ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ: ಗೋಪಾಲ, ಪವನ ಜೋಡಿ; ಚಿತ್ರಕಲೆ ಮೋಡಿ

ಶಾಲೆಗಳ ಅಂದ ಹೆಚ್ಚಿಸುವ ಯುವ ಕಲಾಕಾರರು
Last Updated 2 ಅಕ್ಟೋಬರ್ 2021, 12:44 IST
ಅಕ್ಷರ ಗಾತ್ರ

ತಿಕೋಟಾ: ಆರ್ಥಿಕವಾಗಿ ಬಡ ಕುಟುಂಬದವರಾದಗೋಪಾಲ, ಪವನ ಎಂಬ ಚಿತ್ರಕಲಾವಿದರ ಜೋಡಿ, ತಮ್ಮ ಚಿತ್ರಕಲೆಯ ಮೂಲಕವೇ ಶಿಕ್ಷಣದ ಖರ್ಚು ವೆಚ್ಚ ನಿಭಾಯಿಸಿಕೊಂಡು ಸಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಟಕ್ಕಳಕಿ ತಾಂಡಾ‌ ನಂ.1ರ ಗೋಪಾಲ ಹುನ್ನು ಪವಾರ ಹಾಗೂ ಪವನ ಲಾಲಸಿಂಗ್‌ ಪವಾರ ಅವರು ಶಾಲಾ ಗೋಡೆ ಬರಹಗಳು, ಡಿಸೈನ್ ಚಿತ್ರಗಳು, ಶೇಡಿಂಗ್ ಬರವಣಿಗೆ, ತ್ರೀಡಿ ಆರ್ಟ್‌, ಬ್ಯಾನರ್ ಬರವಣಿಗೆ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಆಕರ್ಷಕ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಕಲೆಯನ್ನು ಈ ಜೋಡಿ ಮೈಗೂಡಿಸಿಕೊಂಡಿದ್ದಾರೆ. ಇವರ ಪ್ರತಿಭೆ ಕಂಡು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಆನಂದ ಝಂಡೆಯವರು ಇವರ ಸಾಧನೆಗೆ ಕೈ ಜೋಡಿಸಿ, ಚಿತ್ರ ಬಿಡಿಸುವ ಹೊಸ ಆಯಾಮಗಳನ್ನು ಪರಿಚಯಿಸಿ, ಉತ್ತಮ ಕಲಾಕಾರರಾಗಿ ನಿರ್ಮಾಣ ಮಾಡಿದ್ದಾರೆ.

ಚಿತ್ರಕಲೆಯಲ್ಲೆ ಆಸಕ್ತಿ ತೋರಿದ ಗೋಪಾಲ ಪ್ರೌಢಶಾಲಾ ಹಂತದಲ್ಲೆ ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸುವ ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಸರ್ಕಾರದ ಇ– ಆಡಳಿತ ವತಿಯಿಂದ ಏರ್ಪಡಿಸಿದ್ದ ಆಧಾರ್‌ ಕೇಂದ್ರೀಕೃತ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲ್ಲೂಕು, ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ದ್ವೀತಿಯ ಸಾಧನೆಗೈದು ಆಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ₹ 25 ಸಾವಿರ ನಗದು, ಪ್ರಶಸ್ತಿ ಪತ್ರ ಪಡೆದಿದ್ದಾನೆ.

ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಬೆಳಗಾವಿಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸದ್ಯ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಕಲಾ ಮಹಾವಿದ್ಯಾಲಯದಲ್ಲಿ ಬಿವಿಎ ಚಿತ್ರಕಲಾ ತರಬೇತಿ ಪಡೆಯುತ್ತಿದ್ದಾನೆ.

ಪವನ ಪವಾರ ಸದ್ಯ ವಿಜಯಪುರದ ಖೇಡ್‌ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಈತ ಕೂಡ ಪ್ರೌಢಶಾಲಾ ಹಂತದಲ್ಲಿಯೇ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ‘ಬೇಟಿ ಬಚಾವೋ ಬೇಟಿ ಪಢಾವೊ’ ನಿಮಿತ್ತ ಜಿಲ್ಲಾ ಪಂಚಾಯ್ತಿ ವತಿಯಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಪ್ರತಿಭಾ ಕಾರಂಜಿಯಲ್ಲೂ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಚಿತ್ರಕಲೆಯಲ್ಲಿ ಅಸಾಧಾರಣಗೈದ ವಿದ್ಯಾರ್ಥಿ ಎಂದು ಪರಿಗಣಿಸಿ ₹ 10 ಸಾವಿರ ನಗದು ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಗೋಪಾಲ ಹಾಗೂ ಪವನ ಕುಟುಂಬವು ದುಡಿಮೆಗಾಗಿ ಮಹಾರಾಷ್ಟ್ರಕ್ಕೆ ಗುಳೇ ಹೋಗುತ್ತಾರೆ. ಇವರ ಶೈಕ್ಷಣಿಕ ಖರ್ಚಿನ ನಿರ್ವಹಣೆಗೆ ತಮ್ಮ ಚಿತ್ರಕಲೆಯಿಂದ ಬರುವ ಆದಾಯವೇ ಕೈ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT