ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಜಪ, ಯೋಗ ದಿನದ ನೆಪದಲ್ಲಿ ರಾಜ್ಯಕ್ಕೆ ಬಂದ ಮೋದಿ: ಕೋಡಿಹಳ್ಳಿ ಆರೋಪ

Last Updated 20 ಜೂನ್ 2022, 13:55 IST
ಅಕ್ಷರ ಗಾತ್ರ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರುವುದು ಯೋಗ ಮಾಡಲು ಅಲ್ಲ, ಅವರು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿ ಇಟ್ಟುಕೊಂಡು ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಟೀಕಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ರೈತ ಸಮಾವೇಶ ಉದ್ಘಾಟಿಸಿ ಹಾಗೂ ‘ನೇಗಿಲ ಯೋಗಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹೇಗಾದರೂ ಮಾಡಿ ಮತ್ತೆ ತಮ್ಮ ಕೈಯಲ್ಲೇ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಿಂದ ಮೋದಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಇಡೀ ದೇಶವನ್ನು ಖಾಸಗಿ ಕಂಪನಿಗಳಿಗೆ ಮಾರತೊಡಗಿದೆ. ಇದರ ಭಾಗವಾಗಿ ಈಗಾಗಲೇ ರೈಲ್ವೆ, ವಿಮಾನ ನಿಲ್ದಾಣ, ಬಂದರು, ಬಿಎಸ್‌ಎನ್‌ಎಲ್‌, ಎಲ್‌ಐಸಿ, ಬ್ಯಾಂಕು, ಪೆಟ್ರೋಲಿಯಂ ಕಂಪನಿಗಳನ್ನು ಖಾಸಗಿ ಮಾಲೀಕತ್ವಕ್ಕೆ ವರ್ಗಾವಣೆ ಮಾಡಿದೆ. ಭಾರತ ಮಾತೆಗೆ ಜೈ ಎಂದು ಒಂದೆಡೆ ಹೇಳುವ ಇವರು ಇನ್ನೊಂದೆಡೆ ಭಾರತ ಮಾತೆಯ ಸೀರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇದೇನಾ ದೇಶಾಭಿಮಾನ ಎಂದು ಪ್ರಶ್ನಿಸಿದರು.

ಮೂರು ಕರಾಳ ಕೃಷಿ ಕಾಯ್ದೆಯನ್ನು ರೂಪಿಸುವ ಮೂಲಕ ಕೃಷಿ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮಾರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಸದ್ಯ ರೈತರ ಚಳವಳಿಯಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ಶೀಘ್ರದಲ್ಲೇ ಸುಘ್ರೀವಾಜ್ಞೆ ಮೂಲಕ ಈ ಮಸೂದೆಗಳನ್ನು ಮತ್ತೆ ಜಾರಿ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಜಾಗೃತರಾಗದೇ, ಸಂಘಟಿತರಾಗದೇ ಇದ್ದರೆ ಹಳ್ಳಿಯಲ್ಲಿ, ಕೃಷಿಯಲ್ಲಿ ಇರಲು ಸಾಧ್ಯವಾಗದು ಎಂದು ಹೇಳಿದರು.

ಸೇನೆಗೆ ಸೇರುವ ಯುವ ಜನರಿಗೆ ಸೇವಾ ಭದ್ರತೆ ಒದಗಿಸಬೇಕು, ಕಾಯಂ ನೇಮಕಾತಿ ಮಾಡಿಕೊಳ್ಳಬೇಕು. ಸೇನೆಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವುದು ಸರಿಯಲ್ಲ. ಯುವ ಜನರು ಬೀದಿಗೆ ಬರುವಂತೆ ಮಾಡುವುದು ಬೇಡ ಎಂದು ಹೇಳಿದರು.

ಅಪಪ್ರಚಾರ:ರೈತ ಸಂಘ ರಾಜಕೀಯ ಪ್ರವೇಶ ಮಾಡಲಿದೆ. ಆಮ್‌ ಆದ್ಮಿ ಪಕ್ಷಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲ ನೀಡಲಿದೆ ಎಂದು ಘೋಷಣೆ ಮಾಡಿದ ಕಾರಣ ಹತಾಶರಾದ ರಾಜಕೀಯ ಪಕ್ಷಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ರೈತರ ರಾಜಕೀಯ ಶಕ್ತಿಯನ್ನು ನಾಶ ಪಡಿಸಲು ತಂತ್ರ, ಪ್ರತಿ ತಂತ್ರ ಹೆಣೆದಿದ್ದಾರೆ. ಈ ಕಾರಣಕ್ಕೆ ಸಾರಿಗೆ ನೌಕರರು ಮತ್ತು ರೈತರ ಚಳವಳಿಯಲ್ಲಿ ನಾನು ಹಣ ತೆಗೆದುಕೊಂಡಿದ್ದೇನೆ, ಮೋಸ ಮಾಡಿದ್ದೇನೆ ಎಂದು ಆರೋಪ ಹೊರಿಸಿದರು. ನಯಾ ಪೈಸೆ ಹಣ ತೆಗೆದುಕೊಂಡಿದ್ದರೆನಾನು ನಾಶವಾಗಲಿ; ಇಲ್ಲವೇ ಆಪಾದನೆ ಮಾಡಿದವರು ನಾಶವಾಗಲಿ ಎಂದು ಶಾಪ ಹಾಕಿದರು.

ಬಿಜೆಪಿಯ ಅಂಗ ಪಕ್ಷ:ಜೆಡಿಎಸ್‌ ಪಕ್ಷವು ಬಿಜೆಪಿಯ ‘ಬಿ’ ಟೀಂ ಮಾತ್ರವಲ್ಲ; ಅದು ಬಿಜೆಪಿಯ ಅಂಗ ಪಕ್ಷವಾಗಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳ ಜಾರಿಗೆ ಜೆಡಿಎಸ್‌ ಸಂಪೂರ್ಣ ಬೆಂಬಲ ನೀಡಿದೆ ಎಂದು ಆಪಾದಿಸಿದರು.

ಯತ್ನಾಳಗೆ ಸವಾಲು:‘ಕೋಡಿಹಳ್ಳಿ ₹ 12 ಕೋಟಿ ಬೆಲೆ ಬಾಳುವ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ನಾನು ಕೇವಲ ₹ 1 ಕೋಟಿ ಮನೆಯಲ್ಲಿ ವಾಸವಾಗಿದ್ದೇನೆ‘ ಎಂಬ ಶಾಸಕ ಬಸನಗೌಡ ಪಾಟೀಲ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಅವರು, ಟೀಕೆ ಮಾಡುವ ಮುನ್ನತಿಳಿದುಕೊಂಡು ಮಾಡಿ. ನಾನೇನು ಯಡಿಯೂರಪ್ಪ, ವಿಜಯೇಂದ್ರ ಅಲ್ಲ. ನೀವು ಹೇಳುವುದೇ ನಿಜವಾಗಿದ್ದರೆ ನನ್ನ ಮತ್ತು ನಿಮ್ಮ ಮನೆಯನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳೋಣ ಎಂದು ಸವಾಲು ಹಾಕಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಸಗರ, ಮೌಲಾನಾ ಅಬ್ದುಲ್‌ ರವೂಫ್‌, ರೈತ ಮುಖಂಡರಾದ ಭಕ್ತರ ಹಳ್ಳಿ ಭೈರೇಗೌಡ, ರೂಪಾ ಶ್ರೀನಿವಾಸ ನಾಯಕ, ರಾಕೇಶ ಕೋಟಿ, ಕೊಲ್ಲಾಳ ಅಂಗಡಿ, ಶಿವಶಂಕರ ಸಜ್ಜನ, ಶಕ್ತಿಕುಮಾರ ಉಕುಮನಾಳ, ಮಹೇಶಗೌಡ ಸುಬೇದಾರ, ಉಮಾದೇವಿ ನಾಯಕ ಇದ್ದರು.

*

ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜಕೀಯ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವುದನ್ನು ತಕ್ಷಣ ಕೈಬಿಡಬೇಕು.
–ಕೋಡಿಹಳ್ಳಿ ಚಂದ್ರಶೇಖರ್‌, ಅಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT