ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಆಯೋಜನೆ; ಇನ್‌ಸೈಟ್ಸ್ ಸಂಸ್ಥೆ ಸಹಭಾಗಿತ್ವ
Published : 14 ನವೆಂಬರ್ 2025, 3:33 IST
Last Updated : 14 ನವೆಂಬರ್ 2025, 3:33 IST
ಫಾಲೋ ಮಾಡಿ
Comments
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಗುರುವಾರ ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜುಗಳ  ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಹಾಗೂ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆ ಸಹಭಾಗಿತ್ವದಲ್ಲಿ ಗುರುವಾರ ಉದ್ಯೋಗಾಕಾಂಕ್ಷಿಗಳಿಗಾಗಿ ಏರ್ಪಡಿಸಿದ್ದ ‘ಗೈಡಿಂಗ್‌ ಫೋರ್ಸ್‌’ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿವಿಧ ಕಾಲೇಜುಗಳ  ವಿದ್ಯಾರ್ಥಿನಿಯರು –ಪ್ರಜಾವಾಣಿ ಚಿತ್ರ
‘ದೈಹಿಕ ಮಾನಸಿಕ ಆರೋಗ್ಯಕ್ಕೆ ಇರಲಿ ಆದ್ಯತೆ’
‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವಾಗ ಕೇವಲ ಓದಿಗೆ ಆದ್ಯತೆ ನೀಡಿದರೆ ಸಾಲದು. ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಹಿತಮಿತವಾಗಿ ಊಟ ನಿದ್ರೆ ಮಾಡಬೇಕು. ಕನಿಷ್ಠ ಏಳು ತಾಸಾದರೂ ನಿದ್ರೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ್‌ ಸಲಹೆ ನೀಡಿದರು. ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ಅಧ್ಯಯನ ಸಿದ್ಧತೆ ಇರಬೇಕು. ಪ್ರಪಂಚದಲ್ಲಿ ತಿಳಿದುಕೊಳ್ಳಲು ಬಳಷ್ಟು ವಿಷಯ ವಸ್ತುಗಳಿವೆ.  ಆ ಎಲ್ಲ ವಿಷಯದಲ್ಲಿ ತಜ್ಞರಾಗಲು ಸಾಧ್ಯವಿಲ್ಲ. ಆದರೆ ಆ ಎಲ್ಲ ವಿಷಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದಿರಬೇಕು’ ಎಂದರು. ‘ವಿಶ್ಲೇಷಣಾತ್ಮಕ ಬರವಣಿಗೆ  ಕಲಿಯಬೇಕು ಬರವಣಿಗೆಯಲ್ಲಿ ಸ್ಪಷ್ಟತೆ ಇರಬೇಕು ತಿಳಿದುರುವುದನ್ನೆಲ್ಲ ಬರೆಯುವುದಲ್ಲ ಪ್ರಶ್ನೆಗೆ ಪೂರಕವಾಗಿ ಉತ್ತರವಿರಬೇಕು’‍ ಎಂದರು. ‘ಪ್ರತಿ ವಿಷಯಕ್ಕೂ ಹತ್ತಾರು ಪುಸ್ತಕಗಳು ಇರುತ್ತವೆ. ಆ ಎಲ್ಲ ಪುಸ್ತಕಗಳನ್ನು ಓದುವುದಲ್ಲ ಒಂದು ಪುಸ್ತಕವನ್ನು ಆಳವಾಗಿ ಓದಬೇಕು ಓದಿದ ವಿಷಯವನ್ನು ವಿಶ್ಲೇಷಣೆ ಮಾಡುವ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು. ನಿಶ್ಚಿತ ಗುರಿ ತಲುಪುವಲ್ಲಿ ಒಂದು ವೇಳೆ ವಿಫಲವಾದರೆ ಯಾವುದೇ ಕಾರಣಕ್ಕೂ ಧೈರ್ಯಗುಂದಬಾರದು’ ಎಂದರು.
ಡಾ.ಕೆ.ಆನಂದ್‌
ಡಾ.ಕೆ.ಆನಂದ್‌
- ‘ಆಯ್ಕೆಗಿಂತ ನಿರಾಕರಣೆ ಹೆಚ್ಚು’
‘ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕಿಂತ ನಿರಾಕರಣೆ ಮಾಡುವ ಪರೀಕ್ಷೆ ಎಂದರ್ಥ. ಅಂದರೆ ಒಂದು ಸಾವಿರ ಆಕಾಂಕ್ಷಿಗಳಲ್ಲಿ 999 ಜನರನ್ನು ಕೈಬಿಟ್ಟು ಒಬ್ಬರನ್ನು ಆಯ್ಕೆ ಮಾಡುವುದಾಗಿದೆ. ಉಳಿವಿಗಾಗಿ ನಡೆಯುವ ಹೋರಾಟ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವಿಶ್ಲೇಷಿಸಿದರು. ‘ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಎಸ್‌ಎಸ್‌ಎಲ್‌ಸಿ ಪಿಯುಸಿ ಪದವಿ ಪರೀಕ್ಷೆಯಂತಲ್ಲ. ಪರೀಕ್ಷಾರ್ಥಿಯ ಶ್ರಮವು ಮೊಲದ ಓಟದಂತಿರದೇ ಆಮೆಯ ನಿರಂತರತೆಯಂತಿರಬೇಕು’ ಎಂದರು. ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಿಜೆಕ್ಟ್‌ ಆದವರೂ ಜೀವನದಲ್ಲಿ ಯಶಸ್ವಿಯಾಗುವ ಅವಕಾಶ ಇರುತ್ತದೆ. ಆ ವೇಳೆ ಸಿಗುವ ಜೀವನಾನುಭವ ಮುಖ್ಯವಾಗಿರುತ್ತದೆ. ವ್ಯಕ್ತಿತ್ವ ವಿಕಸನವಾಗುತ್ತದೆ. ಸೋಲಿನಲ್ಲೂ ಅನುಭವದ ‍ಪಾಠಗಳಿರುತ್ತವೆ. ಆ ಪಾಠಗಳು ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತವೆ’ ಎಂದು ಹೇಳಿದರು. ‌‘ಸರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಾಗ ಕುಟುಂಬ ವರ್ಗದಿಂದ ಸಾಕಷ್ಟು ನಿರೀಕ್ಷೆ ಸಮಾಜದಿಂದ ಟೀಕೆಗಳು ತಿರಸ್ಕಾರಗಳು ಎದುರಾಗುತ್ತವೆ. ಅವುಗಳನ್ನು ಸಮವಾಗಿ ನಿರ್ವಹಿಸಬೇಕು. ವಿಫಲತೆಗಳು ಕಲಿಸುವಷ್ಟು ಪಾಠ ಯಶಸ್ಸು ಕಲಿಸುವುದಿಲ್ಲ. ಒಂದು ವೇಳೆ ವಿಫಲವಾದರೆ ಅದನ್ನು ಆಸ್ವಾಧಿಸಬೇಕು’ ಎಂದರು. 
ಲಕ್ಷ್ಮಣ ನಿಂಬರಗಿ
ಲಕ್ಷ್ಮಣ ನಿಂಬರಗಿ
ಕೆಪಿಎಸ್‌ಸಿ ಕಾರ್ಯ ಪಾರದರ್ಶಕವಿರಲಿ’
- ‘‘ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಭ್ರಷ್ಟಾಚಾರದ ಕೂಪವಾಗಿದೆ. ಈಗಿರುವ ಕೆಪಿಎಸ್‌ಸಿ ವ್ಯವಸ್ಥೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಿ ಹೊಸ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ’ ಎಂದು ಬೆಂಗಳೂರಿನ ಇನ್‌ಸೈಟ್ಸ್‌ ಐಎಎಸ್‌ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿನಯ್‌ ಕುಮಾರ್‌ ಜಿ.ಬಿ.ಹೇಳಿದರು. ‘ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಯಾರೇ ಮುಖ್ಯಮಂತ್ರಿಯಾದರೂ ಕೆ‍ಪಿಎಸ್‌ಸಿ ಸುಧಾರಣೆಗೆ ಆದ್ಯತೆ ನೀಡುತ್ತಿಲ್ಲ. ಅವರಿಗೆ ವ್ಯವಸ್ಥೆ ಬದಲಾವಣೆಯಾಗುವ ಆಶಯವೂ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಯುಪಿಎಸ್‌ಸಿ ಅತ್ಯಂತ ಪಾರದರ್ಶಕವಾಗಿ ಭ್ರಷ್ಟಾಚಾರ ರಹಿತವಾಗಿ ಯಾರ ಮುಲಾಜಿಗೂ ಪ್ರಭಾವಕ್ಕೂ ಒಳಗಾಗದೇ ಕಾರ್ಯನಿರ್ವಹಿಸುತ್ತಿದೆ. ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಿಸಬೇಕಿದೆ’ ಎಂದರು. ‘ಇನ್‌ಸೈಟ್ಸ್ ಐಎಎಸ್‌ ಸಂಸ್ಥೆಯು ಪ್ರತಿಭಾವಂತರಿಗೆ ಬಡವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದೆ. ಅಗತ್ಯ ಇರುವವರು ಸಂಸ್ಥೆಗೆ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು. ‘ಪ್ರತಿವರ್ಷ 150 ಜನರ ಕನ್ನಡಿಗರು ಐಎಎಸ್‌ ಐಪಿಎಸ್‌ಗೆ ಆಯ್ಕೆಯಾಗಬೇಕು ಕನ್ನಡಿಗರು ಟಾಪರ್‌ ಆಗಬೇಕು ಎಂಬುದು ನನ್ನ ಕನಸಾಗಿದೆ. ದೆಹಲಿಮಟ್ಟದಲ್ಲಿ ಕರ್ನಾಟಕದ ಪರವಾಗಿ ಲಾಭಿ ನಡೆಸುವ ಐಎಎಸ್‌ ಐಪಿಎಸ್‌ ಕನ್ನಡಿಗರ ಸಂಖ್ಯೆ ಕ್ಷೀಣವಾಗಿದೆ. ಪರಿಣಾಮ ರಾಜ್ಯಕ್ಕೆ ಕೇಂದ್ರದ ಅನುದಾನ ಯೋಜನೆ ತರುವಲ್ಲಿ ಹಿನ್ನಡೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ವಿನಯ್‌ ಕುಮಾರ್‌ ಜಿ.ಬಿ.
ವಿನಯ್‌ ಕುಮಾರ್‌ ಜಿ.ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT