ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ: ತೋಟಗಾರಿಕೆಯಲ್ಲಿ ಅರಣ್ಯ ಕೃಷಿ ಪ್ರಯೋಗ ಯಶಸ್ವಿ

ಸಮಗ್ರ ಕೃಷಿಯಲ್ಲಿ ‘ಪ್ರವೀಣ’ ಈ ಕೃಷಿ ಪದವೀಧರ
Last Updated 22 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕೊಲ್ಹಾರ: ಎರಡು ಎಕರೆ ಪ್ರದೇಶದಲ್ಲಿ ಮಹಾಗನಿ ಗಿಡಗಳೊಂದಿಗೆ ತೋಟಗಾರಿಕಾ ಬೆಳೆಗಳನ್ನು ಪ್ರಾಯೋಗಿಕವಾಗಿ ಅಂತರ ಬೆಳೆಗಳಾಗಿ ಬೆಳೆದಿರುವ ತಾಲ್ಲೂಕಿನ ತಡಲಗಿ ಗ್ರಾಮದ ಬಿಎಸ್ಸಿ ಕೃಷಿ ಪದವೀಧರ ಪ್ರವೀಣ ಬಾಳಿಗೇರಿ ಸಮಗ್ರ ಕೃಷಿಯಲ್ಲಿ ಯಶಸ್ವಿ ಪ್ರಯೋಗ ಮಾಡಿದ್ದಾರೆ.

ಅಲ್ಲದೇ, ಇನ್ನೆರಡು ಎಕರೆ ಪ್ರದೇಶದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು, ಕುರಿಕೋಳಿ ಶೆಡ್ ಹಾಗೂ ನರ್ಸರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬಿಎಸ್ಸಿ ಕೃಷಿ ಪದವಿಯೊಂದಿಗೆ ವಿವಿಧ ಕೃಷಿ ತರಬೇತಿಗಳನ್ನು ಪಡೆದ ತಡಲಗಿಯ ಪ್ರವೀಣ ಬಾಳಿಗೇರಿ ಮೂರ್ನಾಲ್ಕು ವರ್ಷಗಳ ಹಿಂದೆ ತಮ್ಮ 10 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದಾರೆ.

ತೋಟಗಾರಿಕೆ ಬೆಳೆಗಳಲ್ಲಿ ಅರಣ್ಯ ಕೃಷಿ ಪದ್ದತಿಯಲ್ಲಿ ಮೂರು ವರ್ಷಗಳ ಹಿಂದೆ 2 ಎಕರೆಯಲ್ಲಿ ಸುಮಾರು 700 ಮಹಾಗನಿ ಗಿಡಗಳನ್ನು ಬೆಳೆದು ಅಂತರ ಬೆಳೆಗಳಾಗಿ ವಿವಿಧ ತಳಿಯ 500 ಪೇರು ಗಿಡಗಳು, 100 ಕಾಳು ಮೆಣಸು, 100 ಯಾಲಕ್ಕಿ, ಲವಂಗ, 25 ಸರ್ವಸಾಂಬಾರು ಎಲೆ ಗಿಡಗಳು ಸೇರಿದಂತೆ 50 ಕ್ಕೂ ಹೆಚ್ಚು ಬೆಳೆಗಳನ್ನು ಪ್ರಯೋಗಿಕವಾಗಿ ಬೆಳೆದಿದ್ದಾರೆ.

ಕೆಲವು ಗಿಡಗಳು ಮಹಾಗನಿ ಗಿಡಗಳಿಗೆ ಬಳ್ಳಿಯಾಗಿ ಹಬ್ಬಿದರೆ ಕೆಲವು ನೆರಳಿನ ಆಶ್ರಯದಲ್ಲಿ ಬೆಳೆಯುವ ಗಿಡಗಳಾಗಿವೆ.

ಮತ್ತೆರಡು ಎಕರೆಯಲ್ಲಿ ಶೂನ್ಯಬಂಡವಾಳ, ಅಧಿಕ ಸಾಂದ್ರತೆ, ಅತಿ ಕಡಿಮೆ ನಿರ್ವಹಣೆಯಲ್ಲಿ ಅಧಿಕ ಲಾಭ ನೀಡುವ ಎನ್ಎಂಕೆ 1 ಗೋಲ್ಡ್ ಹಾಗೂ ಡೈಮಂಡ್ ತಳಿಯ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮ ಫಲಗಳ ಸುಮಾರು 1500 ಗಿಡಗಳನ್ನು ಬೆಳಸಿದ್ದಾರೆ.ಈಗಾಗಲೇ ಹಣ್ಣು ಬಿಡಲು ಪ್ರಾರಂಭಿಸಿದ್ದು, ಮುಂದಿನ ಸೆಪ್ಟೆಂಬರ್ ವೇಳೆ ಫಲ ಬರುವ ನಿರೀಕ್ಷೆಯಲ್ಲಿದ್ದಾರೆ.

ಪ್ರತಿ ಹಣ್ಣು ಸುಮಾರು 700-800 ಗ್ರಾಂ ತೂಕವಾಗಿ ಆರಂಭದಲ್ಲೇ ಪ್ರತಿ ಗಿಡಕ್ಕೆ ಸುಮಾರು 4-5 ಕೆಜಿಯಷ್ಟು ಹಣ್ಣುಗಳು ಬರುತ್ತವೆ. ಕಟಾವಾದ ಒಂದು ವಾರದವರೆಗೂ ಹಣ್ಣುಗಳನ್ನು ಶೇಖರಿಸಿ ಇಡಬಹುದು.

ಆರಂಭದಲ್ಲಿ ಸುಮಾರು ₹ 1 ಲಕ್ಷ ಆದಾಯ ಬರುವ ನಿರೀಕ್ಷೆಯಿದ್ದು, ಮುಂದೆ ವರ್ಷದಿಂದ ವರ್ಷಕ್ಕೆ ಹೆಚ್ಚು ತೂಕದ ಇಳುವರಿ ಬರುತ್ತದೆ. ಅಡಿಕೆ ಬೆಳೆಗಾರರು ಸಹ ಸೀತಾಫಲಗಳ ಕೃಷಿಯತ್ತ ಒಲವು ತೋರುತ್ತಿದ್ದು, ಮುಂದೆ ದ್ರಾಕ್ಷಿ ಬೆಳೆಗಿಂತಲೂ ಹೆಚ್ಚು ಆದಾಯ ನೀಡುತ್ತದೆ ಎಂಬುದು ಯುವ ರೈತ ಪ್ರವೀಣ ಅವರ ಅಚಲ ವಿಶ್ವಾಸ.

ಈಗಾಗಲೇ ಪೇರು,ಚೆಂಡು ಹೂ, ಶೇಂಗಾ, ಈರುಳ್ಳಿ ಹಾಗು ವಿವಿಧ ಬೆಳೆಗಳ ಮೂಲಕ ಸುಮಾರು ₹ 4 ಲಕ್ಷ ಮತ್ತು ಕುರಿ, ಕೋಳಿ ಸಾಕಾಣಿಕೆಯಿಂದಲೂ ಸುಮಾರು ₹ 4 ಲಕ್ಷ ಲಾಭ ಗಳಿಸಿದ್ದಾರೆ.

ನಾಲ್ಕು ಎಕರೆ ಸಮಗ್ರ ಕೃಷಿ ಭವಿಷ್ಯದಲ್ಲಿ ಜನರ ಆರೋಗ್ಯಕ್ಕೆ ಪೂರಕವಾದ ಬೆಳೆಗಳಾಗುವ ಜೊತೆಗೆ ಅತ್ಯುತ್ತಮ ಲಾಭ ತಂದು ಕೊಡುವುದರಲ್ಲಿ ಎರಡು ಮಾತಿಲ್ಲ, ರೈತರಿಗೆ ಕಡಿಮೆ ಭೂಮಿಯಲ್ಲಿ ಅಧಿಕ ಲಾಭ ನೀಡುವ ಕೃಷಿಪದ್ದತಿ ಪರಿಚಯಿಸುವುದು ಪ್ರವೀಣ ಅವರ ಕೃಷಿ ಪ್ರಾಯೋಗಿಕ ಉದ್ದೇಶ.

ಪ್ರವೀಣ ಅವರು ಜಿಲ್ಲೆಯ ಆತ್ಮ ಯೋಜನೆಯ ಸದಸ್ಯರಾಗಿದ್ದು, 2021 ರಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ‘ಫಲ ಶ್ರೇಷ್ಠ’ ಪ್ರಶಸ್ತಿ ಪಡೆದಿದ್ದಾರೆ. ಹಲವಾರು ರೈತರಿಗೆ ತರಬೇತಿ ನೀಡುತ್ತಾ, ಇತ್ತಿಚೇಗೆ ಜರುಗಿದ ಧಾರವಾಡ ಕೃಷಿಮೇಳದಲ್ಲಿ ರೈತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

*
ತೋಟವನ್ನು ಭವಿಷ್ಯದಲ್ಲಿ ಅತ್ಯುತ್ತಮ ಮಾದರಿ ಕೃಷಿ ಪ್ರವಾಸಿ ತಾಣವನ್ನಾಗಿಸಿ, ಇಲ್ಲೊಂದು ಸಂಸ್ಕರಣಾ ಘಟಕ ಮಾಡುವ ಗುರಿ ಇದೆ.
- ಪ್ರವೀಣ ಬಾಳಿಗೇರಿ, ಯುವ ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT