ ವಿಶೇಷ ಸಿಹಿ ಭಕ್ಷ್ಯ, ಭೋಜನವನ್ನು ತಯಾರಿಸಿ, ಮನೆಯವರು, ನೆರೆಹೊರೆಯವರೊಂದಿಗೆ ಸವಿದರು.

ಸಂಜೆಯಾಗುತ್ತಲೇ ಮನೆಯಂಗಳಲ್ಲಿ ಹಣತೆಗಳನ್ನು ಬೆಳಗಿಸಿ, ಆಕಾಶ ಬುಟ್ಟಿಯನ್ನು ಹೊತ್ತಿಸಿ, ಲಕ್ಷ್ಮಿಗೆ ನೈವೇದ್ಯ ಅರ್ಪಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು.

ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಹೊಸ ಪುಸ್ತಕದಲ್ಲಿ ಶುಭ–ಲಾಭವನ್ನು ಬರೆಯುವ ಮೂಲಕ ಲೆಕ್ಕವನ್ನು ಆರಂಭಿಸಿದರು. ಸಂಜೆಯಿಂದ ಆರಂಭವಾದ ಅಂಗಡಿ, ಮಳಿಗೆಗಳ ಪೂಜೆ ತಡರಾತ್ರಿ ವರೆಗೂ ನಡೆಯಿತು.

ಪೂಜೆಯ ವೇಳೆ ಮಕ್ಕಳು, ಯುವಕರು ಬಗೆಬಗೆಯ ಪಟಾಕಿಗಳನ್ನು ಸಿಡಿಸಿ ಆನಂದಿಸಿದರು. ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವಂತೆ ಹೈಕೋರ್ಟ್‌ ಆದೇಶವಿದ್ದರೂ ಎಲ್ಲಿಯೂ ಅದರ ಪರಿವೇ ಇಲ್ಲದೇ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಶಬ್ಧ ಮತ್ತು ಮಾಲಿನ್ಯ ಉಂಟು ಮಾಡುವ ಪಟಾಕಿಗಳ ಸದ್ದು ಜೋರಾಗಿತ್ತು.

ವ್ಯಾಪಾರ ಜೋರು: ಅಂಗಡಿ ಮತ್ತು ವಾಹನಗಳ ಪೂಜೆಗೆ ವಿಶೇಷವಾಗಿ ಬಳಸುವ ಸೇವಂತಿಗೆ, ಚೆಂಡು ಹೂವು, ಸೇಬು, ಚಿಕ್ಕು, ಸೀತಾಫಲ, ಬಾಳೆ ಹಣ್ಣು, ವೈವಿಧ್ಯಮ ಹಣತೆ, ಕಬ್ಬು ಮತ್ತು ಬಾಳೆಗಿಡ, ಚೆಂಡುಹೂವಿನ ಗಿಡ, ಕುಂಬಳಕಾಯಿ, ಚಿನ್ನಿಕಾಯಿ ವ್ಯಾಪಾರ ಶನಿವಾರ ನಗರ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಜೋರಾಗಿತ್ತು. ವ್ಯಾಪಾರಸ್ಥರು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.