ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಪಾದ ವಾತಾವರಣಕ್ಕೆ ಹೆಚ್ಚಾದ ರೋಗಗಳು

ಡಾವಣಿ, ಬುರಿ, ಕರ್ಪಾ ರೋಗದಿಂದ ಬೆಳವಣಿಗೆಯಾಗದ ದ್ರಾಕ್ಷಿ ಕಡ್ಡಿಗಳು
Last Updated 29 ಜುಲೈ 2021, 13:44 IST
ಅಕ್ಷರ ಗಾತ್ರ

ತಿಕೋಟಾ(ವಿಜಯಪುರ): ಹದಿನೈದು ದಿನಗಳಿಂದ ನಿರಂತರವಾಗಿ ತಂಪೆರುಸುತ್ತಿರುವ ಜಿಟಿ ಜಿಟಿ ಮಳೆ ಹಾಗೂ ತಂಪಾದ ವಾತಾವರಣದ ನಡುವೆ ದ್ರಾಕ್ಷಿ ಬೆಳೆಗೆ ಸೂರ್ಯನ ಶಾಖದ ವಾತಾವರಣ ಲಭಿಸುತ್ತಿಲ್ಲ. ಈ ತಂಪಾದ ವಾತಾವರಣದಿಂದ ದ್ರಾಕ್ಷಿ ಪಡಗಳಿಗೆ ಡವಣಿ, ಬುರಿ ಹಾಗೂ ಕರ್ಪಾ ರೋಗಗಳು ಬಂದು ದ್ರಾಕ್ಷಿ ಬೆಳೆಗಾರರನ್ನು ಹೈರಾಣಾಗಿಸಿವೆ.

ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಭಾಗದಲ್ಲಿರುವ ದ್ರಾಕ್ಷಿ ಬೆಳೆಗಾರರು ಬೇಸಿಗೆ ಚಾಟ್ನಿ ಮಾಡಿ ಕಡ್ಡಿ ತಯಾರು ಮಾಡಿಕೊಳ್ಳುವ ಈ ಸಮಯದಲ್ಲಿ ಈ ರೋಗದಿಂದ ತಪ್ಪಲು ಉದುರಿ ಕಡ್ಡಿಗಳು ಒಣಗುತ್ತಿವೆ. ಬರುವ ಅಕ್ಟೋಬರ್ ತನಕ ಕಡ್ಡಿ ತಯಾರಿಸಿ ನಂತರ ಕಾಯಿ ಚಾಟ್ನಿ ಮಾಡಿ ಉತ್ತಮ ಆದಾಯದ ನಿರೀಕ್ಷೆ ಇಟ್ಟ ದ್ರಾಕ್ಷಿ ಬೇಳೆಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಲಾಕ್‌ಡೌನ್‌ ಸಮಯದಲ್ಲಿ ಸೂಕ್ತ ವ್ಯಾಪಾರಸ್ಥರು ಇಲ್ಲದ್ದರಿಂದ ಉತ್ತಮ ದರ ಲಭಿಸಲಿಲ್ಲ. ಈಗ ಅತಿ ಹೆಚ್ಚು ತಂಪಾದ ವಾತಾವರಣ ನಿರ್ಮಾಣವಾಗಿರುವುದರಿಂದ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಮೊದಲೇ ಸಾಲದ ಸುಳಿಯಲ್ಲಿರುವ ದ್ರಾಕ್ಷಿ ಬೆಳೆಗಾರ ಮತ್ತಷ್ಟು ಖರ್ಚು ಮಾಡಬೇಕಾಗಿದೆ.

ಒಂದು ಹೆಕ್ಟೇರ್ ದ್ರಾಕ್ಷಿ ಬೆಳೆಗೆ ₹3-4 ಲಕ್ಷ ಖರ್ಚು ಮಾಡಬೇಕಾಗುತ್ತದೆ. ಹವಾಮಾನದ ಏರಿಳಿತದಿಂದ ಆಗುವ ಈ ತೊಂದರೆಯಿಂದ ಕಡ್ಡಿ ತಯಾರಾಗುವುದಿಲ್ಲ. ಮುಂದೆ ಅಕ್ಟೋಬರ್ ಚಾಟ್ನಿ ಮಾಡಿದಾಗ ಹೂವು ಸರಿಯಾಗಿ ಬಿಡುವುದಿಲ್ಲ. ಕಳೆದ ವರ್ಷವು ದ್ರಾಕ್ಷಿ ಬೆಳೆಗಾರರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಈ ವರ್ಷವು ಸೂಕ್ತ ಹವಾಮಾನ ಸಿಗದೇ ತೊಂದರೆಗೆ ಒಳಗಾಗಿದ್ದಾರೆ. 2019–20ನೇ ಸಾಲಿನ ಹವಾಮಾನ ಆಧಾರಿತ ವಿಮೆಯನ್ನು ಸರ್ಕಾರ ಬಿಡುಗಡೆ ಮಾಡಿ ರೈತರಿಗೆ ಸಹಾಯ ಮಾಡಿದೆ.

2020–21ನೇ ಸಾಲಿನ ಸಾಲಿನ ವಿಮೆಯನ್ನು ಕೂಡಾ ಶೀಘ್ರದಲ್ಲೆ ಬಿಡುಗಡೆ ಮಾಡಬೇಕು. ಸದ್ಯ ಈ ವರ್ಷ ಕೂಡಾ ತೋಟಗಾರಿಕಾ ವಿಜ್ಞಾನಿಗಳು ತಂಡಗಳಾಗಿ ಮಾಡಿ, ದ್ರಾಕ್ಷಿ ಬೆಳೆಗಾರರ ತೋಟಕ್ಕೆ ಭೇಟಿ ನೀಡಿ, ಪರಿಶೀಲಿಸಿ ಹವಾಮಾನ ವೈಪರೀತ್ಯದಿಂದ ನಷ್ಟವಾದ ದ್ರಾಕ್ಷಿ ಬೆಳೆಯ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕೊಡಬೇಕೆಂದು ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ಶೀಘ್ರದಲ್ಲೇ ಮನವಿ ಕೊಡುತ್ತೇವೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ್ 'ಪ್ರಜಾವಾಣಿ' ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT