ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ಆಸ್ಪತ್ರೆ, ಔಷಧವೆಂದರೇ ಹಳ್ಳಿಗರಿಗೆ ಭಯ

ಕೋವಿಡ್‌ ಸೋಂಕಿನಿಂದ ಪಾರಾಗಲು ಅಡವಿ ವಸ್ತಿ, ತೋಟದ ವಸ್ತಿ ಆಶ್ರಯ
Last Updated 4 ಜೂನ್ 2021, 1:42 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸೋಂಕಿನಿಂದಾಗಿ ಆಸ್ಪತ್ರೆಗೆ ಹೋದ ಹರೆಯದವರು ಹೆಣವಾಗಿ ಊರಿಗೆ ಮರಳಿದ್ದು ಜನರಲ್ಲಿ ಕೋವಿಡ್‌ ಬಗ್ಗೆ ಇನ್ನಿಲ್ಲದ ಭಯ, ಆತಂಕ, ತಳಮಳ ಮೂಡಿಸಿದೆ. ಜೊತೆಗೆ ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಔಷಧದ ಬಗ್ಗೆಯೇಅಪನಂಬಿಕೆ, ಅನುಮಾನ ಹುಟ್ಟಿಕೊಂಡಿರುವುದು ಜಿಲ್ಲೆಯ ಗ್ರಾಮೀಣ ಭಾಗಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಸ್ಪಷ್ಟವಾಗಿ ಗೋಚರಿಸಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಕುಟುಂಬದ ಆಧಾರಸ್ತಂಭಗಳೇ ಕಳಚಿಕೊಂಡಿವೆ.ಜನರ ಓಡಾಟ ಹೆಚ್ಚಿಲ್ಲದ, ಅಂಗಡಿ, ಮಳಿಗೆಗಳಿಲ್ಲದ, ಸಾರಿಗೆ, ಸಂಪರ್ಕ ವಿರಳವಾಗಿರುವ ಹಳ್ಳಿಗಳಲ್ಲಿ ಕೋವಿಡ್‌ ಪ್ರಕರಣಗಳು ಬೆರಳೆಣಿಕೆಯಷ್ಟು ವರದಿಯಾಗಿವೆ. ಜಿಲ್ಲೆಯ 629 ಹಳ್ಳಿಗಳ ಪೈಕಿ ಇದುವರೆಗೆ 555 ಹಳ್ಳಿಗಳಿಗೆ ಕೋವಿಡ್‌ ತನ್ನ ಕಬಂಧಬಾಹುಗಳನ್ನು ಚಾಚಿದೆ.

ಜನರ ಹಿಂದೇಟು: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 67 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಈ ಕೇಂದ್ರಗಳಿಗೆ ಬರಲು ಸೋಂಕಿತರು ಹಿಂದೇಟು ಹಾಕುತ್ತಿದ್ದಾರೆ.

‘ಆರೈಕೆ ಕೇಂದ್ರಕ್ಕೆ ಹೋದರೆ ಊರಲ್ಲಿ ಜನ ನಮ್ಮನ್ನು ನೋಡುವ ದೃಷ್ಟಿ ಬೇರೆಯಾಗುತ್ತದೆ; ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಎಂಬ ಆತಂಕ ಗ್ರಾಮೀಣರದ್ದು, ಹೀಗಾಗಿ ಹೋಗಲೊಲ್ಲೆ ಎನ್ನುತ್ತಾರೆ. ಹೊಲ, ತೋಟದ ವಸ್ತಿಯಲ್ಲೇ ಇರ್ತಾರೆ. ಆರೈಕೆ ಕೇಂದ್ರಕ್ಕೆ ಬರುವುದಿಲ್ಲ’ ಎಂದುಇಂಡಿ ತಾಲ್ಲೂಕಿನ ಅಥರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ ತಾಳಿಕೋಟೆ ತಿಳಿಸಿದರು.

‘ಜ್ವರ, ಶೀತ, ಕೆಮ್ಮು ಇರುವವರಿಗೆ ಕೋವಿಡ್‌ ಪರೀಕ್ಷೆ ಮಾಡುತ್ತೇವೆ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ಜನ ಬರುತ್ತಿಲ್ಲ. ಮೊದಲೆಲ್ಲ ಪ್ರತಿ ದಿನ 200 ಜನ ಬರುತ್ತಿದ್ದರು. ಈಗ 20 ಜನರೂ ಬರುತ್ತಿಲ್ಲ. ಬಿಎಎಂಎಸ್‌ ವೈದ್ಯರ ಬಳಿ ಹೋಗುತ್ತಾರೆ. ಗಂಭೀರ ಆದ ತಕ್ಷಣ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಹೋಗುತ್ತಾರೆ’ ಎಂದು ದೂರಿದರು.

ಇಂಜೆಕ್ಷನ್‌ನಿಂದಲೇ ಸಾವು: ‘ಊರಾಗ ಸರ್ಕಾರಿ ದವಾಖಾನಿ ಅದ. ಅಲ್ಲಿ ಎಂಥದ್ದೋ ಎಣ್ಣಿ ತಂದು ಇಂಜೆಕ್ಷನ್‌ ಮಾಡ್ಯಾರಾ, ಮಂದಿ ಸತ್ತಾರ’ ಎಂದು ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ರೈತ ಮಲ್ಲಪ್ಪ ಬಸಪ್ಪ ಅಗಸರ ತಮ್ಮ ಅಪನಂಬಿಕೆಯನ್ನು ಹೊರಹಾಕಿದ್ದರು.

‘ಪ್ಯಾಟ್ಯಾಗ ಸಂಡಾಸ ರೂಮು, ಬಾತ್‌ ರೂಮು ಎಲ್ಲ ಮನ್ಯಾಗ ಕಟ್ಟಿಶ್ಯಾರ. ಮನಿ ಒಳಗ ಎಲ್ಲ ಮಾಡ್ತಾರ, ಪ್ಯಾಟ್ಯಾಗಿನ ಮಂದಿಗ ಜಡ್ಡು ಬಂದದ. ಸಮಯಕ್ಕೆ ಸರಿಯಾಗಿ ಊಟ ಮಾಡದೇ, ಜಳಕ ಮಾಡದೆ, ಸಂಸಾರ ಬಿಟ್ಟು ಊರೂರು ಅಲೆಯೋರು ಬಿಸಿಲು ಹೆಚ್ಚಾಗಿ, ಶಕ್ತಿ ಕಡಿಮೆಯಾಗಿ ಜಡ್ಡು ಬಂದು ಸಾಯ್ತಾರ’ ಎಂದು ವಿಶ್ಲೇಷಿಸುತ್ತಲೇ ಬಯಲು ಶೌಚ ಪರವಾಗಿಯೂ ಮಾತನಾಡುತ್ತಾರೆ.

ತೋಟ, ಅಡವಿ ವಸ್ತಿಯಲ್ಲಿ ವಾಸ: ಜಿಲ್ಲೆಯಲ್ಲಿ ಸ್ಥಿತಿವಂತರು, ಅನುಕೂಲ ಇರುವವರು ಕೋವಿಡ್‌ ಸೋಂಕಿನಿಂದ ಪಾರಾಗಲು ಹಾಗೂ ಜನ ಸಂಪರ್ಕದಿಂದ ದೂರವಿರಲು ತಮ್ಮ ತೋಟದ ವಸ್ತಿ, ಅಡವಿ ವಸ್ತಿಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಂಡುಕೊಂಡಿದ್ದಾರೆ.

ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದ ತೋಟದಲ್ಲಿ ಒಂದೂವರೆ ತಿಂಗಳಿಂದ ಆಶ್ರಯ ಪಡೆದುಕೊಂಡಿರುವ ವಿಜಯಪುರ ನಗರದ ಸುರೇಶ ಕಲಾದಗಿ, ‘ವಯಸ್ಸಾದ ತಂದೆ, ತಾಯಿ, ಮಕ್ಕಳ ಸುರಕ್ಷತೆಗಾಗಿ ತೋಟದ ಮನೆಗೆ ಬಂದೆವು. ಇಲ್ಲಿರುವುದರಿಂದ ಯಾವುದೇ ತೊಂದರೆಯಾಗಿಲ್ಲ’ ಎಂದರು.

ವೈದ್ಯ ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 8 ಸಮುದಾಯ ಆರೋಗ್ಯ ಕೇಂದ್ರಗಳು, 4 ತಾಲ್ಲೂಕು ಆಸ್ಪತ್ರೆಗಳು, 5 ಯುಪಿಎಚ್‌ಸಿ ಇವೆ. ಆದರೆ, ಕಾಯಂ ವೈದ್ಯರು, ನರ್ಸ್‌ಗಳು, ಪ್ರಯೋಗಾಲಯ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಎಲ್ಲೆಡೆ ಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಅವರೇ ಸದ್ಯದ ಕೋವಿಡ್‌ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಶಕ್ತಿ ಮೀರಿ ಎದುರಿಸುತ್ತಿದ್ದಾರೆ.

ಬಾರದ ವೈದ್ಯ ಸಿಬ್ಬಂದಿ: ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು, ನರ್ಸ್‌ಗಳು ಇದ್ದರೂ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ‘ಪ್ರಜಾವಾಣಿ’ ಪ್ರತಿನಿಧಿ ಈ ಆರೋಗ್ಯ ಕೇಂದ್ರಕ್ಕೆ ಬೆಳಿಗ್ಗೆ 10ಕ್ಕೆ ಭೇಟಿ ನೀಡಿದಾಗಲೂ ಅಲ್ಲಿ ಯಾವೊಬ್ಬ ವೈದ್ಯರು, ನರ್ಸ್‌ಗಳು ಇರಲಿಲ್ಲ. ಹತ್ತಾರು ಮಂದಿ ರೋಗಿಗಳು ವೈದ್ಯರು, ನರ್ಸ್‌ ಬರುವ ದಾರಿಯನ್ನು ಎದುರು ನೋಡುತ್ತಾ ಕುಳಿತಿದ್ದರು.

ಇದೇ ರೀತಿ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮಕ್ಕೆ ಭೇಟಿ ನೀಡಿದಾಗಲ್ಲೂ ಸಹ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮುಚ್ಚಿರುವುದು ಕಂಡುಬಂದಿತು. ಇದು ಜಿಲ್ಲೆಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಯಾಗಿದೆ.

ಹಳ್ಳಿಯಲ್ಲಿ ಬಿರುಸುಗೊಂಡ ಚಟುವಟಿಕೆ

ವಿಜಯಪುರ: ಹೋಂ ಐಸೋಲೇಷನ್‌ ಆಗಿರುವ ಕುಟುಂಬಗಳಿಗೆ ಗ್ರಾಮ ಪಂಚಾಯ್ತಿಯಿಂದ ಆಹಾರ ಕಿಟ್‌ ಒದಗಿಸಲಾಗುತ್ತಿದೆ. ಆಶಾ, ಅಂಗನವಾಡಿ ಮತ್ತು ಆರೋಗ್ಯ ಸಿಬ್ಬಂದಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಮನೆ, ಮನೆಗೆ ಭೇಟಿ ನೀಡಿ ಕೋವಿಡ್‌ ಸೋಂಕಿತರ ಪತ್ತೆ ಕಾರ್ಯ ಬಿರುಸುಗೊಳಿಸಿದ್ದಾರೆ.

ಕೋವಿಡ್‌ ಲಕ್ಷಣ ಇರುವವರನ್ನು ಪತ್ತೆ ಹಚ್ಚಿ, ಗಂಭೀರ ಇರುವವರನ್ನು ಆಸ್ಪತ್ರೆಗೆ, ಸಾಧಾರಣ ಲಕ್ಷಣ ಇರುವವರಿಗೆ ಮನೆಯಲ್ಲೇ ಔಷಧ ನೀಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹೆಚ್ಚು ಪ್ರಕರಣಗಳು ಕಂಡುಬರುವ ಪ್ರದೇಶವನ್ನು ಸೀಲ್‌ಡೌನ್‌ ಮಾಡುವ ಕಾಯಕದಲ್ಲಿ ನಿರತವಾಗಿದ್ದಾರೆ.

ಗ್ರಾಮ ಪಂಚಾಯ್ತಿಯಿಂದ ಇಡೀ ಗ್ರಾಮದಲ್ಲಿ ಸ್ಯಾನಿಟೈಸ್‌ ಮಾಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಲಾಕ್‌ಡೌನ್‌ ನಿಯಮಗಳ ಜಾರಿಗೆ ಬೀಟ್‌ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೋವಿಡ್‌ ಕಾರ್ಯಪಡೆಗಳನ್ನು ನೇಮಿಸಲಾಗಿದ್ದು, ಕಾರ್ಯಪಡೆ ಪದಾಧಿಕಾರಿಗಳು ಜನರಿಗೆ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಣಾಮ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಇಳಿಕೆಯಾಗತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT