ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಸಂಭ್ರಮಕ್ಕೆ ನಾಲತವಾಡ ಪಟ್ಟಣ ಸಜ್ಜು: 24ರಂದು ರಾತ್ರಿ ‘ಕಾಮದಹನ’

Published 21 ಮಾರ್ಚ್ 2024, 5:53 IST
Last Updated 21 ಮಾರ್ಚ್ 2024, 5:53 IST
ಅಕ್ಷರ ಗಾತ್ರ

ನಾಲತವಾಡ: ಶಿವರಾತ್ರಿಯ ನಂತರ ಬರುವ ರಂಗುರಂಗಿನ ಆಧ್ಯಾತ್ಮಿಕ ಹಿನ್ನೆಲೆ ಇರುವ ಗಂಡುಮಕ್ಕಳ ಏಕೈಕ ಹಬ್ಬವೆಂದರೆ ಹೋಳಿ. ಈ ಹಬ್ಬವು ಪ್ರೀತಿ, ಬಣ್ಣ, ಕುಣಿದು ಕುಪ್ಪಳಿಸುವ ಮತ್ತು ಸ್ನೇಹದ ಹಬ್ಬವೆಂದು ಆಚರಿಸಲಾಗುತ್ತದೆ.

ಉತ್ತರ ಕರ್ನಾಟಕದಲ್ಲಿ ಹೋಳಿ', 'ಓಕಳಿ' 'ಗಣ್ಮಕ್ಕಳ', 'ಕಾಮಣ್ಣ'ನ ಹಬ್ಬವೆಂದು ಪ್ರಚಲಿತವಾಗಿದೆ.

ಪಟ್ಟಣದ ವಿವಿಧ ಓಣಿಯ ಕಾಮಣ್ಣ-ರತಿದೇವಿಯರ ರೂಪದಲ್ಲಿರುವ ಪಡ್ಡೆ ಹುಡುಗರ ವೇಷ ಭೂಷಣ ನಯನ ಮನೋಹರ. ಅವರ ಹಿಂದೆ ಬೊಬ್ಬಿಡುವವರ, ಇವರನ್ನು ನೋಡಿ ಆನಂದಿಸುವವರದೇ ಸಂಭ್ರಮ. ಅದಕ್ಕೂ ಮುನ್ನ ಪಟ್ಟಣದ ವಿವಿಧ ಓಣಿಯಲ್ಲಿ ಹಲಗೆಯ 'ಝಡ್ಡು ಝಡ್ಡು ನಕ ನಕ' ಎಲ್ಲೆಡೆ ಪ್ರತಿಧ್ವನಿಸುತ್ತಿದೆ.

ಹೋಳಿ ಹಬ್ಬ ಸಮೀಪಿಸುತ್ತಿದ್ದಂತೆ ನಾಲತವಾಡದಲ್ಲಿ ಹಲಗೆ ವಾದನ ಆರಂಭಗೊಂಡಿದೆ. ಬಣ್ಣದಾಟದವರೆಗೂ ಹಲಗೆ ಬಾರಿಸುವ ಕಲೆ ಮೆರೆಯಲಿದೆ. ಹಬ್ಬದ ಮೊದಲ ಹಂತವಾಗಿ ಹಲಗೆ ವಾದನಕ್ಕೆ ಅಧಿಕೃತ ಒಂದು ವಾರದ ಹಿಂದೆಯೇ ಚಾಲನೆ ದೊರೆತಿದೆ. ಓಣಿ, ಗಲ್ಲಿಗಳಲ್ಲಿ ಮಕ್ಕಳು, ಯುವಕರ ದಂಡು ಬೆಳಗ್ಗೆಯಿಂದ ರಾತ್ರಿಯವರೆಗೂ ಹಲಗೆ ಬಾರಿಸುವ ಸಂಭ್ರಮದಲ್ಲಿದ್ದಾರೆ. ಮನೆಗಳಲ್ಲಿ ಭದ್ರವಾಗಿಟ್ಟಿದ್ದ ಹಲಗೆಗಳು ಹೊರಬಿದ್ದಿವೆ. ಶಾಲೆ ಮುಗಿಸಿ ಬರುವ ಚಿಣ್ಣರು ಹಲಗೆ ಹಿಡಿದು ಗಲ್ಲಿಗಲ್ಲಿಸುತ್ತುತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಹಲಗೆ ಬಾರಿಸುವ ಚಿಣ್ಣರು ಶಾಲೆ ಮುಗಿಸಿ ವಾಪಸ್ಸಾಗುತ್ತಿದ್ದಂತೆ ಮತ್ತೆ ಹಲಗೆ ಕೈಗೆತ್ತಿಕೊಳ್ಳುತ್ತಾರೆ. ಸಂಜೆಯಿಂದ ಆರಂಭವಾಗುವ ಹಲಗೆ ವಾದನ ರಾತ್ರಿ 10ರವರೆಗೂ ನಡೆಯುತ್ತದೆ.

ಸುಮಾರು 10 ದಿನವಾದರೂ ಹಲಗೆ ಬಾರಿಸುವ ಸಂಪ್ರದಾಯವು ಪಟ್ಟಣದಲ್ಲಿದೆ. ಇತರೆ ಊರುಗಳಲ್ಲಿ ಹಬ್ಬಕ್ಕೆ ನಾಲ್ಕಾರು ದಿನವಿದ್ದಾಗ ಹಲಗೆ ವಾದನ ಆರಂಭವಾಗುತ್ತದೆ. ಇಲ್ಲಿಮಾತ್ರ ಹಬ್ಬದ ಮುನ್ಸೂಚನೆಯಾಗಿಯೇ ಹಲಗೆ ಬಾರಿಸುವುದು.

ಅತಿ ಚಿಕ್ಕ ಹಲಗೆಗಳಿಂದ ಹಿಡಿದು ದೊಡ್ಡ ಹಲಗೆಗಳವರೆಗೂ ಚಿಣ್ಣರ ಬಳಿ ಸಂಗ್ರಹವಿದೆ. ಚರ್ಮದ ಹಲಗೆಗಳಿಗಿಂತ ಫೈಬರ್‌ ಹಲಗೆಗಳು ಹೆಚ್ಚಿನವು ಮಕ್ಕಳ ಕೈಯಲ್ಲಿವೆ. ಡ್ರಮ್‌ ಮಾದರಿಯ ಹಲಗೆಗಳನ್ನೂ ಮಕ್ಕಳು ಬಾರಿಸುತ್ತಿದ್ದಾರೆ.

ಕಾಮ ದಹನಕ್ಕಾಗಿ ಇನ್ನು ಕಟ್ಟಿಗೆ ಕದಿಯುವ ಕಾರ್ಯಾಚರಣೆಗೂ ಚಾಲನೆ ದೊರೆಯಲಿದೆ. ಮಾರ್ಚ್ 24ರಂದು ರಾತ್ರಿ ನಡೆಯಲಿರುವ ಕಾಮದಹನಕ್ಕೆ ಚಿಣ್ಣರು ಕಟ್ಟಿಗೆ ಸಂಗ್ರಹಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಚಿಣ್ಣರು, ಯುವಕರ ತಂಡಗಳು ಮೊದಲೇ ಕಟ್ಟಿಗೆಗಳನ್ನು ಗುರುತಿಸಿರುತ್ತಾರೆ. ಇಂತಹ ಸ್ಥಳದಲ್ಲಿ ಇಷ್ಟು ಕಟ್ಟಿಗೆಗಳಿವೆ ಎಂಬ ಸಮೀಕ್ಷೆ ನಡೆಸಿದ ನಂತರ ಕಳ್ಳತನಕ್ಕೂ ತಂತ್ರಗಾರಿಕೆ ಆರಂಭವಾಗುತ್ತದೆ.

ನಾಲತವಾಡದ ಗುಡಿ ಓಣಿಯ ಚಿಣ್ಣರು ಹಲಗೆ ಬಡಿಯುವುದರಲ್ಲಿ ತಲ್ಲಿನರಾಗಿರುವುದು
ನಾಲತವಾಡದ ಗುಡಿ ಓಣಿಯ ಚಿಣ್ಣರು ಹಲಗೆ ಬಡಿಯುವುದರಲ್ಲಿ ತಲ್ಲಿನರಾಗಿರುವುದು

ಕಟ್ಟಿಗೆ ಕದಿಯಲು ಚಿಕ್ಕಮಕ್ಕಳಿಂದ ಹಿಡಿದು ಯುವಕರವರೆಗಿನ ತಂಡಗಳಿರುತ್ತವೆ. ಈ ತಂಡಗಳ ನಾಯಕ ನೀಡುವ ಆದೇಶಗಳನ್ನು ಸದಸ್ಯರೆಲ್ಲರೂ ಪಾಲಿಸುತ್ತಾರೆ. ಕಾಮದಹನಕ್ಕಾಗಿ ನಮ್ಮ ಕಟ್ಟಿಗೆ ಹೋದೀತು ಎಂದು ಮನೆಗಳ ಮುಂದೆ ಜನರೂ ಜಾಗರಣೆ ಮಾಡುತ್ತಾರೆ. ರಾತ್ರಿ ಓಣಿಗಳಲ್ಲಿ ಮಕ್ಕಳ ತಂಡ ಸಂಚರಿಸುತ್ತಿದ್ದರೆ ಕಟ್ಟಿಗೆ ರಕ್ಷಿಸಿಕೊಳ್ಳಲು ಜನರು ಮನೆಗಳ ಹೊರಗೆ ಕುಳಿತುಕೊಳ್ಳುತ್ತಾರೆ. ಹೋಳಿ ಹಬ್ಬಕ್ಕೆ ಇನ್ನೆರಡು ದಿನ ಬಾಕಿಯಿದೆ ಎನ್ನುತ್ತಿರುವಂತೆ ಚಿಣ್ಣರ ತಂಡಗಳು ಜಾಗೃತವಾಗುತ್ತವೆ. ಮನೆ ಯಜಮಾನರ ಕಣ್ಣು ತಪ್ಪಿಸಿ ಕಟ್ಟಿಗೆ ಕದ್ದೊಯ್ಯುತ್ತಾರೆ. ಹೀಗೆ ಕಟ್ಟಿಗೆ ಕದಿಯುವ ಆಚರಣೆ, ಹಲಗೆಗಳ ನಿನಾದಕ್ಕೆ ನಾಲತವಾಡ ಈಗ ಪೂರ್ಣವಾಗಿ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT