ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಅನ್ಯಾಯ: ಬಸನಗೌಡ ಪಾಟೀಲ ಯತ್ನಾಳ ಆರೋಪ

Last Updated 30 ಅಕ್ಟೋಬರ್ 2020, 15:01 IST
ಅಕ್ಷರ ಗಾತ್ರ

ವಿಜಯಪುರ: ‘ಉತ್ತರ ಕರ್ನಾಟಕದ ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ಕೇವಲ ₹10 ಸಾವಿರ ನೀಡಲಾಗಿದೆ. ಆದರೆ, ದಕ್ಷಿಣ ಕರ್ನಾಟಕದ ಸಂತ್ರಸ್ತರಿಗೆ ತಲಾ ₹25 ಸಾವಿರ ನೀಡಿದ್ದಾರೆ. ನಮ್ಮದೇ ಮಂತ್ರಿಗಳು ದಕ್ಷಿಣ ಕರ್ನಾಟಕದಲ್ಲಿ ಓಡಾಡಿ ಪರಿಹಾರ ಹಂಚುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

‌ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ₹27 ಲಕ್ಷಅನುದಾನದಲ್ಲಿ ನಿರ್ಮಿಸಲಾದ ಹೊರರೋಗಿಗಳ ನೋಂದಣಿ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.

‘ನನಗೆ ಮೊದಲು ನನ್ನ ಜನರ ಹಿತ ಮುಖ್ಯ. ಅದಕ್ಕಾಗಿ ಧ್ವನಿ ಎತ್ತಲು ಸಿದ್ಧ. ನನ್ನ ಬಗ್ಗೆ ಯಾರು ಏನು ಲೆಟರ್ ಬರೀತಾರೋ ಬರೀಲಿ. ನಮ್ಮ ಕ್ಷೇತ್ರಕ್ಕೆ ಅನ್ಯಾಯವಾದರೆ ನಾವು ಕೇಳುವವರೆ. ಅದು ಮುಖ್ಯಮಂತ್ರಿಯಾದರೂ ಸರಿ’ ಎಂದು ಹೇಳಿದರು.

‘ನನ್ನನ್ನು ಮಂತ್ರಿ ಮಾಡಿ ಎಂದು ಕೇಳಿಲ್ಲ. ನಾನು ಅಭಿವೃದ್ಧಿ ಬಗ್ಗೆ ಕೇಳಿದ್ದೇನೆ. ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಪಕ್ಷ ವಿರೋಧಿ ಎಂದರೆ ಅದೊಂದು ದುರ್ದೈವದ ಸಂಗತಿ’ ಎಂದರು.

‘ವಿಜಯಪುರ ನಗರದ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರ ನೀಡಿದ್ದ ₹125 ಕೋಟಿ ಮರಳಿ ಹೋಗಿತ್ತು. ನನ್ನ ಹೋರಾಟದ ಫಲವಾಗಿ ಇದೀಗ ₹195 ಕೋಟಿಗಳಿಗೂ ಅಧಿಕ ಅನುದಾನಕ್ಕೆ ಅನುಮೋದನೆ ದೊರೆತಿದೆ. ವಿಜಯಪುರ ಮಾತ್ರವಲ್ಲ ರಾಜ್ಯದ ಎಲ್ಲ ಪಾಲಿಕೆಗಳಿಗೆ ಒಟ್ಟು ₹1300 ಕೋಟಿ ಸಿಕ್ಕಿದೆ’ ಎಂದರು.

‘ಸಾಕಷ್ಟು ಬಾರಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದರೂ ಅನುದಾನ ಸಿಕ್ಕಲಿಲ್ಲ. ನನ್ನ ಹೋರಾಟದ ಫಲವಾಗಿ ರಾಜ್ಯದ ಎಲ್ಲ ನಗರಸಭೆಗಳಿಗೆ ಅನುದಾನ ಸಿಗುವಂತಾಯಿತು’ ಎಂದು ಹೇಳಿದರು.

ನಗರದಾದ್ಯಂತ ರಸ್ತೆ, ಒಳ ಚರಂಡಿ ವ್ಯವಸ್ಥೆ, ಮಹಿಳಾ ವಿಶ್ವವಿದ್ಯಾನಿಲಯದಿಂದ ಗೋದಾವರಿ ಹೋಟೆಲ್‌ವರೆಗಿನ ರಸ್ತೆ ಮತ್ತು ಗಾಂಧಿವೃತ್ತದಿಂದ ಗೋಳಗುಮ್ಮಟ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

₹ 2 ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಪುಟ್ಟರಾಜ ಗವಾಯಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರ ಕಟ್ಟಡ ನಿರ್ಮಾಣ ಮತ್ತು ಜಿಲ್ಲಾಸ್ಪತ್ರೆ ಹಿಂದೆ ಖಾಲಿ ಇರುವ ಭೂಮಿಯನ್ನು ಅಭಿವೃದ್ಧಿಗೊಳಿಸುವ ₹ 20 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ಸಹ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT