ಮಂಗಳವಾರ, ಜನವರಿ 26, 2021
28 °C

ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಸಿಬಿ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಣ್ಣ ಅವರು ಕೈಗಾರಿಕೋದ್ಯಮಿಯೊಬ್ಬರಿಂದ ಲಂಚ ತೆಗೆದುಕೊಳ್ಳುತ್ತಿದ್ದಾಗ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಲಂಚ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. 

ವಿಜಯಕುಮಾರ ಮನ್ನೂರ ಎಂಬುವವರು ತಮ್ಮ ಪತ್ನಿ ಭಾಗ್ಯಶ್ರೀ ಎಂಬುವವರ  ಹೆಸರಿನಲ್ಲಿ ಕೆಐಡಿಬಿ ವ್ಯಾ‍ಪ್ತಿಯಲ್ಲಿರುವ ನಂದಿ ಅಗ್ರೋ ಫುಡ್‌ ಇಂಡಸ್ಟ್ರೀಸ್‌(ಶುದ್ಧ ಕುಡಿಯುವ ನೀರಿನ ಘಟಕ) ಅನ್ನು ಸಂಗನಗೌಡ ಪಾಟೀಲ ಎಂಬುವವರಿಂದ ಖರೀದಿ ಮಾಡಿದ್ದಾರೆ.  ಇದರ ಮೇಲೆ ₹ 20.87 ಲಕ್ಷ ಸರ್ಕಾರದಿಂದ ಸಹಾಯಧನ ಮಂಜೂರಾಗಿದೆ. ಈ ಹಣವನ್ನು ನೀಡದೆ ತಡೆಹಿಡಿಯಬೇಕು ಎಂದು ಸಿದ್ದಣ್ಣ ಸಂಬಂಧಿಸಿದ ಬ್ಯಾಂಕಿಗೆ ಪತ್ರ ಬರೆದಿದ್ದಾರೆ.  

ಅಲ್ಲದೇ, ಈ ಹಣ ಬಿಡುಗಡೆ ಮಾಡಿಸಲು ತಮಗೆ ₹ 1.46 ಲಕ್ಷ  ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ವಿಜಯಕುಮಾರ್‌ ಮನ್ನೂರ  ಅವರು ಎಸಿಬಿಗೆ ದೂರು ನೀಡಿದ್ದರು. 

ಎಸಿಬಿ ಪೊಲೀಸ್‌ ಉಪಾಧೀಕ್ಷಕ ಎಂ.ಕೆ.ಗಂಗಲ್‌ ನೇತೃತ್ವದ ತಂಡವು, ಸಿದ್ದಣ್ಣ ಅವರು ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿ ಸಾಕ್ಷಿ ಸಮೇತ ಬಂಧಿಸಿದ್ದಾರೆ.

ಎಸಿಬಿ ಸಿಬ್ಬಂದಿಗಳಾದ ಹರಿಶ್ಚಂದ, ಪರಮೇಶ್ವರ, ಜಿ.ಕವಟಗಿ, ಮಹೇಶ ಪೂಜಾರಿ, ಅಶೋಕ ಸಿಂಧೂರ,  ಸುರೇಶ ಜಾಲಗೇರಿ, ಸದಾಶಿವ ಕೊಟ್ಯಾಳ, ಮಾಳಪ್ಪ ಸಲಗೊಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು