ಭಾನುವಾರ, ಏಪ್ರಿಲ್ 18, 2021
31 °C
ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆ

ಕುಡಿಯುವ ನೀರಿನ ಯೋಜನೆ: ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ಕೈಗೊಳ್ಳಲಾಗಿರುವ 24x7 ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಏಪ್ರಿಲ್ ಅಂತ್ಯದ ಒಳಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚಿಸಿದರು.

ನಗರದಲ್ಲಿ ಶನಿವಾರ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ತೊರವಿ ಎಲ್. ಟಿ. ನಂ 2 ರಲ್ಲಿ ನಿರ್ಮಾಣ ಮಾಡಿದ ಓವರ್ ಹೆಡ್ ಟ್ಯಾಂಕ್ ಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ, ಶೀಘ್ರವಾಗಿ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿ ಮಾಡಿ. ಬೆಳಿಗ್ಗೆ ನೀರು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲ ರಾತ್ರಿ ಹೊತ್ತು ನೀರು ಬಿಡುವುದು ಬೇಡ, ಪೈಪ್ ಲೈನ್ ಕಾಮಗಾರಿಗಾಗಿ ಅಗೆಯಲಾಗಿದ್ದು. ರಿಕಾರ್ಪೆಟ್ ಮಾಡಿಲ್ಲ ಅವೆಲ್ಲ ರಿಕಾರ್ಪೆಟ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಜಲಮಂಡಳಿಯಿಂದ ಅಧಿಕೃತ ಕರ ವಸೂಲಿಗಾರರ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಿ, ಅನ್ಯ ವ್ಯಕ್ತಿಗಳಿಗೆ ಸಾರ್ವಜನಿಕರು ಕರ ಪಾವತಿಸಿ ಮೋಸ ಹೋಗುವುದನ್ನು ತಪ್ಪಿಸಿ. ಕರ ವಸೂಲಿ ಅಭಿಯಾನ ಪ್ರಾರಂಭಿಸಿ, ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು  ಸೂಚಿಸಿದರು.

ನಗರದಲ್ಲಿ ಅನೇಕ ಕಡೆ ಕೊಳವೆಬಾವಿ ಕೊರೆಸಲಾಗಿದ್ದು, ಮೋಟರ್ ಅಳವಡಿಸಿಲ್ಲ, ಶೀಘ್ರದಲ್ಲೇ ಮೋಟರ್ ಅಳವಡಿಸಬೇಕು. ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂರಿಸಿ, ಆಯಾ ಕಾಲೊನಿಯ ಜನರಿಗೆ ನೀರಿನ ಸೌಲಭ್ಯ ದೊರಕಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ತಿಳಿಸಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ವಿಕ್ರಮ ಗಾಯಕವಾಡ, ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪಟ್ಟಣಶೆಟ್ಟಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪಿ .ಪಿ ಚೆನ್ನ ಸ್ವಾಮಿ, ಬಿ. ವೈ. ನದಾಫ್, ಜೈನ್ ಇರಿಗೇಶನ್ ಗುತ್ತಿಗೆದಾರ ದೀಪಕ್ ಪಾಟೀಲ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ.ಕರಡಿ, ಅಶೋಕ್ ಬೆಲ್ಲದ, ರಾಜೇಶ್ ದೇವಿಗಿರಿ, ರಾಹುಲ್ ಜಾಧವ, ಪರಶುರಾಮ್ ರಜಪೂತ ಹಾಗೂ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

***

10- 12 ದಿನಗಳವರೆಗೆ ನೀರು ಬಿಡಲಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಆಗದಂತೆ 4-5 ದಿನಗಳಿಗೊಮ್ಮೆ ನೀರು ಪೂರೈಸಿ

–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.