ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನ ಅಪ್ಪಟ ಅನುಯಾಯಿ ನಾನು: ಸಿದ್ದರಾಮಯ್ಯ

Published 2 ಫೆಬ್ರುವರಿ 2024, 16:15 IST
Last Updated 2 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ವಿಜಯಪುರ: ನಾನು ಬಸವಾದಿ ಶರಣರ ಅನುಯಾಯಿ. ಬಸವಾದಿ ಶರಣರು ನುಡಿದಂತೆ ನಡೆದರು. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ₹227 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೌಡ್ಯ, ಕಂದಾಚಾರ,  ಜಾತಿ ತಾರತಮ್ಯದ ವಿರುದ್ಧ ವಚನ ಕ್ರಾಂತಿ ನಡೆಯಿತು. ದುಡಿಯುವವರು ಯಾರೋ, ದುಡಿಯದೇ ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು-ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ಸಾಮಾಜಿಕ ಕ್ರಾಂತಿ ನಡೆಯಿತು. ಶರಣರು ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿದ್ದರು ಎಂದರು.

ಶರಣರ ಪ್ರಭಾವದಲ್ಲಿ ಸಮಾಜ ಪೂರ್ಣ ಬದಲಾಗುವ ಮೊದಲೇ ವಚನ ಕ್ರಾಂತಿಗೆ ಅಡ್ಡಗಾಲು ಹಾಕಿದರು. ಆದ್ದರಿಂದ ಇನ್ನೂ ಬಸವಣ್ಣನವರ ಆಶಯದ ‘ಇವ ನಮ್ಮವ ಇವ ನಮ್ಮವ’ ಎನ್ನುವ ಆಶಯ ಈಡೇರದೆ ಜಾತಿ ವ್ಯವಸ್ಥೆ ಗಟ್ಟಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಪ್ಪಾಜಿ ನಾಡಗೌಡರು ಅತ್ಯಂತ ಹಿರಿಯ ಸಭ್ಯ ರಾಜಕಾರಣಿ. ಅವರಿಗೆ ಸಚಿವರಾಗುವ ಅರ್ಹತೆ, ಅನುಭವ ಎರಡೂ ಇದೆ. ಆದರೆ, 34 ಜನರನ್ನು ಮಾತ್ರ ಮಂತ್ರಿ ಮಾಡಲು ಅವಕಾಶ ಇದೆ. ಹೀಗಾಗಿ ಅರ್ಹತೆ ಇದ್ದರೂ ಸಚಿವರನ್ನಾಗಿ ಮಾಡಲು ಸಾಧ್ಯವಾಗಿಲ್ಲ. ಪಕ್ಷ ಅವರನ್ನು ಗುರುತಿಸಿ ನಿಗಮಕ್ಕೆ ಅಧ್ಯಕ್ಷ ಮಾಡಿದ್ದೇವೆ. ಅವರೊಬ್ಬ ಅನುಭವಿ ರಾಜಕಾರಣಿ. ಸರ್ಕಾರಕ್ಕೆ ಅಗತ್ಯ ಸಲಹೆ, ಸೂಚನೆ ನೀಡುತ್ತಾ ಬಂದಿದ್ದಾರೆ ಎಂದರು.

ಬೆಳ್ಳಿ ಕಿರೀಟ ತೊಡಿಸಿ ಸನ್ಮಾನ: 

ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಸಿ.ಎಸ್.ನಾಡಗೌಡ ಅವರನ್ನು ಮುದ್ದೇಬಿಹಾಳ ಪುರಸಭೆಯಿಂದ ಬೆಳ್ಳಿ ಕಿರೀಟ ತೊಡಿಸಿ, ಬೃಹತ್ ಗುಲಾಬಿ ಹಾರ ಹಾಕಿ ಸನ್ಮಾನಿಸಲಾಯಿತು.

ಸ್ವಾಮೀಜಿಗಳಿಂದ ಅಭಿನಂದನೆ:

ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ವಿವಿಧ ಮಠಾಧೀಶರು ಮುಖ್ಯಮಂತ್ರಿಗೆ ಅಭಿನಂದಿಸಿದರು.

ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಸಿ.ಎಸ್. ನಾಡಗೌಡ ಯಶವಂತ ರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಭೀಮನಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ರೋಷನ್ ಇದ್ದರು.

ಮುದ್ದೇಬಿಹಾಳ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ–ಪ್ರಜಾವಾಣಿ ಚಿತ್ರ
ಮುದ್ದೇಬಿಹಾಳ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ–ಪ್ರಜಾವಾಣಿ ಚಿತ್ರ

Highlights - null

Quote - ಯುಕೆಪಿ ಮೂರನೇ ಹಂತದ ಅನುಷ್ಠಾನಕ್ಕೆ ಆದ್ಯತೆ ಸಿಗಬೇಕಿದೆ.‌ ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಿದ್ದಾರೆ  -ಎಂ.ಬಿ.ಪಾಟೀಲ ಸಚಿವ  

Quote - ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಅಂತರರಾಜ್ಯಗಳ ನಡುವಿನ ವ್ಯಾಜ್ಯ ಮುಗಿದ ಮೇಲೆ ವಿಜಯಪುರ ಬಾಗಲಕೋಟೆಗೆ ನೀರು ಒದಗಿಸಲು ನಮ್ಮ ಸರ್ಕಾರ ಪ್ರಥಮ ಆದ್ಯತೆ ‌ನೀಡಲಿದೆ -ಶಿವಾನಂದ ಪಾಟೀಲ ಸಚಿವ 

Quote - ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಶಿಫಾರಸು ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಬಸವಣ್ಣನ ಚಿತ್ರವನ್ನು ಸರ್ಕಾರಿ ಕಚೇರಿಯಲ್ಲಿ ಅಳವಡಿಸಿ ಸಿದ್ದರಾಮಯ್ಯ ಗೌರವ ಸಲ್ಲಿಸಿದ್ದಾರೆ. ಈ ಕಾರಣಕ್ಕೆ ಲಿಂಗಾಯತರು ಅವರ ಋಣದಲ್ಲಿ ಇದ್ದೇವೆ   - ಬಸವಲಿಂಗ ಸ್ವಾಮೀಜಿ ವಿಜಯಮಹಾಂತ ತೀರ್ಥ ಶಿರೂರು ಬಾಗಲಕೋಟೆ

Cut-off box - ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ: ನಾಡಗೌಡ ವಿಜಯಪುರ: ಜಿಲ್ಲೆಯಿಂದ ಎಂ.ಬಿ.ಪಾಟೀಲ ಶಿವಾನಂದ ಪಾಟೀಲ ಅವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಅವರಿಗೆ ರಾಜಕೀಯವಾಗಿ ಏನು ಬೇಕಾದರೂ ಮಾಡಿ ಬೇಷರವಿಲ್ಲ. ಆದರೆ ಬರಗಾಲದಲ್ಲಿ ನಂಬರ್‌ 1 ಸ್ಥಾನದಲ್ಲಿರುವ ಮುದ್ದೇಬಿಹಾಳ ಮತ್ತು ನಂಬರ್‌ 2ನೇ ಸ್ಥಾನದಲ್ಲಿರುವ ಇಂಡಿ ಕ್ಷೇತ್ರವನ್ನು ಅಭಿವೃದ್ಧಿ ವಿಷಯದಲ್ಲಿ ಕಡೆಗಣಿಸಬೇಡಿ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಕ್ಷೇತ್ರಗಳಿಗಿಂತ ಹೆಚ್ಚು ಆದ್ಯತೆ ನೀಡಿ ಎಂದು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ‌ನಿಗಮದ ಅಧ್ಯಕ್ಷರೂ ಆದ ಶಾಸಕ ಸಿ.ಎಸ್.ಅಪ್ಪಾಜಿ ನಾಡಗೌಡ ಅವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದರು.  ದೇಶಕಂಡ ಅಪರೂಪದ ನಾಯಕ ಸಿದ್ದರಾಮಯ್ಯ. ಹಿಂದಿನ ಬಾಗಿಲ ರಾಜಕಾರಣ ಎಂದೂ ಸಿದ್ದರಾಮಯ್ಯ ಮಾಡಿಲ್ಲ. ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಸಿದ್ದರಾಮಯ್ಯ ಅವರಿಗೆ ಮುಂಬರುವ ಚುನಾವಣೆಯಲ್ಲಿ ಪೋತ್ಸಾಹ ನೀಡಬೇಕು ಎಂದು ಆರ್ಥಿಕ ಶಿಸ್ತು ಬಿಜೆಪಿಗೆ ಗೊತ್ತಿಲ್ಲ ರಾಜ್ಯವನ್ನು ಹಾಳು ಗೆಡವಿ ಹೋಗಿದ್ದಾರೆ.‌ ನೀರಾವರಿ ಯೋಜನೆ ಆಗಲಿಲ್ಲ. ಸಿದ್ದರಾಮಯ್ಯ ಅವರಿಗೆ ಆರ್ಥಿಕ ಶಿಸ್ತು ಇದೆ. ನುಡಿದಂತೆ ನಡೆದ ಸರ್ಕಾರ ಅದು ಕಾಂಗ್ರೆಸ್ ಸರ್ಕಾರ ಆಗಿದೆ ಎಂದರು. ದೇಶದ ಪ್ರಧಾನಿ ₹15 ಲಕ್ಷ ಪ್ರತಿಯೊಬ್ಬರ ಅಕೌಂಟ್‌ಗೆ ಹಾಕುತ್ತೇನೆ ಎಂದರು. ಇದುವರೆಗೂ ಹಾಕಿಲ್ಲ. ಬರೀ ಸುಳ್ಳು ಮಾತೆತ್ತಿದರೆ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದರು.   ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳೆಯರು ಕರ್ನಾಟಕದ ಮೂಲೆ ಮೂಲೆ ನೋಡಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನವರೇ 62 ಲಕ್ಷ ಮಹಿಳೆಯರು ಉಚಿತವಾಗಿ ಅಡ್ಡಾಡಿದ್ದಾರೆ. ಮಹಿಳೆಯರ ಭಾವನೆಗೆ ಬೆಲೆ ಸಿಕ್ಕಿದೆ. ಮಹಿಳೆಯರಿಗೆ ಶಕ್ತಿ ಲಭಿಸಿದೆ ಎಂದರು. ಮುದ್ದೇಬಿಹಾಳ ಕ್ಷೇತ್ರದ 36970 ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ₹8 ಕೋಟಿ ಹಣ ಮುದ್ದೇಬಿಹಾಳ ತಾಲ್ಲೂಕಿಗೆ ಹಂಚಿಕೆಯಾಗುತ್ತಿದೆ. ಕ್ಷೇತ್ರದ ಶೇ 93 ಪರ್ಸೆಂಟ್ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಆಗುತ್ತಿದೆ. ಬರ ಇದ್ದರೂ ಜನರ ಮೊಗದಲ್ಲಿ ಮಂದಹಾಸ ಮೂಡಲು ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ. ತಾಯಂದಿರು ಮೂಗು ಮಾಡಿದವರನ್ನು ನೆನಸಿ ಮೂಗು ಬೊಟ್ಟು ಮಾಡಿದವನು ಅಲ್ಲ.‌ ಮುಂಬರುವ ಚುನಾವಣೆಯಲ್ಲಿ ಇದನ್ನು ನೆನಪಿಸಿಟ್ಟುಕೊಳ್ಳಬೇಕು ಎಂದರು.  ಹಿಂದಿನ ಶಾಸಕರು ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗೆ ಈಗಿನ ಶಾಸಕರು ಭೂಮಿ ಪೂಜೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗಾದರೆ ನನ್ನ ಅವಧಿಯಲ್ಲಿ ಈ ಹಿಂದೆ ಆಗಿದ್ದ ಕೆಲಸಕ್ಕೆ ನೀವೇಕೆ  ಭೂಮಿ ಪೂಜೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಪೀರಾಪುರ ಬೂದಿಹಾಳ ಏತ ನೀರಾವರಿ ಯೋಜನೆ ಬಗ್ಗೆ ಪುಸ್ತಕ ಬರೆಯಬಹುದು ಅಷ್ಟಿದೆ. ಈ ಹಿಂದಿನ ಶಾಸಕರಿಗೆ ಯಾವುದೇ ಸಿದ್ಧಾಂತ ಇಲ್ಲ. ನಮ್ಮ ಯೋಜನೆಯನ್ನು ತಮ್ಮದೆಂದು ಹೇಳುತ್ತಾರೆ. ಮುದ್ದೇಬಿಹಾಳದ ಜನರು ದಡ್ಡರಲ್ಲ ಬುದ್ದಿವಂತರು.‌ ದಬ್ಬಾಳಿಕೆ ದೌರ್ಜನ್ಯ ಸಹಿಸುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT