ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಹಾಯಕರ ಕಾಯಂಗೆ ಆಗ್ರಹ; ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮನವಿ

Published 29 ನವೆಂಬರ್ 2023, 13:46 IST
Last Updated 29 ನವೆಂಬರ್ 2023, 13:46 IST
ಅಕ್ಷರ ಗಾತ್ರ

ವಿಜಯಪುರ: ‘ಕಂದಾಯ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ 10,450 ಗ್ರಾಮ ಸಹಾಯಕರನ್ನು ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿ ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿ ಗ್ರಾಮ ಸಹಾಯಕ ಜಿಲ್ಲಾ ಸಂಘದ ಪದಾಧಿಕಾರಿಗಳು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎನ್.ಸಿ.ಇನಾಮದಾರ ಮಾತನಾಡಿ, ‘ರಾಜ್ಯ ವ್ಯಾಪಿ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರು, ಕಳೆದ 50 ವರ್ಷಗಳಿಂದ ಪೀಳಿಗೆಯಿಂದ ಪೀಳಿಗೆಗೆ ಅಂದರೆ ಅಜ್ಜ ಸತ್ತರೆ ತಂದೆಗೆ, ತಂದೆ ಸತ್ತರೆ ಮಗನಿಗೆ ಹೀಗೆ ಎರಡು ತಲೆಮಾರಿನಿಂದ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತ ಬಂದಿರುತ್ತಾರೆ. ಗ್ರಾಮ ಸಹಾಯಕರು ಮರಣ ಹೊಂದಿದಾಗ ಸರ್ಕಾರವು ಯಾವುದೇ ಪರಿಹಾರ ನೀಡುತ್ತಿಲ್ಲ. ಅಂಥ ಸಂದರಭದಲ್ಲಿ ಅವರ ಕುಟುಂಬಗಳು ಬೀದಿ ಪಾಲಾಗಿವೆ. ನಮಗೆ ನ್ಯಾಯ ಕೊಡಿ’ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕಚೇರಿ ಶುದ್ಧೀಕರಣ, ಗ್ರಾಮ ಪರಿಸರ ಶುದ್ಧೀಕರಣ, ಶಿಷ್ಟಾಚಾರಗಳ ನಿರ್ವಹಣೆ ಮಾಡುತ್ತ ಬಂದಿದ್ದೇವೆ. ಗ್ರಾಮ ಆಡಳಿತಾಧಿಕಾರಿಗಳ ಕೈ ಕೆಳಗೆ ಕಂದಾಯ ಇಲಾಖೆಯಲ್ಲಿ ವಹಿಸಿಕೊಟ್ಟ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದ್ದರೂ ಸರ್ಕಾರ ಈವರೆಗೆ ಗ್ರಾಮ ಸಹಾಯಕರಿಗೆ ‘ಡಿ’ ದರ್ಜೆ ನೌಕರರೆಂದು ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಂಗನವಾಡಿ, ಆಶಾ ಕಾರ್ಯಕರ್ತೆ ಆರೋಗ್ಯ ಇಲಾಖೆ, ಗ್ರಂಥಪಾಲಕರು, ಪೌರಕಾರ್ಮಿಕರು, ಪಂಚಾಯ್ತಿ ನೌಕರರು ಈ ಎಲ್ಲ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ, ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ಗ್ರಾಮ ಸಹಾಯಕರಿಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ’ ಎಂದರು.

ಉಪಾಧ್ಯಕ್ಷ ಅಲ್ಲಾಭಕ್ಷ ಕೊರಬು, ಕಾರ್ಯದರ್ಶಿ ಹಣಮಂತ ಉಪ್ಪಾರ, ವಿ.ಡಿ.ಕೊರಬು, ಎಸ್.ಎಸ್. ವಾಲಿಕಾರ, ಎಚ್.ಎಸ್.ಕಡಕೋಳ, ಜಿ.ಎಸ್.ಕುಮಚಗಿ, ಜಿ.ಬಿ.ವಾಲಿಕಾರ, ಎಂ.ಆರ್.ನಯ್ಕೋಡಿ, ಪೂಜಾರಿ, ಜಿ.ಎಸ್. ಕಟ್ಟಿಮನಿ, ಬಿ.ಬಿ.ಹುಕ್ಕೇರಿ, ಎಂ.ಡಿ.ಜಮದಾರ ಎಸ್.ಎಂ.ವಾಲಿಕಾರ ಜಿ.ವಾಯ್.ವಾಲಿಕಾರ ಇದ್ದರು.

ಗ್ರಾಮ ಸಹಾಯಕರ ಕುರಿತು ಮಲತಾಯಿ ಧೋರಣೆ ರಾಜ್ಯದಲ್ಲಿರುವ ಗ್ರಾಮ ಸಹಾಯಕರ ಸಂಖ್ಯೆ 10,450

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT