ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಹುದ್ದೆ ಹರಾಜಿಗೆ ಇಟ್ಟ ಕಾಂಗ್ರೆಸ್: ಕೋಟ ಶ್ರೀನಿವಾಸ ಪೂಜಾರಿ

ಸಿಂದಗಿಯಲ್ಲಿ ಜಿಲ್ಲಾಮಟ್ಟದ ಬಿಜೆಪಿ ಸಂಯುಕ್ತ ಮೋರ್ಚಾಗಳ ಸಮಾವೇಶ: ಕೋಟ ಶ್ರೀನಿವಾಸ ಪೂಜಾರಿ ಆರೋಪ
Published 7 ಆಗಸ್ಟ್ 2023, 14:04 IST
Last Updated 7 ಆಗಸ್ಟ್ 2023, 14:04 IST
ಅಕ್ಷರ ಗಾತ್ರ

ಸಿಂದಗಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳನ್ನು ಹರಾಜಿಗೆ ಇಡಲಾಗಿದೆ. ಸರ್ಕಾರಿ ನೌಕರರು ಈಗಿದ್ದ ಹುದ್ದೆಯಲ್ಲಿಯೇ ಮುಂದುವರೆಯಲು ಕೂಡ ಹಣ ಕೊಡಬೇಕು. ಇನ್ನು ವರ್ಗಾವಣೆಯಲ್ಲಿ ಯಾವ ರೀತಿ ನಡೆದಿರಬಹುದು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದರು.

ಇಲ್ಲಿಯ ರಾಜರಾಜೇಶ್ವರಿ ಕಲ್ಯಾಣಮಂಟಪದಲ್ಲಿ ಸೋಮವಾರ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಿಜೆಪಿ ಸಂಯುಕ್ತ ಮೋರ್ಚಾಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗಾಗಿ ‌ಮೀಸಲಾದ ₹ 34 ಸಾವಿರ ಕೋಟಿ ಅನುದಾನದಲ್ಲಿ ₹11.05 ಸಾವಿರ ಕೋಟಿ  ಅನುದಾನವನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸುತ್ತಿದ್ದಾರೆ. ಈ ಸಮುದಾಯಗಳಿಗೆ ಸರ್ಕಾರ ವಂಚನೆ, ಮೋಸ ಮಾಡುತ್ತಲಿದೆ ಎಂದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 54 ಲಕ್ಷ ರೈತರು ಅರ್ಜಿ ಹಾಕದಿದ್ದರೂ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹10 ಸಾವಿರ ಜಮೆ ಆಗುತ್ತಿರುವ ಯೋಜನೆಗೆ ಈಗಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ  ಒಂದು ಪೈಸೆ ಕೂಡ ನೀಡಿಲ್ಲ ಎಂದರು.

ಕೇಂದ್ರ ಸರ್ಕಾರ 80 ಕೋಟಿ ಬಿಪಿಎಲ್ ಫಲಾನುಭವಿಗಳಿಗೆ 5 ಕೆ.ಜಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿಯಲ್ಲಿ ಹೇಳಿದಂತೆ ಇನ್ನೂ 5 ಕೆ.ಜಿ ಅಕ್ಕಿ ನೀಡದೇ ವಂಚಿಸಿದೆ. ಈಗಿನ ಶಾಸಕರಿಗೆ ಸರ್ಕಾರ ಅಭಿವೃದ್ದಿ ಅನುದಾನ ಬಿಡುಗಡೆಗೊಳಿಸದಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘಟಬಂಧನ (ಇಂಡಿಯಾ) ಒಂದುಗೂಡಿದ್ದಾರೆ. ಇದೊಂದು ಈಸ್ಟ್ ಇಂಡಿಯಾ ಕಂಪನಿಯಿದ್ದಂತೆ ಎಂದು ಅವರು ವ್ಯಂಗ್ಯವಾಡಿದರು.

ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್‌ ಸುಳ್ಳು ಹೇಳಿ ಸರ್ಕಾರ ರಚಿಸುತ್ತಾರೆ ಎಂಬುದು ನಮಗೆ ಗೊತ್ತೇ ಇರಲಿಲ್ಲ ಎಂದರು.

ರಾಜ್ಯದಲ್ಲಿ ಭಯೋತ್ಪದನೆ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾರೆ. ಪಾಕಿಸ್ತಾನ ಧ್ವಜ ಹಾರಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅನ್ಯಾಯದ ಪರಾಕಾಷ್ಠೆ ತಲುಪಿದೆ. ಆದರೆ, ಉಪಮುಖ್ಯಮಂತ್ರಿ ಅವರು ಭಯೋತ್ಪಾದಕರಲ್ಲ ನಮ್ಮ ಬ್ರದರ್ಸ್ ಎನ್ನುತ್ತಾರೆ. ಇವರಿಗೆ ಏನೆಂದು ಕರೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆ ದೇಶದ ಇತಿಹಾಸ ಬರೆಯುವ ಚುನಾವಣೆಯಾಗಿದೆ. ಹೀಗಾಗಿ ರಾಷ್ಟ್ರದ ಸಲುವಾಗಿ ಸಮೃದ್ಧ ಭಾರತಕ್ಕಾಗಿ ಸಮರ್ಪಣೆ ಮಾಡಿಕೊಂಡ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಬಿಜೆಪಿ ಮೋರ್ಚಾಗಳ ಪದಾಧಿಕಾರಿಗಳು ಮನೆ, ಮನೆಗೂ ತಲುಪಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ನಾವು ಚುನಾವಣೆಯಲ್ಲಿ ಸೋತಿದ್ದೇವೆ. ಗ್ಯಾರಂಟಿ ಯೋಜನೆ, ಒಳಮೀಸಲಾತಿ ಕಾರಣಕ್ಕಾಗಿ ಸೋತಿರಬಹುದು. ಆದರೆ, ಜೀವಂತ ಇದ್ದೇವೆ. ಮುಂಬರುವ ಚುನಾವಣೆಗಳಲ್ಲಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ತೋರಿಸುತ್ತೇವೆ. ಈಗಿನ ಸರ್ಕಾರ ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ ಯೋಜನೆಯನ್ನು ಸ್ಥಗಿತಗೊಳಿಸಿದೆ. ಹಾಲಿನ ದರ ಏರಿಕೆ ಮಾಡಿದೆ. ಅತ್ಯಧಿಕ ಹಣ ತೆರಿಗೆ ರೂಪದಲ್ಲಿ ಪಡೆಯಲಾಗುತ್ತಿದೆ ಎಂದು ಟೀಕಿಸಿದರು.

ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ನಾವು ಸಾಕಷ್ಟು ಅಭಿವೃದ್ದಿ ಮಾಡಿದರೂ ಗೊಳ್ಳ ಗ್ಯಾರಂಟಿಗಾಗಿ ಸೋತಿದ್ದೇವೆ. ಈಗ ಜನತೆ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಚಿದಾನಂದ ಚಲವಾದಿ ಮಾತನಾಡಿದರು.

ಶಿವರುದ್ರ ಬಾಗಲಕೋಟ, ಪ್ರಕಾಶ ಅಕ್ಕಲಕೋಟ, ಮಲ್ಲಿಕಾರ್ಜುನ ಜೋಗೂರ, ಕಾಸುಗೌಡ ಬಿರಾದಾರ, ಈರಣ್ಣ ರಾವೂರ, ವಿವೇಕ ಡಬ್ಬಿ, ಶಿಲ್ಪಾ ಕುದರಗೊಂಡ, ಗೋಪಾಲ ಘಟಕಾಂಬಳೆ, ಸಂಜಯ ಪಾಟೀಲ, ಸಂಜೀವ ಐಹೊಳಿ, ಗುರು ತಳವಾರ ಇದ್ದರು.

Quote - ಪಂಚ ಗ್ಯಾರಂಟಿಗೆ ರಾಜ್ಯ ಸರ್ಕಾರ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ಹಣಕಾಸಿನ ತೊಂದರೆ ಎದುರಿಸುತ್ತಿದೆ. ಸಿಂದಗಿ ಶಾಸಕರು ನಮ್ಮ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ –ರಮೇಶ ಭೂಸನೂರ  ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT