ವಿಜಯಪುರ: ಬೆಳ್ಳಿ ತೆರೆಗೆ ಕಾಖಂಡಕಿ ‘ಮಹಿಪತಿ ದಾಸ’

ವಿಜಯಪುರ: ಜಿಲ್ಲೆಯ ಕಾಖಂಡಿಕಿಯ ಪ್ರಸಿದ್ಧ ದಾಸರಾದ ‘ಮಹಿಪತಿ ದಾಸರ’ ಸಿನಿಮಾ ಮಾಡುತ್ತಿರುವುದಾಗಿ ನಿರ್ದೇಶಕ ಡಾ.ಮಧುಸೂದನ ಹವಾಲ್ದಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಾಂಬುಜ ಬ್ಯಾನರ್ ಅಡಿ ‘ದಾಸ ಮಹಿಪತಿ’ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದರು.
30 ದಿನಗಳಲ್ಲಿ ಈ ಸಿನಿಮಾ ಮಾಡಲು ಉದ್ದೇಶಿಸಲಾಗಿದೆ. ವಿಜಯಪುರ, ಬಾಗಲಕೋಟೆ, ಬೀಳಗಿ, ಆನೆಗುಂದಿ, ಹಂಪಿ, ರಾಯಚೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸ್ಥಳೀಯ ನಟರಿಗೆ ಆದ್ಯತೆ ನೀಡಲಾಗುವುದು ಎಂದರು.
ವಿದ್ವಾಂಸ ಕೃಷ್ಣಾ ಕೊಲ್ಹಾರ ಕುಲಕರ್ಣಿ ಅವರ ಸಲಹೆ, ಮಾರ್ಗದರ್ಶನ ಹಾಗೂ ಮಹಿಪತಿ ದಾಸರ ಕುಟುಂಬದವರ ಸಹಕಾರದೊಂದಿಗೆ ಸಿನಿಮಾ ನಿರ್ಮಾಣವಾಗುತ್ತಿರುವುದಾಗಿ ಹೇಳಿದರು.
ದಾಸರ ಸಿನಿಮಾ ಮಾಡಿದರೆ ನಷ್ಟವಾಗುತ್ತದೆ. ಮನೆ, ಮಠ ಮಾರಿಕೊಳ್ಳಬೇಕಾಗುತ್ತದೆ, ಪ್ರೇಕ್ಷಕರು ನೋಡುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ನಾನು ಇದುವರೆಗೆ ಮಾಡಿರುವ ದಾಸರ ಸಿನಿಮಾಗಳು ಯಶಸ್ವಿಯಾಗಿದೆ ಎಂದರು.
ಈಗಾಗಲೇ ಪ್ರಸನ್ನ ದಾಸ, ವಿಜಯ ದಾಸ ಮತ್ತು ಜಗನ್ನಾಥ ದಾಸರ ಕುರಿತು ಸಿನಿಮಾ ಮಾಡುವ ಮೂಲಕ ಅಭೂತಯಪೂರ್ವ ಯಶಸ್ಸು, ಕೀರ್ತಿ ಗಳಿಸಿದ್ದು, ಇದೀಗ ಕಾಖಂಡಕಿಯ ಮಹಿಪತಿ ದಾಸರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಪುರಂದರದಾಸ, ಕನಕದಾಸರ ಸಿನಿಮಾ ತೆರೆಗೆ ಬಂದು ಸುಮಾರು 60 ವರ್ಷಗಳ ಬಳಿಕ ದಾಸರ ಸಂಬಂಧಿಸಿದ ಚಿತ್ರವೊಂದು ತೆರೆ ಮೇಲೆ ಬರುತ್ತಿರುವುದು ವಿಶೇಷ ಎಂದರು.
ಅನಂತ ಕುಲಕರ್ಣಿ ರಾಘ ಸಂಯೋಜನೆ, ವಿಜಯಕೃಷ್ಣ ಅವರ ಸಾರಥ್ಯದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಸಂಶೋಧಕ ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ ಮಾತನಾಡಿ, ವಿಜಯಪುರ ಜಿಲ್ಲೆಯವರೇ ಆದ ಮಹಿಪತಿ ದಾಸರು ಅಪರೂಪದ ಕೀರ್ತನೆ ಬರೆದವರು. ಅವರು ಆದಿಲ್ ಶಾಹಿ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿದ್ದರು. ಒಬ್ಬ ಮುಸ್ಲಿಂ ಸಂತನ ಪ್ರಭಾವದಿಂದ ಅಧಿಕಾರವನ್ನು ತ್ಯಜಿಸಿ, ಇದ್ದ ಆಸ್ತಿಯನ್ನು ದಾನ ಮಾಡಿ, ದಾಸರಾಗಿ ಸಮಾಜ ಸೇವೆಗೆ ಜೀವನ ಮುಡುಪಾಗಿಟ್ಟಿದ್ದರು ಎಂದರು.
ಕನ್ನಡ, ಮರಾಠಿ, ಪರ್ಶಿಯನ್ ಸೇರಿದಂತೆ ಮಿಶ್ರ ಭಾಷೆಯಲ್ಲಿ ಒಂದು ಸಾವಿರ ಕೀರ್ತನೆ ರಚಿಸಿದ್ದಾರೆ. ಅಂತ ದಾಸರ ಬಗ್ಗೆ ಸಿನಿಮಾ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಹಿಪತಿ ದಾಸರ ಜೀವನ ಪ್ರತಿ ಹಂತದಲ್ಲಿ ತಿರುವು ಪಡೆಯುತ್ತಾ ಹೋಗಿದೆ. ಶ್ರೇಷ್ಠ ಸಂತನಾಗಿ ಮುಸ್ಲಿಂ, ಬ್ರಾಹ್ಮಣೇತರ, ಬ್ರಾಹ್ಮಣ ಸಮಾಜ ಸೇರಿದಂತೆ ಎಲ್ಲ ಸಮಾಜದವರಿಂದ ಗೌರವ ಸಂಪಾದಿಸಿದ್ದರು ಎಂದರು.
ಮಹಿಪತಿ ದಾಸರ ವಂಶಸ್ಥರಾದ ಸುರೇಶ ಹರಿದಾಸ, ಆನಂದ ಜೋಶಿ, ರಾಘಣ್ಣ, ಅಂಬಾದಾಸ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
***
ಶರಣ ಸಾಹಿತ್ಯ, ದಾಸ ಸಾಹಿತ್ಯವನ್ನು ಜಗತ್ತು ಎಂದೂ ಮರೆಯಬಾರದು. ದಾಸರು, ಶರಣರನ್ನು ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ
–ಡಾ. ಮಧುಸೂದನ ಹವಾಲ್ದಾರ್, ನಿರ್ದೇಶಕ
***
ಮತೀಯ ಗಲಭೆ ಇಲ್ಲದೇ 200 ವರ್ಷ ಆದಿಲ್‌ಶಾಹಿಗಳು ಬಿಜಾಪುರದಲ್ಲಿ ಆಳ್ವಿಕೆ ನಡೆಸಿದ್ದರು. ಇದಕ್ಕೆ ಕಾರಣ ಮಹಿಪತಿ ಅವರಂತ ದಾಸರು, ವಿದ್ವಾಂಸರು ಕಾರಣ
–ಪ್ರೊ. ಕೃಷ್ಣ ಕೊಲ್ಹಾರ ಕುಲಕರ್ಣಿ, ಸಂಶೋಧಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.