ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ ಪ್ರತ್ಯೇಕ ಜಿಲ್ಲೆಯಾಗಿಸಲು ಪಣ: ಶಾಸಕ ಯಶವಂತರಾಯಗೌಡ ಪಾಟೀಲ

ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ
Last Updated 8 ಫೆಬ್ರುವರಿ 2023, 12:22 IST
ಅಕ್ಷರ ಗಾತ್ರ

ವಿಜಯಪುರ: ಸಿಂದಗಿ, ಆಲಮೇಲ, ದೇವರಹಿಪ್ಪರಗಿ ಮತ್ತು ಚಡಚಣ ತಾಲ್ಲೂಕು ಒಳಗೊಂಡಂತೆ ಇಂಡಿಯನ್ನು ನೂತನ ಜಿಲ್ಲೆಯಾಗಿಸಲು ಪಣ ತೊಟ್ಟಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಇಂಡಿ ಪಟ್ಟಣವು ಜಿಲ್ಲಾ ಕೇಂದ್ರವಾಗಲು ಬೇಕಾದ ಸಕಲ ಮೂಲಸೌಕರ್ಯ ಹೊಂದಿದೆ. ಗಡಿಭಾಗದ ಅಭಿವೃದ್ಧಿ ಹಾಗೂ ಜನರ ಹಿತದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯಾಗುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

ಇಂಡಿ ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಜಿಲ್ಲೆ, ತಾಲ್ಲೂಕುಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಇಂಡಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂದು ಹಕ್ಕೊತ್ತಾಯ ಮಾಡಿದ್ದೇನೆ ಎಂದು ಹೇಳಿದರು.

ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಯಾವುದೇ ಹೋರಾಟ, ಚಳವಳಿ ಮೊರೆ ಹೋಗುವುದಿಲ್ಲ. ಸಂಸದೀಯ ವ್ಯವಸ್ಥೆ ಮೂಲಕವೇ ಒತ್ತಡ ಹೇರುತ್ತೇನೆ. ಭವಿಷ್ಯದಲ್ಲಿ ಇಂಡಿ ಜಿಲ್ಲೆ ರಚನೆಯಾಗದಿದ್ದರೇ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದರು.

ಶೀಘ್ರದಲ್ಲೇ ನಗರಸಭೆ:

ಜನಸಂಖ್ಯೆ ಆಧಾರದ ಮೇಲೆ ಇಂಡಿ ಪುರಸಭೆ ಶೀಘ್ರದಲ್ಲೇ ನಗರಸಭೆಯಾಗಿ ಮೇಲ್ದರ್ಜೆಗೆ ಏರಲಿದೆ ಎಂದು ಹೇಳಿದರು.

ಅವಶ್ಯಕತೆ ಇಲ್ಲ:

ಕಾಂಗ್ರೆಸ್‌ನಲ್ಲಿ ನಾನು ರಾಜಕಾರಣ ಆರಂಭಿಸಿರುವುದು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಬೇರೆ ಪಕ್ಷಗಳಿಗೆ ಹೋಗುತ್ತೇನೆ ಎಂಬುದು ಸುಳ್ಳು, ಜಾತ್ಯತೀತ ನಿಲುವಿನವನಾದ ನಾನು ಬೇರೆ ಪಕ್ಷಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.

ಕಾಂಗ್ರೆಸ್‌ ಭರವಸೆ:

200 ಯುನಿಟ್‌ ವರೆಗೆ ಉಚಿತ ವಿದ್ಯುತ್‌, ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು ₹2 ಸಾವಿರ ನೀಡುವ ಕಾಂಗ್ರೆಸ್‌ ಪ್ರಣಾಳಿಕೆ ಜನಪರವಾಗಿದೆ. ಚುನಾವಣೆಯಲ್ಲಿ ಮತದಾರರ ಹತ್ತಿರಹೋಗಲು ಅನುಕೂಲವಾಗಿದೆ. ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಮತ್ತು ದೇಶದಲ್ಲಿ ಶಾಂತಿ, ಸಹಬಾಳ್ವೆ, ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.

ಚುನಾವಣೆ ನಡೆಯಲಿ:

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಆಗಿ ಮೂರು ತಿಂಗಳಾದರೂ ಇದುವರೆಗೂ ಮೇಯರ್‌, ಉಪ ಮೇಯರ್‌ ಆಯ್ಕೆಯಾಗಿಲ್ಲ. ಅಲ್ಲದೇ, ತಾ.ಪಂ., ಜಿ.ಪಂ. ಚುನಾವಣೆಯೂ ನಡೆದಿಲ್ಲ. ಕುಂಟುನೆಪವೊಡ್ಡಿ ಚುನಾವಣೆ ನಡೆಸದಿರುವುದು ಖಂಡನೀಯ ಎಂದು ಆಗ್ರಹಿಸಿದರು.

ಗಂಜಿಕೇಂದ್ರ ಆಗದಿರಲಿ:

ಲಿಂಬೆ ಅಭಿವೃದ್ಧಿ ಮಂಡಳಿಗೆ ತೋಟಗಾರಿಕೆ ಇಲಾಖೆ ಸಚಿವರೇ ಅಧ್ಯಕ್ಷರಾಗಬೇಕು ಎಂದು ಬೈಲಾ ರೂಪಿಸಲಾಗಿದೆ. ಹಾಗಿದ್ದೂ ಬಿಜೆಪಿ ಸರ್ಕಾರ ಪಕ್ಷದ ಮುಖಂಡರಿಗೆ ಅವಕಾಶ ಮಾಡಿಕೊಟ್ಟಿದೆ. ಲಿಂಬೆ ಅಭಿವೃದ್ಧಿ ಮಂಡಳಿ ಯಾವುದೇ ಕಾರಣಕ್ಕೂ ರಾಜಕೀಯ ಗಂಜಿಕೇಂದ್ರವಾಗಬಾರದು ಎಂದು ಅವರು ಹೇಳಿದರು.

ಪ್ರಣಾಳಿಕೆ ಆಗದಿರಲಿ:

ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಾಗಬಾರದು. ಜನಪರ, ಅಭಿವೃದ್ಧಿ ಪರವಾದ ಬಜೆಟ್‌ ಮಂಡಿಸಬೇಕು ಎಂದರು.

ಫೆ.11ಕ್ಕೆ ಇಂಡಿಗೆ ‘ಬಸ್‌ ಯಾತ್ರೆ’

ವಿಜಯಪುರ: ವಿಧಾನಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಂಚರಿಸುತ್ತಿರುವ ‘ಪ್ರಜಾಧ್ವನಿ’ ಬಸ್‌ ಯಾತ್ರೆ ಫೆ.11ರಂದು ಮಧ್ಯಾಹ್ನ 2ಕ್ಕೆ ಇಂಡಿಗೆ ಬರಲಿದ್ದು, ಪಟ್ಟಣದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಅದೇ ದಿನ ಬೆಳಿಗ್ಗೆ ಸಿಂದಗಿ, ಸಂಜೆ ಚಡಚಣದಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಪಕ್ಷದ ಮುಖಂಡರ ನಡುವಿನ ವ್ಯತ್ಯಾಸ, ಭಿನ್ನಾಭಿಪ್ರಾಯ ಬದಿಗಟ್ಟಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಆದ್ಯತೆ ನೀಡಲಾಗುವುದು

–ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT