ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ನಿರಂತರ ಮಳೆ; ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಆಲಮಟ್ಟಿ ಜಲಾಶಯ; ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ
Last Updated 17 ಜೂನ್ 2021, 15:44 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯಕ್ಕೆ ಈ ವರ್ಷ ವಾಡಿಕೆಗಿಂತ ಮೊದಲೇ (ಮೇ 24ರಿಂದ) ಒಳಹರಿವು ಆರಂಭಗೊಂಡಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ. ಗುರುವಾರ ಬೆಳಿಗ್ಗೆ 13,784 ಕ್ಯುಸೆಕ್‌ ಇದ್ದ ಒಳಹರಿವು ಸಂಜೆಯ ವೇಳೆಗೆ 20 ಸಾವಿರ ಕ್ಯುಸೆಕ್ ದಾಟಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ 15 ದಿನಗಳಿಂದ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಗೆ ಒಳಹರಿವು ಆರಂಭಗೊಂಡಿದೆ. ಪರಿಣಾಮ ಆಲಮಟ್ಟಿ ಜಲಾಶಯಕ್ಕೂ ಒಳಹರಿವು ಹೆಚ್ಚಾತ್ತಿದೆ. ಜಲಾಶಯದ ಹಿಂಭಾಗದ ಘಟಪ್ರಭಾ ನದಿಯಿಂದಲೂ ಕೃಷ್ಣೆಗೆ ನೀರು ಹರಿದು ಬರುತ್ತಿದೆ.

ಗುರುವಾರ ಹಿಪ್ಪರಗಿ ಬ್ಯಾರೇಜ್‌ನಿಂದ 20 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದ್ದು, ಶುಕ್ರವಾರ ಜಲಾಶಯದ ಒಳಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆ:

ಮಹಾರಾಷ್ಟ್ರದ ಕೊಯ್ನಾದಲ್ಲಿ 2.51 ಸೆಂ.ಮೀ, ಕಾಸರಿಯಲ್ಲಿ 1.52 ಸೆಂ.ಮೀ, ಪಾಥಗಾಂವದಲ್ಲಿ 2.07 ಸೆಂ.ಮೀ, ರಾಧಾನಗರಿಯಲ್ಲಿ 2.20 ಸೆಂ.ಮೀ, ದೂಧ್‌ಗಂಗಾದಲ್ಲಿ 2 ಸೆಂ.ಮೀ. ತರಳಿಯಲ್ಲಿ 1.46 ಸೆಂ.ಮೀ. ವಾರಣಾದಲ್ಲಿ 1.85 ಸೆಂ.ಮೀ, ತುಳಶಿಯಲ್ಲಿ 1.87 ಸೆಂ.ಮೀ ಮಳೆಯಾಗಿದೆ.

ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ಗುರುವಾರ 11,500 ಕ್ಯುಸೆಕ್ ಇತ್ತು. ಕಳೆದ ವರ್ಷ ಇದೇ ದಿನ (ಜುಲೈ 17) ಜಲಾಶಯದಲ್ಲಿ 511 ಮೀ. ವರೆಗೆ ನೀರು ಸಂಗ್ರಹವಿತ್ತು.

ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿತ್ತಿರುವ ಕಾರಣ ಜಲಾಶಯ ಭರ್ತಿ ಮಾಡಿಕೊಳ್ಳದೇ ಮುಂಜಾಗ್ರತೆ ಕ್ರಮವಾಗಿ ಒಂದೆರೆಡು ದಿನದಲ್ಲೇ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರಿದರೆ ಆಲಮಟ್ಟಿ ಜಲಾಶಯದ ಒಳಹರಿವು ನಾಲ್ಕೈದು ದಿನದಲ್ಲೇ ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಯಿದೆ.

ಜಲಾಶಯದ ನೀರಿನ ಮಟ್ಟ:

ಆಲಮಟ್ಟಿ ಜಲಾಶಯಕ್ಕೆ ಗುರುವಾರ ಒಂದೇ ದಿನ 1.2 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ. 519.6 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 508.93 ಮೀ.(25 ಟಿಎಂಸಿ ಅಡಿ)ವರೆಗೆ ನೀರು ಸಂಗ್ರಹವಾಗಿದೆ.

ಮಹಾರಾಷ್ಟ್ರ ತಂಡ ಬೆಂಗಳೂರಿಗೆ ಇಂದು

ಕೃಷ್ಣಾ ಮತ್ತು ಭೀಮಾ ನದಿಪಾತ್ರದಲ್ಲಿ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ಚರ್ಚೆಗಾಗಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಅಲ್ಲಿನ ನೀರಾವರಿ ಅಧಿಕಾರಿಗಳ ತಂಡ ಬೆಂಗಳೂರಿಗೆ ಶುಕ್ರವಾರ ಆಗಮಿಸುತ್ತಿದೆ.

ಸಂಜೆ 5ಕ್ಕೆ ವಿಕಾಸಸೌಧದಲ್ಲಿ ಕರ್ನಾಟಕದ ಅಧಿಕಾರಿಗಳ ಜತೆ ಪೂರ್ವಭಾವಿಯಾಗಿ ಚರ್ಚಿಸಲಿದ್ದಾರೆ.

ಶನಿವಾರ ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ‘ಕೃೃಷ್ಣಾ ಕಣಿವೆ ಪಾತ್ರದಲ್ಲಿ ಸಮರ್ಪಕ ಪ್ರವಾಹ ನಿಯಂತ್ರಣ ಹಾಗೂ ನಿರ್ವಹಣೆ’ ಕುರಿತು ಮಹಾರಾಷ್ಟ್ರದ ತಂಡದ ಜತೆ ಸಭೆ ನಡೆಯಲಿದೆ.

ಸಭೆಯಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ, ತೀರ್ಮಾನ ನಡೆಯಲಿದೆ.

ವಾಟ್ಸ್‌ಆ್ಯಪ್ ಗ್ರೂಪ್ ರಚನೆ

ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ ಒಳಹರಿವು ಆರಂಭವಾಗುತ್ತಿದ್ದಂತೆ ಈ ಭಾಗದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ಅದಕ್ಕಾಗಿ ಈ ಬಾರಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಕೃಷ್ಣಾ ನದಿಗೆ ಸಂಬಂಧಿಸಿದ ಅಧಿಕಾರಿಗಳು ಈಚೆಗೆ ವರ್ಚ್ಯುವಲ್ ಸಭೆ ನಡೆಸಿದರು. ನಾಲ್ಕು ರಾಜ್ಯಗಳ ನೀರಾವರಿಗೆ ಸಂಬಂಧಿಸಿದ ಅಧಿಕಾರಿಗಳ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿಕೊಂಡು, ಜಲಾಶಯದ ಒಳಹರಿವು, ನೀರು ಬಿಡುಗಡೆ, ಮಳೆ ಮಾಹಿತಿ, ನದಿಯ ಹರಿವಿನ ಪ್ರಮಾಣದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ಈ ಮೂಲಕ ಪ್ರವಾಹ ಸ್ಥಿತಿ ನಿಯಂತ್ರಿಸಲು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಪ್ರವಾಹದ ಬಗ್ಗೆ ನಿರಂತರ ನಿಗಾ ಇರಿಸಲಾಗುತ್ತಿದ್ದು, ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವನ್ನು ನೋಡಿಕೊಂಡು ಆಲಮಟ್ಟಿ ಜಲಾಶಯದ ನೀರಿನ ಸ್ಥಿತಿ ಗತಿಯನ್ನು ನಿರ್ಧರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT